ಬುಧವಾರ, ಜುಲೈ 28, 2021
29 °C
ರಾಂಚಿಯ ಫಾರ್ಮ್‌ನಲ್ಲಿ ಬಾಳೆ, ಪಪ್ಪಾಯ ಬೆಳೆಯುತ್ತಿರುವ ಧೋನಿ

ಸಾವಯವ ಕೃಷಿಯತ್ತ ಧೋನಿ; ಜಾಹೀರಾತು ಒಪ್ಪಂದಗಳಿಗಿಲ್ಲ ಸಹಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಮಂಗಳವಾರ 39ನೇ ಜನ್ಮದಿನ ಆಚರಿಸಿಕೊಂಡ ಕ್ರಿಕೆಟಿಗ ಮಹೇಂದ್ರಸಿಂಗ್ ಧೋನಿ ಈಗ ಸಾವಯವ ಕೃಷಿಯಲ್ಲಿ ತೊಡಗಿದ್ದಾರೆ.

ಅಲ್ಲದೇ ಯಾವುದೇ ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕದಿರಲೂ ನಿರ್ಧರಿಸಿದ್ದಾರೆ.  ಶೀಘ್ರದಲ್ಲಿ ಅವರು ಹೊಸ  ಬ್ರ್ಯಾಂಡ್‌ನ ಸಾವಯವ ಗೊಬ್ಬರದ ಉತ್ಪಾದನೆಯನ್ನೂ ಆರಂಭಿಸಲಿದ್ದಾರಂತೆ.

ಈ ಕುರಿತು ಮಾಹಿತಿ ನೀಡಿರುವ ಅವರ ಬಾಲ್ಯದ ಗೆಳೆಯ ಮತ್ತು ವ್ಯವಸ್ಥಾಪಕ ಮಿಹಿರ್ ದಿವಾಕರ್, ’ದೇಶಭಕ್ತಿಯು ಧೋನಿಯ ರಕ್ತದಲ್ಲಿಯೇ ಇದೆ. ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದ ಅವರು ಗೌರವ ಹುದ್ದೆಗೆ ಗೌರವ ನೀಡಿದ್ದರು. ಅವರಿಗೆ ಮೊದಲಿನಿಂದಲೂ ಕೃಷಿಯ ಮೇಲೆ ಒಲವಿತ್ತು. ಈಗ ತಮ್ಮದೇ 40–50 ಎಕರೆ ಭೂಮಿಯಲ್ಲಿ ಸಾವಯವ ತೋಟ ಮಾಡುವತ್ತ ಹೆಜ್ಜೆಯಿಟ್ಟಿದ್ದಾರೆ. ಪಪ್ಪಾಯ, ಬಾಳೆಹಣ್ಣು ಬೆಳೆಯುತ್ತಿದ್ದಾರೆ‘ ಎಂದಿದ್ದಾರೆ.

’ಧೋನಿ ಜಾಹೀರಾತುಗಳಲ್ಲಿ ನಟಿಸುವ ಒಪ್ಪಂದಗಳಿಗೆ ಸಹಿ ಹಾಕುವುದನ್ನು ಸ್ಥಗಿತಗೊಳಿಸಿದ್ದಾರೆ. ಕೊರೊನಾ ಸಂಕಷ್ಟ ದೂರವಾಗಿ ಜನಜೀವನವು ಸಜಹಸ್ಥಿತಿಗೆ ಬರುವವರೆಗೂ ಯಾವುದೇ ವಾಣಿಜ್ಯ ವ್ಯವಹಾರಗಳ ಒಪ್ಪಂದ ಬೇಡ ಎಂದಿದ್ದಾರೆ‘ ಎಂದು ಮಿಹಿರ್ ಹೇಳಿದ್ದಾರೆ. ಧೋನಿಯ ಆರ್ಕಾ ಸ್ಪೋರ್ಟ್ಸ್‌ ಮತ್ತು ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿಯೂ ಮಿಹಿರ್ ಕಾರ್ಯನಿರ್ವಹಿಸುತ್ತಿದ್ದಾರೆ.

’ಸಾವಯವ ಗೊಬ್ಬರ ಮತ್ತು ಪರಿಸರಸ್ನೇಹಿ ಕೃಷಿಯ ಕುರಿತು ಮಾರ್ಗದರ್ಶನ ನೀಡುವ ತಜ್ಞರು ಮತ್ತು ವಿಜ್ಞಾನಿಗಳ ತಂಡ ನಮಗೆ ಸಲಹೆ ನೀಡುತ್ತಿದೆ. ಮುಂದಿನ ಎರಡು, ಮೂರು ತಿಂಗಳ ಅವಧಿಯಲ್ಲಿ ಜೈವಿಕ ಗೊಬ್ಬರವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತೇವೆ‘ ಎಂದಿದ್ದಾರೆ.

‘ಈ ಬಾರಿಯ ಜನ್ಮದಿನವನ್ನು ಮಹಿ, ತಮ್ಮ ಕುಟುಂಬದೊಂದಿಗೆ ಆಚರಿಸಿಕೊಂಡಿದ್ದಾರೆ. ಲಾಕ್‌ಡೌನ್ ಆದಾಗಿನಿಂದಲೂ ಅವರು ತಮ್ಮ ಫಾರ್ಮ್‌ಹೌಸ್‌ನಲ್ಲಿದ್ದಾರೆ. ಜನ್ಮದಿನ ಆಚರಣೆ ಸರಳವಾಗಿತ್ತು. ನಾವು ಒಳ್ಳೆಯ ಸ್ನೇಹಿತರು. ಅವರ ಕ್ರಿಕೆಟ್ ಮತ್ತು ನಿವೃತ್ತಿಯ ಕುರಿತು ಹೆಚ್ಚು ಚರ್ಚೆ ಮಾಡುವುದಿಲ್ಲ. ಅದು ಅವರಿಗೇ ಬಿಟ್ಟಿದ್ದು‘ ಎಂದು ಮಿಹಿರ್ ಸ್ಪಷ್ಟಪಡಿಸಿದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು