ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌ಬಾಲ್‌ ಕ್ರಿಕೆಟ್‌ನಿಂದ ಕಲಿತ ವಿದ್ಯೆ

ಚುರುಕಿನ ವಿಕೆಟ್‌ ಕೀಪಿಂಗ್‌ನ ಗುಟ್ಟು ಬಿಚ್ಚಿಟ್ಟ ಮಹೇಂದ್ರ ಸಿಂಗ್‌ ಧೋನಿ
Last Updated 2 ಮೇ 2019, 19:45 IST
ಅಕ್ಷರ ಗಾತ್ರ

ಚೆನ್ನೈ: ‘ಭಾರತ ತಂಡಕ್ಕೆ ಆಯ್ಕೆಯಾಗುವ ಮುನ್ನ ಟೆನಿಸ್‌ಬಾಲ್‌ ಕ್ರಿಕೆಟ್‌ನಲ್ಲಿ ಹೆಚ್ಚು ತೊಡಗಿಕೊಂಡಿದ್ದೆ. ವಿಕೆಟ್‌ ಹಿಂದೆ ಚುರುಕಿನ ಸಾಮರ್ಥ್ಯ ತೋರಲು ಇದು ಸಹಕಾರಿಯಾಯಿತು’...

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ, ಚುರುಕಿನ ವಿಕೆಟ್‌ ಕೀಪಿಂಗ್‌ನ ಗುಟ್ಟು ಬಿಚ್ಚಿಟ್ಟಿದ್ದು ಹೀಗೆ.

‘ಟೆನಿಸ್‌ಬಾಲ್‌ ಕ್ರಿಕೆಟ್‌ನಿಂದ ಹಲವು ಕೌಶಲಗಳನ್ನು ಕಲಿತೆ. ಕ್ರಮೇಣ ಅವುಗಳನ್ನು ಮೈಗೂಡಿಸಿಕೊಂಡೆ. ತಪ್ಪುಗಳು ಎಲ್ಲರಿಂದಲೂ ಆಗುತ್ತವೆ. ಅವುಗಳು ಹೊಸ ಪಾಠ ಕಲಿಸುತ್ತವೆ’ ಎಂದರು.

ಬುಧವಾರ ನಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ಎದುರಿನ ಪಂದ್ಯದಲ್ಲಿ ಧೋನಿ 22 ಎಸೆತಗಳಲ್ಲಿ ಅಜೇಯ 44ರನ್‌ ಗಳಿಸಿ ಆತಿಥೇಯರ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಚೆಪಾಕ್‌ ಅಂಗಳದಲ್ಲಿ ಈ ಬಾರಿ ಚೆನ್ನೈ ತಂಡ ಆಡಿದ ಕೊನೆಯ ಲೀಗ್‌ ಪಂದ್ಯ ಇದಾಗಿತ್ತು.

ಟ್ರೆಂಟ್‌ ಬೌಲ್ಟ್‌ ಹಾಕಿದ ಅಂತಿಮ ಓವರ್‌ನಲ್ಲಿ ಧೋನಿ, 20 ರನ್‌ ಗಳಿಸಿದ್ದರು. ಕೊನೆಯ ಎರಡು ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿ ಅಭಿಮಾನಿಗಳನ್ನು ರಂಜಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಅವರು ‘ಪಿಚ್‌ನ ಗುಣ ಅರಿಯುವ ಉದ್ದೇಶ ನನ್ನದಾಗಿತ್ತು. ಹೀಗಾಗಿ ಶುರುವಿನಲ್ಲಿ ದೊಡ್ಡ ಹೊಡೆತಗಳಿಗೆ ಕೈಹಾಕಲಿಲ್ಲ. ಆಟಕ್ಕೆ ಕುದುರಿಕೊಂಡ ನಂತರ ರಟ್ಟೆ ಅರಳಿಸಿ ಆಡಬಹುದು ಎಂಬುದು ಚೆನ್ನಾಗಿ ಗೊತ್ತಿತ್ತು. ಅಂತಿಮ ಓವರ್‌ನಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಿದೆ’ ಎಂದರು.

‘ಚೆಪಾಕ್ ಅಂಗಳ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುತ್ತಿತ್ತು. ಇದನ್ನು ಅರಿತು ಉತ್ತಮ ಲೆಂಗ್ತ್‌ನಲ್ಲಿ ಚೆಂಡು ಹಾಕಲು ಪ್ರಯತ್ನಿಸಿದೆ. ನನ್ನ ಯೋಜನೆ ಫಲ ನೀಡಿತು’ ಎಂದು ಚೆನ್ನೈ ತಂಡದ ರವೀಂದ್ರ ಜಡೇಜ ಹೇಳಿದರು.

ಡೆಲ್ಲಿ ಎದುರಿನ ಪಂದ್ಯದಲ್ಲಿ ಮೂರು ಓವರ್‌ ಬೌಲ್‌ ಮಾಡಿದ್ದ ಆಲ್‌ರೌಂಡರ್‌ ಜಡೇಜ, ಕೇವಲ ಒಂಬತ್ತು ರನ್‌ ಬಿಟ್ಟುಕೊಟ್ಟು ಮೂರು ವಿಕೆಟ್‌ ಉರುಳಿಸಿದ್ದರು.

‘ಚೆನ್ನೈ ವಿರುದ್ಧದ ಹೋರಾಟದಲ್ಲಿ ಕೇವಲ 99ರನ್‌ಗಳಿಗೆ ಆಲೌಟ್‌ ಆಗುತ್ತೇವೆ ಎಂದು ಖಂಡಿತವಾಗಿಯೂ ಭಾವಿಸಿರಲಿಲ್ಲ. ಕಗಿಸೊ ರಬಾಡ ಶ್ರೇಷ್ಠ ಬೌಲರ್‌. ‘ಡೆತ್‌ ಓವರ್‌’ಗಳಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್‌ ಮಾಡುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಅವರ ಅನುಪಸ್ಥಿತಿ ತುಂಬಾ ಕಾಡಿತು. ಲೀಗ್‌ ಹಂತದಲ್ಲಿ ಇನ್ನೊಂದು ಪಂದ್ಯ ಆಡಬೇಕಿದ್ದು ಅದರಲ್ಲಿ ಗೆದ್ದು ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರ ಎರಡರೊಳಗೆ ಸ್ಥಾನ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೇವೆ’ ಎಂದು ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ ಶ್ರೇಯಸ್‌ ಅಯ್ಯರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT