ಶನಿವಾರ, ಜನವರಿ 18, 2020
26 °C
ಟೆಸ್ಟ್‌ ಕ್ರಿಕೆಟ್

ಬಳಸಲು ಆಗದಿದ್ದರಷ್ಟೇ ಡೈಪರ್ ಬದಲಿಸಬೇಕು: ಐಸಿಸಿ ಪ್ರಸ್ತಾವಕ್ಕೆ ಸೆಹ್ವಾಗ್ ವಿರೋಧ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಐಸಿಸಿ ಪ್ರಸ್ತಾಪಿಸಿರುವ ನಾಲ್ಕು ದಿನಗಳ ಟೆಸ್ಟ್‌ ಯೋಜನೆಯನ್ನು ವಿರೋಧಿಸಿರುವ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರ ನಿಲುವನ್ನು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಸಮರ್ಥಿಸಿಕೊಂಡಿದ್ದಾರೆ.

ಬಿಸಿಸಿಐ ಆಯೋಜಿಸುವ ಮನ್ಸೂರ್‌ ಅಲಿಖಾನ್‌ ಪಟೌಡಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾನುವಾರ ರಾತ್ರಿ ಮಾತನಾಡಿರುವ ಸೆಹ್ವಾಗ್‌, ‘ಬದಲಾವಣೆಗಳನ್ನು ಯಾವಾಗಲೂ ಬೆಂಬಲಿಸುವ ನಾನು, ಟೆಸ್ಟ್‌ ಕ್ರಿಕೆಟ್‌ ಬದಲಾವಣೆ ಕುರಿತು ಆಲೋಚಿಸಿಯೇ ಇಲ್ಲ’ ಎಂದು ಹೇಳಿದ್ದಾರೆ.

‘ಪೋಷಾಕಿನ ಮೇಲೆ ಆಟಗಾರರ ಹೆಸರು, ಸಂಖ್ಯೆಗಳನ್ನು ನಮೂದಿಸುವುದು, ಪಿಂಕ್‌ ಬಾಲ್‌ ಟೆಸ್ಟ್‌ನಂತಹ ಹೊಸ ಆಲೋಚನೆಗಳು ಉತ್ತಮವಾದವು. ಆದರೆ, ಡೈಪರ್‌ ಮತ್ತು ಟೆಸ್ಟ್‌ ಕ್ರಿಕೆಟ್‌ ಅನ್ನು ಅವುಗಳ ಅಂತ್ಯವಾದಾಗ, ಅಂದರೆ ಮುಂದುವರಿಸುವುದು ಅಸಾಧ್ಯ ಎನಿಸಿದಾಗ ಮಾತ್ರವೇ ಬದಲಿಸಬೇಕು. ಐದು ದಿನಗಳ ಕ್ರಿಕೆಟ್‌ ಇನ್ನೂ ಸತ್ತಿಲ್ಲ. ಟೆಸ್ಟ್‌ ಕ್ರಿಕೆಟ್‌ ಎಂಬುದು 143 ವರ್ಷಗಳಷ್ಟು ಹಿರಿಯ ಸದೃಢ ವ್ಯಕ್ತಿಯಿದ್ದಂತೆ. ಅದಕ್ಕೊಂದು ಆತ್ಮವಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಬದಲಾವಣೆಗಳನ್ನು ನಾನು ಯಾವಾಗಲು ಬೆಂಬಲಿಸುತ್ತೇನೆ. ಭಾರತ ಆಡಿದ ಮೊದಲ ಟಿ20 ಪಂದ್ಯದ ನಾಯಕನಾಗಿದ್ದೆ. ಅದಕ್ಕೆ ನನಗೆ ಹೆಮ್ಮೆಯಿದೆ. ಟಿ20 ವಿಶ್ವಕಪ್‌ ಗೆದ್ದ ಭಾರತ ತಂಡದ ಭಾಗವಾಗಿದ್ದೆ. ಆದರೆ, ಐದು ದಿನಗಳ ಟೆಸ್ಟ್‌ ಎಂಬುದು ರೊಮ್ಯಾನ್ಸ್‌ ಇದ್ದಂತೆ’ ಎಂದೂ ಹೇಳಿದ್ದಾರೆ.

ಈ ಹಿಂದೆ ವಿರಾಟ್‌ ಕೊಹ್ಲಿ, ರವಿಶಾಸ್ತ್ರಿ, ರೋಹಿತ್‌ ಶರ್ಮಾ ಸೇರಿದಂತೆ ಸಾಕಷ್ಟು ಕ್ರಿಕೆಟಿಗರು ಐಸಿಸಿ ಪ್ರಸ್ತಾವನೆಯನ್ನು ವಿರೋಧಿಸಿದ್ದರು.

‘ನನ್ನ ಪ್ರಕಾರ, ಇದು ಬದಲಾಗಬೇಕಿಲ್ಲ. ನಾನು ಹೇಳುವುದೇನೆಂದರೆ ಹಗಲು–ರಾತ್ರಿ ಟೆಸ್ಟ್‌ ಆಯೋಜನೆ ಟೆಸ್ಟ್‌ ಕ್ರಿಕೆಟ್‌ನ ವ್ಯವಹಾರವನ್ನು ಉತ್ತಮ ಪಡಿಸಲು ಇರುವ ಮತ್ತೊಂದು ಕ್ರಮ ಮತ್ತು ಅದು ತನ್ನ ಸುತ್ತಲೂ ಕುತೂಹಲವನ್ನು ಉಂಟುಮಾಡಿದ್ದುದು ನಿಮಗೂ ಗೊತ್ತಿದೆ. ಆದರೆ ನೀವು ಈ ರೀತಿ ಹೆಚ್ಚು ಯೋಚಿಸಲು ಸಾಧ್ಯವಿಲ್ಲ. ಅದನ್ನು ನಾನು ನಂಬುವುದೂ ಇಲ್ಲ. ನನ್ನ ಪ್ರಕಾರ ಹಗಲು–ರಾತ್ರಿ ಪಂದ್ಯವು ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಬಲ್ಲುದು’ ಎಂದು ಕೊಹ್ಲಿ ಹೇಳಿದ್ದರು.

‘ಒಂದು ವೇಳೆ ನಾಲ್ಕು ದಿನಗಳಲ್ಲಿ ಆಡುವಂತಾದರೆ, ಅದು ಟೆಸ್ಟ್‌ ಕ್ರಿಕೆಟ್‌ ಆಗಿ ಉಳಿಯುವುದಿಲ್ಲ’ ಎಂದು ರೋಹಿತ್ ಶರ್ಮಾ ಕಳವಳ ವ್ಯಕ್ತಪಡಿಸಿದ್ದರು.  ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ‘ಆ ಬಗ್ಗೆ ಆಲೋಚಿಸಲು ಇದು ಸೂಕ್ತ ಸಮಯವಲ್ಲ’ ಎಂದು ಹೇಳಿ ಪ್ರತಿಕ್ರಿಯಿಸಲು ನಿರಾಕರಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು