ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Duleep Trophy Final: ಕಾವೇರಪ್ಪ ಅಮೋಘ ಬೌಲಿಂಗ್, ದಕ್ಷಿಣ ವಲಯಕ್ಕೆ ಇನಿಂಗ್ಸ್ ಮುನ್ನಡೆ

Published 14 ಜುಲೈ 2023, 8:27 IST
Last Updated 14 ಜುಲೈ 2023, 8:27 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಶ್ಚಿಮ ವಲಯ ಕ್ರಿಕೆಟ್‌ ತಂಡದ ವಿರುದ್ಧ ನಡೆಯುತ್ತಿರುವ ದುಲೀಪ್ ಟ್ರೋಫಿ ಫೈನಲ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ವಲಯ ಇನಿಂಗ್ಸ್‌ ಮುನ್ನಡೆ ಸಾಧಿಸಿದೆ.

ಬುಧವಾರ ಆರಂಭವಾದ ಪಂದ್ಯದಲ್ಲಿ ದಕ್ಷಿಣ ವಲಯ ಗಳಿಸಿದ್ದ 213 ರನ್‌ ಗಳ ಸಾಧಾರಣ ಮೊತ್ತದೆದುರು ಇನಿಂಗ್ಸ್‌ ಆರಂಭಿಸಿದ ಪಶ್ಚಿಮ ವಲಯ 146 ರನ್‌ ಗಳಿಸುವಷ್ಟರಲ್ಲೇ ಸರ್ವಪತನ ಕಂಡಿದೆ.

ದಿಢೀರ್‌ ಕುಸಿತ
ಪಶ್ಚಿಮ ವಲಯ ತಂಡ ಉತ್ತಮ ಆರಂಭ ಪಡೆದಿತ್ತು. ಆರಂಭಿಕ ಬ್ಯಾಟರ್‌ ಪೃಥ್ವಿ ಶಾ (65) ಅರ್ಧಶತಕದ ಬಲದಿಂದ ಕೇವಲ 2 ವಿಕೆಟ್ ನಷ್ಟಕ್ಕೆ ನೂರರ ಗಡಿ ದಾಟಿತ್ತು. ಶಾ ಮತ್ತು ಹಾರ್ವಿಕ್‌ ದೇಸಾಯಿ (21) ಎರಡನೇ ವಿಕೆಟ್‌ ಪಾಲುದಾರಿಕೆಯಲ್ಲಿ 70 ರನ್‌ ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು.

ಆದರೆ, 31ನೇ ಓವರ್‌ನಲ್ಲಿ ಈ ಜೊತೆಯಾಟ ಬೇರ್ಪಡಿಸಿದ ಕರ್ನಾಟಕದ ವಿದ್ವತ್ ಕಾವೇರಪ್ಪ, ಪಶ್ವಿಮ ವಲಯದ ಕುಸಿತಕ್ಕೆ ಕಾರಣರಾದರು. ಬಳಿಕ ಬಂದ ಯಾವೊಬ್ಬ ಬ್ಯಾಟರ್‌ ದಕ್ಷಿಣ ವಲಯದ ಬೌಲರ್‌ಗಳೆದುರು ಗಟ್ಟಿಯಾಗಿ ನಿಲ್ಲಲಿಲ್ಲ. ಟೆಸ್ಟ್ ಪರಿಣತ ಚೇತೇಶ್ವರ ಪೂಜಾರ (9) ಹಾಗೂ ಸೂರ್ಯಕುಮಾರ್ ಯಾದವ್‌ (8) ನಿರಾಸೆ ಮುಡಿಸಿದರು. ಹೀಗಾಗಿ ದಕ್ಷಿಣ ವಲಯ 67 ರನ್‌ ಅಂತರದ ಮುನ್ನಡೆ ಸಾಧಿಸಲು ಸಾಧ್ಯವಾಯಿತು.

ಅಮೋಘ ಬೌಲಿಂಗ್‌ ಪ್ರದರ್ಶನ ನೀಡಿದ ಕಾವೇರಪ್ಪ  53 ರನ್ ಬಿಟ್ಟುಕೊಟ್ಟು 7 ವಿಕೆಟ್‌ ಪಡೆದು ಮಿಂಚಿದರು.

ಉತ್ತಮ ಮೊತ್ತದತ್ತ ದಕ್ಷಿಣ ವಲಯ
ಸದ್ಯ ಎರಡನೇ ಇನಿಂಗ್ಸ್ ಆರಂಭಿಸಿರುವ ದಕ್ಷಿಣ ವಲಯ 3 ವಿಕೆಟ್‌ ನಷ್ಟಕ್ಕೆ 88 ರನ್ ಗಳಿಸಿದ್ದು, 155 ರನ್‌ಗಳ ಮುನ್ನಡೆ ಸಾಧಿಸಿದೆ. ನಾಯಕ ಹನುಮ ವಿಹಾರಿ (37) ಹಾಗೂ ರಿಕ್ಕಿ ಭುಯಿ (5) ಕ್ರೀಸ್‌ನಲ್ಲಿದ್ದು, ಪಶ್ವಿಮ ವಲಯಕ್ಕೆ ಸವಾಲಿನ ಗುರಿ ನೀಡುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT