ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐರ್ಲೆಂಡ್‌ ಗಿಡದ ಫಲ ಇಂಗ್ಲೆಂಡ್‌ನಲ್ಲಿ

Last Updated 22 ಜೂನ್ 2019, 9:12 IST
ಅಕ್ಷರ ಗಾತ್ರ

ಹದಿಮೂರನೇ ವಯಸ್ಸಿನಲ್ಲಿ ಕ್ರಿಕೆಟ್ ಬ್ಯಾಟನ್ನು ಬಿಗಿಯಾಗಿ ಹಿಡಿದು ನಿಂತ ಇಯಾನ್ ಮಾರ್ಗನ್ ಹೇಳಿದ್ದು: ‘ನಾನು ಇಂಗ್ಲೆಂಡ್ ಪರವಾಗಿ ಆಡಬೇಕು’. ಐರ್ಲೆಂಡ್‌ನಲ್ಲಿ ನೆಟ್ಟ ಕ್ರಿಕೆಟ್‌ ಗಿಡ ಅವರಾಗಿದ್ದರಿಂದ ಇಗ್ಲೆಂಡ್‌ನಲ್ಲಿ ಫಲ ಬಿಡುವುದು ಸಾಧ್ಯವೇ ಎಂಬ ಪ್ರಶ್ನೆ ಆಗ ಕೆಲವರಲ್ಲಿ ಇದ್ದದ್ದು ನಿಜ. ಆದರೆ, ಅಪ್ಪನ ಬಳಿ ಇಂಗ್ಲೆಂಡ್‌ನ ಪಾಸ್‌ಪೋರ್ಟ್‌ ಇತ್ತು. ಅವರಮ್ಮ ಇಂಗ್ಲೆಂಡ್‌ನ ಸಂಸ್ಕೃತಿಯ ಬಿಳಲೇ ಆಗಿದ್ದರು. ಹೀಗಾಗಿ ಇಂಥ ಹಿನ್ನೆಲೆಯ ಹುಡುಗ ಇಂಗ್ಲೆಂಡ್‌ ಪರವಾಗಿ ಆಡಬೇಕೆಂದು ಕನಸು ಕಾಣುವುದು ಸಹಜವೇ ಆಗಿತ್ತು.

ಅಫ್ಘಾನಿಸ್ತಾನದ ವಿರುದ್ಧ ಈ ಸಲದ ವಿಶ್ವಕಪ್‌ ಪಂದ್ಯದಲ್ಲಿ 17 ಸಿಕ್ಸರ್‌ ಗಳಿಸಿ ಮಾರ್ಗನ್ ವಿಶ್ವದಾಖಲೆ ನಿರ್ಮಿಸಿದಾಗ ಅವರ ಈ ಕನಸಿನ ಅಧ್ಯಾಯ ನೆನಪಾಯಿತು. 2007ರ ಮೇ ತಿಂಗಳಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧದ ಟೆಸ್ಟ್‌ ಪಂದ್ಯಕ್ಕೆ ಆಯ್ಕೆಯಾದ ತಂಡದಲ್ಲಿ ಮಾರ್ಗನ್‌ ಹನ್ನೆರಡನೇ ಆಟಗಾರ. ಬಾಲ್ಯದ ಕನಸು ಭಾಗಶಃ ನನಸಾದ ದಿನ ಅದು. ಮೂರನೇ ದಿನದಾಟದಲ್ಲಿ ಮ್ಯಾಥ್ಯೂ ಹೊಗಾರ್ಡ್ ಬದಲಿಗೆ ಫೀಲ್ಡಿಂಗ್‌ ಮಾಡಲೆಂದು ಅವರು ಕಣಕ್ಕೆ ಇಳಿದಾಗ ಕಾಲುಗಳು ತುಂಬಾ ಚುರುಕಾಗಿದ್ದವು. ಮರುವರ್ಷವೇ ಅವರು ಇಂಗ್ಲೆಂಡ್‌ ಲಯನ್ಸ್‌ ತಂಡವನ್ನು ಪ್ರಥಮ ದರ್ಜೆ ಪಂದ್ಯದಲ್ಲಿ ಪ್ರತಿನಿಧಿಸಿ ಸಮಿತ್‌ ಪಟೇಲ್‌ ಜತೆ 113 ರನ್‌ಗಳ ಜತೆಯಾಟ ಆಡಿದರು. 47 ರನ್‌ ಗಳಿಸಿ ಔಟಾಗದೆ ಉಳಿದ ಆ ಇನಿಂಗ್ಸ್‌ ಅವರಲ್ಲಿ ಆತ್ಮಬಲ ತುಂಬಿತು.


ಅಷ್ಟು ಹೊತ್ತಿಗೆ ಐರ್ಲೆಂಡ್‌ ತಂಡದ ಪರವಾಗಿ ಆಡಿ ಅವರು ಸಾಣೆಗೆ ಒಳಗಾಗಿದ್ದರು. 2006ರಲ್ಲಿ ಸ್ಕಾಟ್ಲೆಂಡ್‌ ವಿರುದ್ಧ ಏಕದಿನ ಅಂತರರಾಷ್ಟ್ರೀಯ ಪಂದ್ಯದಲ್ಲಿ ಅವರು ಪದಾರ್ಪಣೆ ಮಾಡಿದ್ದು. 99 ರನ್‌ ಗಳಿಸಿ ಅದರಲ್ಲಿ ಅವರು ರನ್‌ಔಟ್‌ ಆದರು. ಚೊಚ್ಚಲ ಪಂದ್ಯದಲ್ಲಿ ಶತಕದಿಂದ ಬರೀ ಒಂದು ರನ್‌ ಕಡಿಮೆಗೆ ಜಗತ್ತಿನ ಬೇರೆ ಯಾವ ಆಟಗಾರನೂ ಔಟ್‌ ಆಗಿಲ್ಲ. 2004ರಲ್ಲಿ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಆಡಿದ ಐರ್ಲೆಂಡ್‌ ತಂಡದಲ್ಲೂ ಮಾರ್ಗನ್‌ ಬ್ಯಾಟಿಂಗ್‌ ವೈಭವ ನೋಡಲು ಸಿಕ್ಕಿತ್ತು. ತಮ್ಮ ತಂಡದ ಪರವಾಗಿ ಅತಿ ಹೆಚ್ಚು ರನ್‌ ಗಳಿಸಿದ್ದ ಅವರು ಎರಡು ವರ್ಷಗಳ ನಂತರ ಅದೇ ತಂಡವನ್ನು ಮುನ್ನಡೆಸುವ ಜವಾಬ್ದಾರಿ ವಹಿಸಿಕೊಂಡರೆನ್ನುವುದು ವಿಶೇಷ. 19 ವರ್ಷದೊಳಗಿನವರ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಗಳಲ್ಲಿ 609 ರನ್‌ ದಾಖಲಿಸಿದ್ದು ಗಮನಾರ್ಹ. ಅಷ್ಟೊಂದು ರನ್‌ಗಳನ್ನು ಬೇರೆ ಯಾವ ಆಟಗಾರ ಕೂಡ ಗಳಿಸಿಲ್ಲ. 2014ರಲ್ಲಿ ಭಾರತದ ವಿರುದ್ಧ ಟೆಸ್ಟ್‌ ಪಂದ್ಯಗಳಲ್ಲಿ ಗಮನ ಸೆಳೆಯುವಂತೆ ಮಾರ್ಗನ್‌ ಆಡಲಿಲ್ಲ. ಆದರೆ, ಒಂದೇ ಒಂದು 20–ಟ್ವೆಂಟಿ ಪಂದ್ಯದಲ್ಲಿ 31 ಎಸೆತಗಳಲ್ಲಿ 71 ರನ್‌ ದೋಚಿದರು. ಆಗ ಅವರು ಹೊಡೆದಿದ್ದ ಏಳು ಸಿಕ್ಸರ್‌ಗಳು ಈಗಲೂ ಅನೇಕರಿಗೆ ನೆನಪಿನಲ್ಲಿದೆ. ಅಲಿಸ್ಟರ್‌ ಕುಕ್‌ ಅವರಿಗೆ ನಾಯಕತ್ವದ ನೊಗ ಭಾರವೆನಿಸಿದ ಘಟ್ಟ ಅದು. ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಪಂದ್ಯಗಳಲ್ಲೂ ಆಡಿ ಪಳಗಿದ್ದ ಅವರೇ ನಾಯಕನ ಜಾಗಕ್ಕೆ ಸೂಕ್ತ ಎಂದು ಆಯ್ಕೆ ಮಂಡಳಿಗೆ ಅನಿಸಲಾರಂಭಿಸಿದ್ದೇ ಆಗ.


ಕಳೆದ ವಿಶ್ವಕಪ್‌ನಲ್ಲೂ ಇಂಗ್ಲೆಂಡ್‌ ತಂಡವನ್ನು ಮುನ್ನಡೆಸಿದ್ದ ಅವರಿಗೆ ಈಗಲೂ ಅದೇ ಹೊಣೆಗಾರಿಕೆ ಇದೆ. ಸಾಕಷ್ಟು ಮಾಗಿರುವ ಈ ಎಡಗೈ ಬ್ಯಾಟ್ಸ್‌ಮನ್‌ ಮೇಲೆ ಆತಿಥೇಯರ ಬೆರಗುಗಣ್ಣು. ಅವರು ಕಂಡ ಕನಸು ಎಷ್ಟು ಪರಿಣಾಮಕಾರಿಯಾಗಿ ಈಡೇರಿದೆಯಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT