ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ವಿಶ್ವಕಪ್ | ಕರನ್ ಪರಾಕ್ರಮ; ಅಫ್ಗಾನಿಸ್ತಾನ ವಿರುದ್ಧ ಇಂಗ್ಲೆಂಡ್‌ಗೆ ಗೆಲುವು

Last Updated 22 ಅಕ್ಟೋಬರ್ 2022, 15:27 IST
ಅಕ್ಷರ ಗಾತ್ರ

ಪರ್ತ್‌: ಮಧ್ಯಮವೇಗಿ ಸ್ಯಾಮ್ ಕರನ್‌ (10ಕ್ಕೆ 5) ಅವರ ಪರಿಣಾಮಕಾರಿ ಬೌಲಿಂಗ್ ಹಾಗೂ ತಂಡದ ಅಮೋಘ ಫೀಲ್ಡಿಂಗ್ ಬಲದಿಂದ ಇಂಗ್ಲೆಂಡ್‌ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಪಂದ್ಯದಲ್ಲಿ ಜಯ ಗಳಿಸಿತು.

ಶನಿವಾರ ಇಲ್ಲಿ ನಡೆದ ಒಂದನೇ ಗುಂಪಿನ ಮೊದಲ ಹಣಾಹಣಿಯಲ್ಲಿ ಇಂಗ್ಲೆಂಡ್‌ 5 ವಿಕೆಟ್‌ಗಳಿಂದ ಅಫ್ಗಾನಿಸ್ತಾನಕ್ಕೆ ಸೋಲುಣಿಸಿತು.

ಟಾಸ್‌ ಗೆದ್ದ ಇಂಗ್ಲೆಂಡ್‌ ನಾಯಕ ಜೋಸ್ ಬಟ್ಲರ್ ಫೀಲ್ಡಿಂಗ್ ಆಯ್ದುಕೊಂಡರು. ತಂಡವು ಮೊಹಮ್ಮದ್ ನಬಿ ಬಳಗವನ್ನು 19.4 ಓವರ್‌ಗಳಲ್ಲಿ 112 ರನ್‌ಗಳಿಗೆ ಕಟ್ಟಿ ಹಾಕಿತು.

ಸುಲಭ ಗುರಿ ಬೆನ್ನತ್ತಿದ ಇಂಗ್ಲೆಂಡ್‌ 19ನೇ ಓವರ್‌ನಲ್ಲಿ 5 ವಿಕೆಟ್‌ ಕಳೆದುಕೊಂಡು ಜಯದ ನಗೆ ಬೀರಿತು.

ಲಿಯಾಮ್ ಲಿವಿಂಗ್‌ಸ್ಟೋನ್‌ (ಔಟಾಗದೆ 29 ರನ್‌), ಅಲೆಕ್ಸ್ ಹೇಲ್ಸ್ (19) ಮತ್ತು ಡೇವಿಡ್ ಮಲಾನ್‌ (18) ತಂಡದ ಜಯಕ್ಕೆ ಕೊಡುಗೆ ನೀಡಿದರು.

ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಅಫ್ಗಾನಿಸ್ತಾನ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಪಂದ್ಯದ ಮೂರನೇ ಓವರ್‌ನಲ್ಲಿ ಮಾರ್ಕ್‌ ವುಡ್‌ ಎಸೆತದಲ್ಲಿ ರಹಮಾನುಲ್ಲಾ ಗುರ್ಬಾಜ್‌ (10), ವಿಕೆಟ್‌ ಕೀಪರ್ ಜೋಸ್ ಬಟ್ಲರ್‌ಗೆ ಕ್ಯಾಚಿತ್ತರು. ಹಜ್ರತ್‌ಉಲ್ಲಾ ಜಜೈ (7) ಮತ್ತು ಇಬ್ರಾಹಿಂ ಜದ್ರಾನ್‌ (32) ಎರಡನೇ ವಿಕೆಟ್‌ ಜೊತೆಯಾಟದಲ್ಲಿ 24 ರನ್ ಸೇರಿಸಿದರು. ಜಜೈ ವಿಕೆಟ್‌ ಕಬಳಿಸಿದ ಬೆನ್ ಸ್ಟೋಕ್ಸ್ ಇಂಗ್ಲೆಂಡ್‌ಗೆ ಮೇಲುಗೈ ಒದಗಿಸಿದರು.

ಇಬ್ರಾಹಿಂ ಮತ್ತು ಉಸ್ಮಾನ್ ಗಣಿ (30) ತಂಡಕ್ಕೆ ಆಸರೆಯಾಗುವ ವಿಶ್ವಾಸ ಮೂಡಿಸಿದರು. ಮೂರನೇ ವಿಕೆಟ್‌ಗೆ 27 ರನ್ ಸೇರಿಸಿದರು. ಆದರೆ ಇಬ್ರಾಹಿಂ ಅವರನ್ನು ಪೆವಿಲಿಯನ್‌ಗೆ ಕಳುಹಿಸುವ ಮೂಲಕ ತಮ್ಮ ವಿಕೆಟ್ ಬೇಟೆ ಆರಂಭಿಸಿದ ಸ್ಯಾಮ್‌, ಅಫ್ಗಾನಿಸ್ತಾನ ಬ್ಯಾಟರ್‌ಗಳಿಗೆ ಸಿಂಹಸ್ವಪ್ನವಾದರು. ಅಜ್ಮತ್‌ವುಲ್ಲಾ ಓಮರ್‌ಜೈ, ರಶೀದ್‌ ಖಾನ್‌, ಉಸ್ಮಾನ್, ಫಜಲ್‌ಹಕ್‌ ಫಾರೂಕಿ ವಿಕೆಟ್‌ಗಳನ್ನೂ ಬುಟ್ಟಿಗೆ ಹಾಕಿಕೊಂಡರು. ಇಂಗ್ಲೆಂಡ್‌ ಆಟಗಾರರು ಪಡೆದ ಕೆಲವೂ ಕ್ಯಾಚ್‌ಗಳೂ ಚಿತ್ತಾಪಹಾರಿಯಾಗಿದ್ದವು.

ಸ್ಟೋಕ್ಸ್ ಮತ್ತು ವುಡ್‌ ತಲಾ ಎರಡು ವಿಕೆಟ್‌ ಪಡೆದು ಕರನ್‌ಗೆ ಬೆಂಬಲ ನೀಡಿದರು

ಸಂಕ್ಷಿಪ್ತ ಸ್ಕೋರು
ಅಫ್ಗಾನಿಸ್ತಾನ:
19.4 ಓವರ್‌ಗಳಲ್ಲಿ 112 (ಇಬ್ರಾಹಿಂ ಜದ್ರಾನ್‌ 32, ಉಸ್ಮಾನ್ ಘನಿ 30, ನಜೀಬುಲ್ಲಾ ಜದ್ರಾನ್‌ 13; ಬೆನ್ ಸ್ಟೋಕ್ಸ್ 19ಕ್ಕೆ 2, ಕ್ರಿಸ್‌ ವೋಕ್ಸ್ 24ಕ್ಕೆ 1, ಮಾರ್ಕ್ ವುಡ್‌ 23ಕ್ಕೆ 2, ಸ್ಯಾಮ್ ಕರನ್‌ 10ಕ್ಕೆ 5)

ಇಂಗ್ಲೆಂಡ್‌: 18.1 ಓವರ್‌ಗಳಲ್ಲಿ 5ಕ್ಕೆ 113(ಜೋಸ್‌ ಬಟ್ಲರ್‌ 18, ಅಲೆಕ್ಸ್ ಹೇಲ್ಸ್ 19, ಡೇವಿಡ್ ಮಲಾನ್‌ 18, ಲಿಯಾಮ್ ಲಿವಿಂಗ್‌ಸ್ಟೋನ್‌ ಔಟಾಗದೆ 29; ಫಜಲ್‌ಹಕ್ ಫಾರೂಕಿ 24ಕ್ಕೆ 1, ಮುಜೀಬುರ್ ರೆಹಮಾನ್‌ 22ಕ್ಕೆ 1, ರಶೀದ್‌ ಖಾನ್‌ 17ಕ್ಕೆ 1, ಮೊಹಮ್ಮದ್ ನಬಿ 16ಕ್ಕೆ 1).

ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 5 ವಿಕೆಟ್‌ಗಳ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT