ಗುರುವಾರ , ಜೂನ್ 24, 2021
21 °C
ಇಂಗ್ಲೆಂಡ್‌ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಬೆಚ್ಚಿದ ಅಫ್ಗಾನಿಸ್ತಾನ

ಜೋ-ಜಾನಿ ಅಬ್ಬರ, ಇಯಾನ್‌ ಮಾರ್ಗನ್‌ ಗುಡುಗು| ಅಫ್ಗಾನ್ ಎದುರು ದಾಖಲೆಗಳ ಮಳೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಮ್ಯಾಂಚೆಸ್ಟರ್‌: ದಾಖಲೆಗಳ ಮಳೆ ಸುರಿಸಿದ ಆತಿಥೇಯ ಇಂಗ್ಲೆಂಡ್ ತಂಡದವರು ಅಫ್ಗಾನಿಸ್ತಾನ ಎದುರಿನ ಪಂದ್ಯದಲ್ಲಿ 150 ರನ್‌ಗಳ ಜಯ ಗಳಿಸಿ ಸಂಭ್ರಮಿಸಿದರು.

ಓಲ್ಡ್ ಟ್ರಾಫರ್ಡ್ ಅಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ದಾಖಲೆಯ ಸಿಕ್ಸರ್‌ ಸಿಡಿಸಿ ಮಿಂಚಿದರು. ವಿಶ್ವಕಪ್‌ನಲ್ಲಿ ನಾಲ್ಕನೇ ವೇಗದ ಶತಕ ಗಳಿಸಿದ ಆಟಗಾರ ಎಂಬ ದಾಖಲೆಯೂ ಅವರ ಪಾಲಾಯಿತು.

ಆರಂಭ ಆಟಗಾರ ಜಾನಿ ಬೇಸ್ಟೊ ಮತ್ತು ಜೋ ರೂಟ್ ಕೂಡ ಮಿಂಚಿನ ಬ್ಯಾಟಿಂಗ್ ಮಾಡಿದರು. ಈ ಮೂವರ ಅಮೋಘ ಆಟದ ಬಲದಿಂದ ತಂಡ 6ಕ್ಕೆ 397 ರನ್ ಪೇರಿಸಿತು. ಗುರಿ ಬೆನ್ನತ್ತಿದ ಅಫ್ಗಾನಿಸ್ತಾನ ಎಂಟು ವಿಕೆಟ್‌ ಕಳೆದುಕೊಂಡು 247 ರನ್‌ ಗಳಿಸಿತು. 

ದೊಡ್ಡ ಗುರಿ ಬೆನ್ನತ್ತಿದರೂ ಅಫ್ಗಾನ್ ತಂಡ ಸುಲಭವಾಗಿ ಸೋಲೊಪ್ಪಿಕೊಳ್ಳಲಿಲ್ಲ. ತಂಡದ ಮೊತ್ತ ನಾಲ್ಕು ರನ್ ಆಗಿದ್ದಾಗ ಆರಂಭ ಆಟಗಾರ ನೂರ್ ಅಲಿ ಜದ್ರಾನ್ ಔಟಾದರೂ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟ್ಸ್‌ಮನ್‌ಗಳು ಪಟ್ಟು ಬಿಡಲಿಲ್ಲ. ನಾಯಕ ಗುಲ್ಬದಿನ್ ನೈಬ್ ಮತ್ತು ರಹಮತ್ ಶಾ 48 ರನ್‌ಗಳ ಜೊತೆಯಾಟ ಆಡಿದರು.

ನೈಬ್ ನಿರ್ಗಮಿಸಿದ ನಂತರ ರಹಮತ್ ಮತ್ತು ಹಶ್ಮತ್ ಉಲ್ಲಾ ಶಾಹಿದಿ ಅರ್ಧಶತಕದ ಜೊತೆಯಾಟ ಆಡಿ ತಂಡವನ್ನು 100ರ ಗಡಿ ದಾಟಿಸಿದರು. ಅರ್ಧಶತಕ ಗಳಿಸಿದ ಹಶ್ಮತ್ ಉಲ್ಲಾ (76; 100 ಎಸೆತ, 2 ಸಿಕ್ಸರ್‌, 5 ಬೌಂಡರಿ) ಅವರಿಗೆ ಅಸ್ಗರ್ ಅಫ್ಗಾನ್ ಉತ್ತಮ ಸಹಕಾರ ನೀಡಿದರು. ಆದರೆ ಇವರಿಬ್ಬರು ಔಟಾದ ನಂತರ ತಂಡ ಪತನದ ಹಾದಿ ಹಿಡಿಯಿತು. ಇಂಗ್ಲೆಂಡ್‌ ಬೌಲರ್‌ಗಳು ಹಿಡಿತ ಬಿಗಿ ಮಾಡಿ ಭರ್ಜರಿ ಜಯ ಗಳಿಸಿಕೊಟ್ಟರು. ಇದರೊಂದಿಗೆ ಇಂಗ್ಲೆಂಡ್, ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು.

ಮಾರ್ಗನ್‌ ಸಿಕ್ಸರ್‌ಗಳ ಮಿಂಚು: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್‌ ನಾಯಕ ಇಯಾನ್‌ ಮಾರ್ಗನ್‌ ಸಿಕ್ಸರ್‌ಗಳ ವಿಶ್ವದಾಖಲೆ ಹಾದಿಯಲ್ಲೇ ಜೀವನ ಶ್ರೇಷ್ಠ 148 ರನ್‌ (71 ಎಸೆತ, 17 ಸಿ, 4 ಬೌಂಡರಿ) ಬಾರಿಸಿದರು.

ಬೆನ್ನು ನೋವಿನಿಂದ ಬಳಲುತ್ತಿದ್ದ ಮಾರ್ಗನ್‌ ಆಡುವುದೇ ಅನುಮಾನವಾಗಿತ್ತು. ಆದರೆ ಅವರೇ ಅಬ್ಬರಿಸಿದರು. 28 ರನ್‌ ಗಳಿಸಿದ್ದಾಗ ರಶೀದ್‌ ಖಾನ್‌ ಬೌಲಿಂಗ್‌ನಲ್ಲಿ ಜೀವದಾನ ಪಡೆದಿದ್ದ ಅವರು ಮೂರನೇ ವಿಕೆಟ್‌ಗೆ ಜೋ ರೂಟ್‌ ಜೊತೆ 189 ರನ್‌ ಸೇರಿಸಿದರು. ಲೆಗ್‌ ಸ್ಪಿನ್ನರ್‌ ರಶೀದ್‌ ಖಾನ್‌ ಒಂಬತ್ತು ಓವರ್‌ಗಳಲ್ಲಿ 110 ರನ್‌ ತೆತ್ತರು.

ವಿಶ್ವಕಪ್‌ ಇತಿಹಾಸದಲ್ಲೇ ಅತ್ಯಂತ ದುಬಾರಿ ಬೌಲರ್‌ ಎಂಬ ಅಪಖ್ಯಾತಿ ಅವರದಾಯಿತು. ದಾಖಲೆ 17ನೇ ಸಿಕ್ಸರ್‌ ಬಾರಿಸಿದ ಒಂದು ಎಸೆತದ ನಂತರ ಮಾರ್ಗನ್‌ ಅವರು ನೈಬ್‌ ಬೌಲಿಂಗ್‌ನಲ್ಲಿ ರಹಮತ್‌ ಶಾಗೆ ಕ್ಯಾಚಿತ್ತರು.  ಜೇಮ್ಸ್‌ ವಿನ್ಸ್‌ ಮತ್ತು ಬೇಸ್ಟೊ ಮೊದಲ ವಿಕೆಟ್‌ಗೆ 44 ರನ್‌ ಸೇರಿಸಿದರು. ಬೇಸ್ಟೊ ಎರಡನೇ ವಿಕೆಟ್‌ಗೆ 20 ಓವರುಗಳಲ್ಲಿ 120 ರನ್‌ ಸೇರಿಸಿ ತಂಡವನ್ನು ಉತ್ತಮ ಮೊತ್ತದೆಡೆಗೆ ತಲುಪಿಸಿದರು.

ಎಂಟನೇ ಶತಕದತ್ತ ಹೆಜ್ಜೆಯಿಟ್ಟಿದ್ದ ಬೇಸ್ಟೊ, ಎದುರಾಳಿ ನಾಯಕ  ನೈಬ್‌ ಬೌಲಿಂಗ್‌ನಲ್ಲಿ ಅವರಿಗೇ ಕ್ಯಾಚ್‌ ನೀಡಿ ಮರಳಿದರು. ರೂಟ್‌ ಮತ್ತು ಮಾರ್ಗನ್‌ ಎದುರಾಳಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಬಂದ ಹಾಗೆಯೇ ನೈಬ್‌ ಬೌಲಿಂಗ್‌ನಲ್ಲಿ ಎರಡು ಸಿಕ್ಸರ್ ಎತ್ತಿದ ಮಾರ್ಗನ್‌ ತಮ್ಮ ಇರಾದೆಯನ್ನು ಸ್ಪಷ್ಟಪಡಿಸಿದರು.

36 ಎಸೆತಗಳಲ್ಲಿ ಅರ್ಧ ಶತಕ ದಾಟಿದ ಅವರು, ನಂತರ ಮತ್ತಷ್ಟು ಆಕ್ರಮಣಕಾರಿಯಾದರು. ಮೊಯಿನ್‌ ಅಲಿ ತಂಡದ ಮೊತ್ತವನ್ನು 400ರ ಸಮೀಪ ತಲುಪಿಸಿದರು.

ಇಂಗ್ಲೆಂಡ್ ಇನಿಂಗ್ಸ್‌ನ ಪ್ರಮುಖ ಅಂಶಗಳು
* ಇನಿಂಗ್ಸ್‌ನಲ್ಲಿ ಒಟ್ಟು 25 ಸಿಕ್ಸರ್‌ಗಳು ಸಿಡಿದವು. ಇದು, ಏಕದಿನ ಕ್ರಿಕೆಟ್‌ನಲ್ಲಿ ದಾಖಲೆ. ಇದೇ ವರ್ಷದ ಆರಂಭದಲ್ಲಿ ಗ್ರೆನೇಡಾದಲ್ಲಿ ವೆಸ್ಟ್ ಇಂಡೀಸ್ ಎದುರು 24 ಸಿಕ್ಸರ್ ಸಿಡಿಸಿ ಇಂಗ್ಲೆಂಡ್ ದಾಖಲೆ ಬರೆದಿತ್ತು.
* ವರಶೀದ್ ಖಾನ್ ಒಟ್ಟು 11 ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟರು. ಈ ಮೂಲಕ ಏಕದಿನ ಕ್ರಿಕೆಟ್‌ನ ಪಂದ್ಯವೊಂದರಲ್ಲಿ ಹೆಚ್ಚು ಸಿಕ್ಸರ್‌ಗಳನ್ನು ಕೊಟ್ಟ ಬೌಲರ್‌ ಎನಿಸಿದರು!
* ಮಾರ್ಗನ್ ಈ ವಿಶ್ವಕಪ್‌ನಲ್ಲಿ ಒಟ್ಟು 22 ಸಿಕ್ಸರ್ ಸಿಡಿಸಿದ್ದಾರೆ. ಈ ಮೂಲಕ ವಿಶ್ವಕಪ್‌ವೊಂದರಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಬ್ಯಾಟ್ಸ್‌ಮನ್‌ ಆದರು. ಏಕದಿನ ಸರಣಿಯೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ (39) ಸಿಡಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ.
* ರಶೀದ್‌ ಖಾನ್ 110 ರನ್‌ ಬಿಟ್ಟುಕೊಟ್ಟರು. ವಿಶ್ವಕಪ್ ಪಂದ್ಯವೊಂದರಲ್ಲಿ ಬೌಲರ್ ಒಬ್ಬ ನೀಡಿದ ಗರಿಷ್ಠ ರನ್ ಇದು. 1983ರಲ್ಲಿ ನ್ಯೂಜಿಲೆಂಡ್‌ನ ಮಾರ್ಟಿನ್ ಸ್ನೆಡೆನ್ 12 ಓವರ್‌ಗಳಲ್ಲಿ 105 ರನ್ ನೀಡಿದ್ದರು.
* ಆರು ವಿಕೆಟ್‌ಗಳಿಗೆ 397 ರನ್ ಕಲೆ ಹಾಕಿದ ಇಂಗ್ಲೆಂಡ್‌ ವಿಶ್ವಕಪ್‌ನಲ್ಲಿ ಆರನೇ ಗರಿಷ್ಠ ಮೊತ್ತ ಗಳಿಸಿದ ಸಾಧನೆ ಮಾಡಿತು. ಇದೇ ವಿಶ್ವಕಪ್‌ನ ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಇಂಗ್ಲೆಂಡ್‌ 6ಕ್ಕೆ 386 ರನ್ ಗಳಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು