ಶನಿವಾರ, ಆಗಸ್ಟ್ 13, 2022
26 °C
ಭಾರತದ ಸ್ನೇಹ್ ರಾಣಾಗೆ ನಾಲ್ಕು, ದೀಪ್ತಿ ಶರ್ಮಾಗೆ ಮೂರು ವಿಕೆಟ್‌

ಮಹಿಳೆಯರ ಟೆಸ್ಟ್ ಪಂದ್ಯ: ಬೃಹತ್ ಮೊತ್ತ ಪೇರಿಸಿದ ಹೀಥರ್ ಬಳಗ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬ್ರಿಸ್ಟಲ್‌: ಆರನೇ ಕ್ರಮಾಂಕದ ಸೋಫಿಯಾ ಡಂಕ್ಲಿ (74; 127ಎಸೆತ, 9 ಬೌಂಡರಿ) ಅವರ ಅಜೇಯ ಅರ್ಧಶತಕ ಮತ್ತು 10ನೇ ಕ್ರಮಾಂಕದ ಅನ್ಯಾ ಶ್ರಬ್‌ಸೋಲ್ (47; 33 ಎ, 6 ಬೌಂ, 1 ಸಿಕ್ಸರ್‌) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ಮಹಿಳಾ ತಂಡ ಭಾರತ ಮಹಿಳೆಯರ ಎದುರಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ಉತ್ತಮ ಮೊತ್ತ ಪೇರಿಸಿದೆ.

ಎರಡನೇ ದಿನವಾದ ಗುರುವಾರ ಹೀಥರ್ ನೈಟ್ ಬಳಗ ಮೊದಲ ಇನಿಂಗ್ಸ್‌ನಲ್ಲಿ ಒಂಬತ್ತು ವಿಕೆಟ್‌ಗಳಿಗೆ 396 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇನಿಂಗ್ಸ್‌ ಆರಂಭಿಸಿರುವ ಮಿಥಾಲಿ ರಾಜ್ ನೇತೃತ್ವದ ಭಾರತ ತಂಡಕ್ಕೆ ಸ್ಮೃತಿ ಮಂದಾನ ಮತ್ತು ಶಫಾಲಿ ವರ್ಮಾ ಉತ್ತಮ ಆರಂಭ ಒದಗಿಸಿದ್ದಾರೆ.

ಬುಧವಾರ ಅರು ವಿಕೆಟ್‌ಗಳಿಗೆ 296 ರನ್ ಗಳಿಸಿದ್ದ ಇಂಗ್ಲೆಂಡ್‌ ಬೆಳಿಗ್ಗೆ ಮೊದಲ ಅವಧಿಯಲ್ಲಿ ಕ್ಯಾಥರಿನ್ ಬ್ರೂಂಟ್ ಮತ್ತು ಸೋಫಿ ಎಕ್ಲೆಸ್ಟೋನ್ ಅವರನ್ನು ಕಳೆದುಕೊಂಡಿತು. ಆದರೆ ಸೋಫಿ ಕ್ರೀಸ್‌ನಲ್ಲಿ ತಳವೂರಿ ಭಾರತದ ಬೌಲರ್‌ಗಳನ್ನು ಕಾಡಿದರು. ಅವರೊಂದಿಗೆ ಒಂಬತ್ತನೇ ವಿಕೆಟ್‌ಗೆ ಆನ್ಯಾ 70 ರನ್‌ಗಳ ಜೊತೆಯಾಟ ಆಡಿದರು. ಹೀಗಾಗಿ ತಂಡಕ್ಕೆ ಮೊದಲ ದಿನದ ಮೊತ್ತಕ್ಕೆ 127 ರನ್ ಸೇರಿಸಲು ಸಾಧ್ಯವಾಯಿತು. ಅನ್ಯಾ ಔಟಾದ ಕೂಡಲೇ ನಾಯಕಿ ಇನಿಂಗ್ಸ್ ಡಿಕ್ಲೇರ್ ಮಾಡಿದರು.

ಪದಾರ್ಪಣೆ ಪಂದ್ಯದಲ್ಲಿ ಮಿಂಚಿದ ಆಫ್ ಸ್ಪಿನ್ನರ್ ಸ್ನೇಹ್ ರಾಣಾ ನಾಲ್ಕು ವಿಕೆಟ್ ಕಬಳಿಸಿದರು. ಅನುಭವಿ ಸ್ಪಿನ್ನರ್ ದೀಪ್ತಿ ಶರ್ಮಾ ಕೂಡ ಉತ್ತಮ ದಾಳಿ ಸಂಘಟಿಸಿದರು.

ಭಾರತದ ಆರಂಭಿಕ ಜೋಡಿ ಚಹಾ ವಿರಾಮದ ವೇಳೆ 23 ಓವರ್‌ಗಳಲ್ಲಿ 63 ರನ್ ಸೇರಿಸಿದೆ. ನಿಗದಿಯ ಓವರ್‌ಗಳ ಪಂದ್ಯಗಳಲ್ಲಿ ಸ್ಫೋಟಕ ಶೈಲಿಯ ಬ್ಯಾಟಿಂಗ್ ಮಾಡುವ ಶಫಾಲಿ ವರ್ಮಾ ಇಲ್ಲಿ ತಾಳ್ಮೆಯಿಂದ ಬೌಲರ್‌ಗಳನ್ನು ಎದುರಿಸಿದರು. 73 ಎಸೆತಗಳಲ್ಲಿ 35 ರನ್ ಗಳಿಸಿರುವ ಅವರು ಒಂದು ಸಿಕ್ಸರ್ ಮತ್ತು ಐದು ಬೌಂಡರಿ ಸಿಡಿಸಿದ್ದಾರೆ. ಆಕರ್ಷಕ ಶೈಲಿಯ ಬ್ಯಾಟರ್ ಸ್ಮೃತಿ ಮಂದಾನ 65 ಎಸೆತಗಳಲ್ಲಿ ನಾಲ್ಕು ಬೌಂಡರಿಗಳೊಂದಿಗೆ 27 ರನ್ ಗಳಿಸಿದ್ದಾರೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಇಂಗ್ಲೆಂಡ್‌ (ಬುಧವಾರ 92 ಓವರ್‌ಗಳಲ್ಲಿ 6ಕ್ಕೆ 269): 121.2 ಓವರ್‌ಗಳಲ್ಲಿ 9ಕ್ಕೆ 396 ಡಿಕ್ಲೇರ್ (ಸೋಫಿಯಾ ಡಂಕ್ಲಿ ಔಟಾಗದೆ 74, ಅನ್ಯಾ ಶ್ರಬ್‌ಸೋಲ್ 47; ಸ್ನೇಹ್ ರಾಣಾ 131ಕ್ಕೆ 4, ದೀಪ್ತಿ ಶರ್ಮಾ 65ಕ್ಕೆ3, ಜೂಲನ್ ಗೋಸ್ವಾಮಿ 58ಕ್ಕೆ1, ಪೂಜಾ ವಸ್ತ್ರಕಾರ್ 53ಕ್ಕೆ1); ಭಾರತ: 23 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 63 (ಸ್ಮೃತಿ ಮಂದಾನ 27, ಶಫಾಲಿ ವರ್ಮಾ 35). ವಿವರ ಅಪೂರ್ಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು