ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದಿನ ಕ್ರಿಕೆಟ್‌ಗೆ ಘೋಷಿಸಿದ್ದ ನಿವೃತ್ತಿಯಿಂದ ಹಿಂದೆ ಸರಿದ ಬೆನ್‌ ಸ್ಟೋಕ್ಸ್‌

ನ್ಯೂಜಿಲೆಂಡ್‌ ವಿರುದ್ಧದ ಇಂಗ್ಲೆಂಡ್‌ ತಂಡದಲ್ಲಿ ಸ್ಥಾನ
Published 16 ಆಗಸ್ಟ್ 2023, 15:51 IST
Last Updated 16 ಆಗಸ್ಟ್ 2023, 15:51 IST
ಅಕ್ಷರ ಗಾತ್ರ

ಲಂಡನ್‌: ಭಾರತದಲ್ಲಿ ನಡೆಯಲಿರುವ 50 ಓವರುಗಳ ವಿಶ್ವಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ಯತ್ನದಲ್ಲಿ ಇಂಗ್ಲೆಂಡ್‌ ತಂಡ ಇರುವಂತೆಯೇ, ಆಲ್‌ ರೌಂಡರ್‌ ಬೆನ್‌ ಸ್ಟೋಕ್ಸ್‌ ಅವರು ಏಕದಿನ ಕ್ರಿಕೆಟ್‌ಗೆ ಘೋಷಿಸಿದ್ದ ನಿವೃತ್ತಿಯಿಂದ ಹಿಂದೆ ಸರಿದಿದ್ದಾರೆ.

ವಿವಿಧ ಮಾದರಿಗಳ ಅತಿಯಾದ ಕಾರ್ಯಭಾರ ಮತ್ತು ಎಡ ಮೊಣಕಾಲಿನ ನೋವಿನಿಂದಾಗಿ ಸ್ಟೋಕ್ಸ್‌ ಅವರು 13 ತಿಂಗಳ ಹಿಂದೆ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅವರು ಸದ್ಯ ಟೆಸ್ಟ್‌ ತಂಡದ ನಾಯಕರಾಗಿದ್ದಾರೆ.

ಸ್ವದೇಶದಲ್ಲಿ ಇತ್ತೀಚೆಗೆ ನಡೆದ ಆ್ಯಷಸ್‌ ಸರಣಿಯ ಕೊನೆಯ ಮೂರು ಟೆಸ್ಟ್‌ಗಳಲ್ಲಿ ಸ್ಟೋಕ್ಸ್‌ ಬೌಲಿಂಗ್‌ ಮಾಡಿರಲಿಲ್ಲ. 

ನ್ಯೂಜಿಲೆಂಡ್ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ ಏಕದಿನ ಪಂದ್ಯಗಳ ಸರಣಿಗಾಗಿ ಇಂಗ್ಲೆಂಡ್‌ ಆಯ್ಕೆಗಾರರು ಬುಧವಾರ ಪ್ರಕಟಿಸಿರುವ 15 ಸದಸ್ಯರ ತಂಡದಲ್ಲಿ 32 ವರ್ಷದ ಸ್ಟೋಕ್ಸ್ ಸ್ಥಾನ ಪಡೆದಿದ್ದಾರೆ. ಹೀಗಾಗಿ ಅಕ್ಟೋಬರ್‌– ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯುವ ವಿಶ್ವಕಪ್‌ ಟೂರ್ನಿಯಲ್ಲಿ ಅವರು ಪರಿಣತ ಬ್ಯಾಟ್ಸ್‌ಮನ್ ಆಗಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2019ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ಗೆಲುವಿನ ರೂವಾರಿಗಳಲ್ಲಿ ಸ್ಟೋಕ್ಸ್‌ ಒಬ್ಬರಾಗಿದ್ದರು.

‘ಪಂದ್ಯ ಗೆಲ್ಲಿಸುವ ತಾಕತ್ತು ಮತ್ತು ನಾಯಕತ್ವದ ಗುಣಗಳಿಂದಾಗಿ ಸ್ಟೋಕ್ಸ್‌ ಅವರ ಪುನರಾಗಮನ ತಂಡದ ಬಲ ಹೆಚ್ಚಿಸಲಿದೆ’ ಎಂದು ಇಂಗ್ಲೆಂಡ್‌ ತಂಡದ ಆಯ್ಕೆಗಾರ ಲ್ಯೂಕ್ ರೈಟ್‌ ತಿಳಿಸಿದರು.

2022–23ನೇ ಸಾಲಿನಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ವಿರುದ್ಧ ಶತಕಗಳನ್ನು ದಾಖಲಿಸಿದ್ದ ಡೇವಿಡ್‌ ಮಲಾನ್ ಅವರನ್ನು, ಹ್ಯಾರಿ ಬ್ರೂಕ್ ಸ್ಥಾನದಲ್ಲಿ ತೆಗೆದುಕೊಳ್ಳಲಾಗಿದೆ.

ಸರ್‍ರೆ ತಂಡದ ವೇಗದ ಬೌಲರ್‌ ಗಸ್‌ ಅಟ್ಕಿನ್ಸನ್ ಅವರು ತಂಡದಲ್ಲಿ ಅವಕಾಶ ಪಡೆದಿರುವ ಹೊಸಮುಖ. 25 ವರ್ಷದ ಅಟ್ಕಿನ್ಸನ್‌ ಮೂರೂ ಮಾದರಿಗಳಲ್ಲಿ ಇತ್ತೀಚೆಗೆ ಉತ್ತಮ ಪ್ರದರ್ಶನ ನೀಡಿದ್ದರು. ಓವಲ್‌ ಇನ್ವಿನ್ಸಿಬಲ್ಸ್‌ ಪರ ‘ದಿ ಹಂಡ್ರೆಡ್‌’ ಟೂರ್ನಿಯಲ್ಲಿ ಅವರು 153 ಕಿ.ಮೀ. ವೇಗದಲ್ಲಿ ಬೌಲ್‌ ಮಾಡಿ ಗಮನ ಸೆಳೆದಿದ್ದರು. ಜೋಫ್ರಾ ಆರ್ಚರ್‌, ವಿಶ್ವಕಪ್‌ ವೇಳೆಗೆ ಚೇತರಿಸಿಕೊಳ್ಳುವುದು ಅನುಮಾನವಾಗಿರುವ ಕಾರಣ ಅಟ್ಕಿನ್ಸನ್‌ ಉತ್ತಮ ಸಾಮರ್ಥ್ಯ ತೋರುವ ವಿಶ್ವಾಸದಲ್ಲಿದ್ದಾರೆ.

ಇಂಗ್ಲೆಂಡ್‌ ತನ್ನ ಮೊದಲ ಏಕದಿನ ಪಂದ್ಯವನ್ನು ಕಿವೀಸ್‌ ವಿರುದ್ಧ ಸೆ. 8ರಂದು ಕಾರ್ಡಿಫ್‌ನಲ್ಲಿ ಆಡಲಿದೆ. ಸೆ. 10,13 ಮತ್ತು 15ರಂದು ಉಳಿದ ಮೂರು ಪಂದ್ಯಗಳು ನಡೆಯಲಿವೆ. ಐರ್ಲೆಂಡ್‌ ವಿರುದ್ಧ ಸರಣಿಗೆ ಮುಂದೆ ಪ್ರತ್ಯೇಕ ತಂಡವನ್ನು ಪ್ರಕಟಿಸಲು ನಿರ್ಧರಿಸಲಾಗಿದೆ.

ನ್ಯೂಜಿಲೆಂಡ್‌ ವಿರುದ್ಧ ಆಗಸ್ಟ್‌ 30 ರಿಂದ ಸೆಪ್ಟೆಂಬರ್‌ 5ರನಡುವೆ ನಾಲ್ಕು ಟಿ–20 ಪಂದ್ಯಗಳನ್ನೂ ಇಂಗ್ಲೆಂಡ್‌ ಆಡಲಿದೆ. ಹ್ಯಾಂಪ್‌ಶೈರ್‌ನ ವೇಗಿ ಜಾನ್‌ ಟರ್ನರ್‌ ಟಿ–20 ಸೀನಿಯರ್‌ ತಂಡದಲ್ಲಿ ಮೊದಲ ಬಾರಿ ಸ್ಥಾನ ಪಡೆದಿದ್ದಾರೆ.

ಇಂಗ್ಲೆಂಡ್‌ ತಂಡ ಹೀಗಿದೆ

ಏಕದಿನ: ಜೋಸ್‌ ಬಟ್ಲರ್‌ (ನಾಯಕ/ ವಿಕೆಟ್‌ ಕೀಪರ್‌), ಮೊಯೀನ್ ಅಲಿ, ಗಸ್‌ ಅಟ್ಕಿನ್ಸನ್‌, ಜಾನಿ ಬೇಸ್ಟೊ, ಸ್ಯಾಮ್ ಕರನ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌, ಡೇವಿಡ್‌ ಮಲಾನ್, ಅದಿಲ್‌ ರಶೀದ್, ಜೋ ರೂಟ್‌, ಜೇಸನ್ ರಾಯ್‌, ಬೆನ್ ಸ್ಟೋಕ್ಸ್, ರೀಸ್‌ ಟೋಪ್ಲೆ, ಡೇವಿಡ್‌ ವಿಲಿ, ಮಾರ್ಕ್ ವುಡ್‌ ಮತ್ತು ಕ್ರಿಸ್‌ ವೋಕ್ಸ್‌.

ಟಿ–20 ತಂಟ: ಜೋಸ್‌ ಬಟ್ಲರ್ (ನಾಯಕ/ ಕೀಪರ್‌), ರೆಹಾನ್ ಅಹ್ಮದ್, ಮೊಯೀನ್ ಅಲಿ, ಗಸ್‌ ಅಟ್ಕಿನ್ಸನ್‌, ಜಾನಿ ಬೇಸ್ಟೊ, ಹ್ಯಾರಿ ಬ್ರೂಕ್, ಸ್ಯಾಮ್‌ ಕರನ್‌, ಬೆನ್‌ ಡಕೆಟ್‌, ವಿಲ್‌ ಜಾಕ್ಸ್, ಲಿಯಾಮ್‌ ಲಿವಿಂಗ್‌ಸ್ಟೋನ್‌, ಡೇವಿಡ್‌ ಮಲಾನ್, ಅದಿಲ್ ರಶೀದ್‌, ಜೋಶ್‌ ಟಂಗ್‌, ಜಾನ್‌ ಟರ್ನರ್‌ ಮತ್ತು ಲ್ಯೂಕ್‌ ವುಡ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT