ಸೋಮವಾರ, ಅಕ್ಟೋಬರ್ 18, 2021
28 °C
ಗಾಯಾಳು ಆ್ಯಂಡ್ರೆ ರಸೆಲ್ ಆಡುವುದು ಸಂದೇಹ

ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಪಂದ್ಯ; ಡೆಲ್ಲಿಗೆ ಪ್ಲೇ ಆಫ್ ಹಂತದ ಮೇಲೆ ಕಣ್ಣು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶಾರ್ಜಾ: ಸತತ ನಾಲ್ಕು ಜಯದೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಹಂಚಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಸೆಣಸಲಿದೆ. ಶಾರ್ಜಾ ಕ್ರಿಕೆಟ್‌ ಅಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಪ್ಲೇ ಆಫ್‌ ಹಂತಕ್ಕೇರುವ ಕನಸಿನೊಂದಿಗೆ ತಂಡ ಕಣಕ್ಕೆ ಇಳಿಯಲಿದೆ.

ಕೋಲ್ಕತ್ತ ತಂಡದ ಸ್ಪಿನ್ನರ್ ಕುಲದೀಪ್ ಯಾದವ್ ಮೊಣಕಾಲು ಗಾಯದಿಂದ ಭಾರತಕ್ಕೆ ವಾಪಸಾಗಿದ್ದಾರೆ. ಆಲ್‌ರೌಂಡರ್ ಆ್ಯಂಡ್ರೆ ರಸೆಲ್ ಗಾಯಗೊಂಡಿದ್ದು ಮಂಗಳವಾರ ಆಡುವುದು ಸಂದೇಹ. ಇದು ಡೆಲ್ಲಿಯ ಭರವಸೆಯನ್ನು ಹೆಚ್ಚಿಸಿದೆ. ಈ ಬಾರಿ ಎಲ್ಲ ಎದುರಾಳಿ ತಂಡಗಳ ವಿರುದ್ಧವೂ ಅಮೋಘ ಸಾಮರ್ಥ್ಯ ತೋರಿರುವ ತಂಡ ಕೋಲ್ಕತ್ತ ವಿರುದ್ಧವೂ ಜಯಿಸುವ ವಿಶ್ವಾಸದಲ್ಲಿದೆ.

ಎರಡನೇ ಹಂತದ ಆರಂಭದಲ್ಲಿ ಉತ್ತಮ ಆಟವಾಡಿದ್ದ ಕೋಲ್ಕತ್ತ ನೈಟ್ ರೈಡರ್ಸ್‌ ಸತತ ಎರಡು ಪಂದ್ಯಗಳನ್ನು ಗೆದ್ದುಕೊಂಡಿತ್ತು. ಆದರೆ ಕಳೆದ ಪಂದ್ಯದಲ್ಲಿ ಸವಾಲಿನ ಮೊತ್ತ ಕಲೆ ಹಾಕಿದ್ದರೂ ಚೆನ್ನೈ ವಿರುದ್ಧ ಸೋತು ನಿರಾಸೆಗೆ ಒಳಗಾಗಿದೆ. ಹೀಗಾಗಿ ಮತ್ತೆ ಗೆಲುವಿನ ಹಾದಿಗೆ ಮರಳಿ ಪ್ಲೇ ಆಫ್ ಹಂತದ ಕನಸು ಜೀವಂತವಾಗಿರಿಸಿಕೊಳ್ಳುವುಕ್ಕಾಗಿ ಮಂಗಳವಾರ ಪ್ರಯತ್ನಿಸಲಿದೆ. ರಸೆಲ್ ಆಡದೇ ಇದ್ದರೆ ವೇಗದ ಬೌಲಿಂಗ್ ವಿಭಾಗದ ಜವಾಬ್ದಾರಿ ಪ್ರಸಿದ್ಧ ಕೃಷ್ಣ ಅವರ ಹೆಗಲ ಮೇಲೆ ಬೀಳಲಿದೆ.

ನಾಯಕ ಏಯಾನ್ ಮಾರ್ಗನ್‌, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ದಿನೇಶ್ ಕಾರ್ತಿಕ್‌, ನಿತೀಶ್ ರಾಣಾ, ವೆಂಕಟೇಶ್ ಅಯ್ಯರ್ ಮತ್ತು ಶುಭಮನ್ ಗಿಲ್ ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದು ರಾಹುಲ್ ತ್ರಿಪಾಠಿ ಅವರ ಮೇಲೆಯೂ ನಿರೀಕ್ಷೆ ಇದೆ. ಡೆಲ್ಲಿ ತಂಡದ ನಾಯಕ ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಶಿಖರ್ ಧವನ್‌, ಪೃಥ್ವಿ ಶಾ ಮತ್ತು ಶಿಮ್ರಾನ್ ಹೆಟ್ಮೆಯರ್ ಯಾವುದೇ ಬೌಲರ್‌ಗಳ ವಿರುದ್ಧ ಸಿಡಿಯಬಲ್ಲ ತಾಕತ್ತು ಹೊಂದಿದ್ದಾರೆ. ಆ್ಯನ್ರಿಚ್ ನಾರ್ಕಿಯ, ಕಗಿಸೊ ರಬಾಡ ಮತ್ತು ಆವೇಶ್ ಖಾನ್ ಅವರ ವೇಗದ ದಾಳಿಗೆ ರವಿಚಂದ್ರನ್ ಅಶ್ವಿನ್ ಹಾಗೂ ಅಕ್ಷರ್ ಪಟೇಲ್ ಅವರ ಸ್ಪಿನ್ ಬೌಲಿಂಗ್ ಬಲವೂ ಇದೆ.

ಪಂಜಾಬ್‌ ಕಿಂಗ್ಸ್‌ಗೆ ಮುಂಬೈ ಸವಾಲು

ಅಬುಧಾಬಿ (‍ಪಿಟಿಐ): ಹ್ಯಾಟ್ರಿಕ್ ಸೋಲಿನ ಕಹಿ ಅನುಭವಿಸಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮಂಗಳವಾರದ ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಲಿದೆ. ಐದು ಬಾರಿಯ ಚಾಂಪಿಯನ್ ಮುಂಬೈ ಎರಡನೇ ಹಂತದ ಆರಂಭದಿಂದಲೇ ಮುಗ್ಗರಿಸುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೊತ್ತವನ್ನು ಬೆನ್ನತ್ತುವಲ್ಲಿ ವಿಫಲವಾಗಿದ್ದ ತಂಡ ಕೋಲ್ಕತ್ತ ನೈಟ್ ರೈಡರ್ಸ್ ತಂವಡನ್ನು ಕಟ್ಟಿಹಾಕಲು ಸಾಧ್ಯವಾಗದೇ ಸೋತಿತ್ತು.

ಮುಂಬೈ ಇಂಡಿಯನ್ಸ್‌ಗೆ ಈ ಬಾರಿ ಬ್ಯಾಟಿಂಗ್ ವಿಭಾಗದ್ದೇ ಚಿಂತೆ. ತಂಡದ ಪ್ರಮುಖ ಆಟಗಾರರಾದ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಅವರ ಬ್ಯಾಟಿಂದ ನಿರೀಕ್ಷಿತ ಪ್ರಮಾಣದಲ್ಲಿ ರನ್‌ಗಳು ಬರುತ್ತಿಲ್ಲ. ರೋಹಿತ್ ಶರ್ಮಾ ಅವರಿಗೂ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಹಿಂದಿನ ಎರಡು ಪಂದ್ಯಗಳಲ್ಲಿ ಅವರು ಕ್ರಮವಾಗಿ 33 ಮತ್ತು 43 ರನ್ ಗಳಿಸಿದ್ದರು. ಫಿಟ್‌ನೆಸ್ ಸಮಸ್ಯೆಯಿಂದಾಗಿ ಎರಡು ಪಂದ್ಯಗಳಲ್ಲಿ ಆಡದೇ ಇದ್ದ ಹಾರ್ದಿಕ್ ಪಾಂಡ್ಯ ಆರ್‌ಸಿಬಿ ಎದುರು ಕಣಕ್ಕೆ ಇಳಿದಿದ್ದರು. ಆದರೆ ಗಮನಾರ್ಹ ಸಾಧನೆ ಮಾಡಲು ಅಗಲಿಲ್ಲ.

ಎರಡನೇ ಹಂತದ ಮೊದಲ ಎರಡು ಪಂದ್ಯಗಳಲ್ಲಿ ನಿರಾಸೆ ಕಂಡಿದ್ದ ಪಂಜಾಬ್ ಕಿಂಗ್ಸ್ ಹಿಂದಿನ ಪಂದ್ಯದಲ್ಲಿ ಕಡಿಮೆ ಮೊತ್ತ ಗಳಿಸಿದ್ದರೂ ಸನ್‌ರೈಸರ್ಸ್ ವಿರುದ್ಧ ಗೆದ್ದಿತ್ತು. ಬೌಲರ್‌ಗಳು ತಂಡಕ್ಕೆ ಜಯದ ಕಾಣಿಕೆ ನೀಡಿದ್ದರು. ತಂಡದಲ್ಲಿ ಭಾರತ ಮತ್ತು ವಿದೇಶದ ಅತ್ಯುತ್ತಮ ಆಟಗಾರರು ಇದ್ದಾರೆ. ಅರಂಭಿಕ ಜೋಡಿ ಕೆ.ಎಲ್.ರಾಹುಲ್ ಮತ್ತು ಮಯಂಕ್ ಅಗರವಾಲ್ ಉತ್ತಮ ಫಾರ್ಮ್‌ನಲ್ಲಿದ್ದು ಕ್ರಿಸ್ ಗೇಲ್‌, ಏಡನ್ ಮರ್ಕರಮ್ ಮತ್ತು ನಿಕೋಲಸ್ ಪೂರನ್ ಮೇಲೆ ಭರವಸೆ ಇದೆ. ಬೌಲಿಂಗ್ ವಿಭಾಗ ಬಲಿಷ್ಠವಾಗಿದ್ದು ಮೊಹಮ್ಮದ್ ಶಮಿ, ಆರ್ಷದೀಪ್ ಸಿಂಗ್‌, ರವಿ ಬಿಷ್ನೋಯಿ ಮುಂತಾದವರು ಎದುರಾಳಿಗಳನ್ನು ಕಾಡಬಲ್ಲರು. 

ತವರಿಗೆ ಮರಳಿದ ಕುಲದೀಪ್ ಯಾದವ್ 

ನವದೆಹಲಿ (ಪಿಟಿಐ): ಕೋಲ್ಕತ್ತ ನೈಟ್ ರೈಡರ್ಸ್ ತಂಡದಲ್ಲಿದ್ದ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಮೊಣಕಾಲಿಗೆ ಗಾಯಗೊಂಡಿದ್ದು ತವರಿಗೆ ವಾಪಸಾಗಿದ್ದಾರೆ. ಈ ಬಾರಿಯ ದೇಶಿ ಕ್ರಿಕೆಟ್‌ನಲ್ಲಿ ಅವರು ಆಡುವುದು ಸಂದೇಹ ಎಂದು ಹೇಳಲಾಗಿದೆ. 

ಕುಲದೀಪ್ ಈಚೆಗೆ ಮುಂಬೈಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಈಗ ಕಾಣಿಸಿಕೊಂಡಿರುವ ನೋವಿನಿಂದ ಚೇತರಿಸಿಕೊಂಡು ಅಂಗಣಕ್ಕೆ ಮರಳಲು ನಾಲ್ಕರಿಂದ ಆರು ತಿಂಗಳು ಬೇಕಾಗಬಹುದು ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು