ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್‌ ಎದುರಿನ ಪಂದ್ಯದಲ್ಲಿ ಚೆನ್ನೈಗೆ ಬ್ಯಾಟಿಂಗ್ ಚಿಂತೆ

Last Updated 12 ಅಕ್ಟೋಬರ್ 2020, 19:50 IST
ಅಕ್ಷರ ಗಾತ್ರ
ADVERTISEMENT
""
""
""

ದುಬೈ: ಸತತ ಸೋಲಿನಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತು ಇನ್ನೂ ಸ್ಥಿರ ಪ್ರದರ್ಶನ ತೋರಲು ಸಾಧ್ಯವಾಗದ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ ಸೆಣಸಲಿವೆ.

ಎರಡೂ ತಂಡಗಳು ಈ ವರೆಗೆ ಏಳು ಪಂದ್ಯಗಳನ್ನು ಆಡಿದ್ದು ಚೆನ್ನೈ ಕೇವಲ ಎರಡು ಜಯದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಸನ್‌ರೈಸರ್ಸ್ ಐದನೇ ಸ್ಥಾನದಲ್ಲಿದ್ದು ಏಳು ಪಂದ್ಯಗಳಲ್ಲಿ ನಾಲ್ಕು ಜಯ ಸಾಧಿಸಿದೆ.

ಮೂರು ಬಾರಿಯ ಚಾಂಪಿಯನ್ ಮತ್ತು ಕಳೆದ ಬಾರಿಯ ರನ್ನರ್ ಅಪ್ ಚೆನ್ನೈ ತಂಡ ಬ್ಯಾಟಿಂಗ್‌ನಲ್ಲಿ ಸತತ ವೈಫಲ್ಯ ಕಾಣುತ್ತಿದೆ. ಈ ಬಾರಿ ಅಸ್ಥಿತ್ವ ಉಳಿಸಿಕೊಳ್ಳಬೇಕಾದರೆ ಉಳಿದ ಪಂದ್ಯಗಳಲ್ಲಿ ಗೆಲುವು ಅನಿವಾರ್ಯ ಎಂಬ ಪರಿಸ್ಥಿತಿಗೆ ಸಿಲುಕಿರುವ ತಂಡ ತೀವ್ರ ಒತ್ತಡದಲ್ಲಿದೆ.

ಗುರಿ ಬೆನ್ನತ್ತುವುದರಲ್ಲಿ ತನ್ನದೇ ಛಾಪು ಮೂಡಿಸಿರುವ ಚೆನ್ನೈಗೆ ‘ಚೇಸ್‌ ಮಾಸ್ಟರ್‌’ ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಂದಲೇ ಸರಿಯಾದ ಕಾಣಿಕೆ ಸಿಗುತ್ತಿಲ್ಲ. ಫಾಫ್ ಡು ಪ್ಲೆಸಿ ಮತ್ತು ಶೇನ್ ವಾಟ್ಸನ್ ಉತ್ತಮ ಆರಂಭ ಒದಗಿಸುತ್ತಿದ್ದರೂ ಮಧ್ಯಮ ಕ್ರಮಾಂಕದಲ್ಲಿ ನೆಲೆಯೂರಲು ಬ್ಯಾಟ್ಸ್‌ಮನ್‌ಗಳಿಗೆ ಸಾಧ್ಯವಾಗುತ್ತಿಲ್ಲ.

ಕಳಪೆ ಪ್ರದರ್ಶನ ನೀಡಿದ ಕೇದಾರ್ ಜಾಧವ್ ಅವರನ್ನು ಕಳೆದ ಪಂದ್ಯದಲ್ಲಿ ಹೊರಗಿಟ್ಟ ತಂಡ ನಾರಾಯಣ್ ಜಗದೀಶನ್ ಅವರನ್ನು ಕಣಕ್ಕೆ ಇಳಿಸಿತ್ತು. ಅಂಬಟಿ ರಾಯುಡು ಜೊತೆ ನಾರಾಯಣ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆದರೆ ಈ ಜೊತೆಯಾಟದ ಲಾಭ ಪಡೆದುಕೊಳ್ಳುವಲ್ಲಿ ತಂಡ ವಿಫಲವಾಗಿತ್ತು. ಸ್ಯಾಮ್ ಕರನ್, ರವೀಂದ್ರ ಜಡೇಜ ಮತ್ತು ಡ್ವೇನ್ ಬ್ರಾವೊ ವೈಫಲ್ಯ ಕಂಡಿದ್ದರು.

ಬೌಲಿಂಗ್‌ನಲ್ಲೂ ಅಷ್ಟೇ; ದೀಪಕ್ ಚಾಹರ್ ಮತ್ತು ಜಡೇಜ ಉತ್ಮಮ ಕಾಣಿಕೆ ನೀಡುತ್ತಿದ್ದರೂ ಕರನ್, ಶಾರ್ದೂಲ್ ಠಾಕೂರ್ ಮತ್ತು ಕರ್ಣ ಶರ್ಮಾ ಅವರಿಗೆ ಲಯ ಕಂಡುಕೊಳ್ಳಲು ಆಗಲಿಲ್ಲ. ಈ ಎಲ್ಲ ಲೋಪಗಳನ್ನು ಸರಿಪಡಿಸಿಕೊಂಡು ಕಣಕ್ಕೆ ಇಳಿಯುವ ಸಿದ್ಧತೆಯಲ್ಲಿರುವ ತಂಡ ಕಳೆದ ಪಂದ್ಯದಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸುವುದಕ್ಕೂ ಸಜ್ಜಾಗಿದೆ.

ಭರವಸೆಯಲ್ಲಿ ಸನ್‌ರೈಸರ್ಸ್‌

ಮೊದಲ ಸುತ್ತಿನ ಪಂದ್ಯದಲ್ಲಿ ಚೆನ್ನೈ ವಿರುದ್ಧ ಏಳು ವಿಕೆಟ್‌ಗಳ ಜಯ ಗಳಿಸಿರುವ ಸನ್‌ರೈಸರ್ಸ್ ಈಗ ಭರವಸೆಯಲ್ಲಿದೆ. ಆದರೆ ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಅನುಭವಿಸಿದ ಐದು ರನ್‌ಗಳ ಸೋಲು ಆ ತಂಡವನ್ನು ಕಾಡುತ್ತಿದೆ. ಆ ಪಂದ್ಯದಲ್ಲಿ 158 ರನ್‌ ಗಳಿಸಿದ್ದರೂ ಎದುರಾಳಿಗಳನ್ನು ಒಂದು ಹಂತದ ವರೆಗೆ ನಿಯಂತ್ರಿಸುವಲ್ಲಿ ಹೈದರಾಬಾದ್ ಯಶಸ್ವಿಯಾಗಿತ್ತು. ನಂತರ ಎಡವಿತ್ತು.

ನಾಯಕ ಡೇವಿಡ್ ವಾರ್ನರ್ ಮತ್ತು ಜಾನಿ ಬೆಸ್ಟೋ ಅವರಿಗೆ ಆರಂಭದಲ್ಲಿ ಉತ್ತಮ ರನ್ ಕಲೆ ಹಾಕಲು ಸಾಧ್ಯವಾಗುತ್ತಿದೆ. ಮಧ್ಯಮ ಕ್ರಮಾಂಕದ ಮನೀಷ್ ಪಾಂಡೆ, ಕೇನ್ ವಿಲಿಯಮ್ಸನ್ ಮುಂತಾದವರ ಬ್ಯಾಟ್‌ನಿಂದಲೂ ರನ್‌ ಬರುತ್ತಿದೆ. ಆದ್ದರಿಂದ ಬ್ಯಾಟಿಂಗ್ ಬಳಗದ ಬಗ್ಗೆ ತಂಡಕ್ಕೆ ಚಿಂತೆ ಇಲ್ಲ. ಆದರೆ ಬೌಲಿಂಗ್‌ ವಿಭಾಗ ಬಲಗೊಳ್ಳಬೇಕಾದ ಅಗತ್ಯವಿದೆ. ಭುವನೇಶ್ವರ್ ಕುಮಾರ್ ಮತ್ತು ಮಿಷೆಲ್ ಮಾರ್ಶ್ ಅನುಪಸ್ಥಿತಿಯಲ್ಲಿ ರಶೀದ್ ಖಾನ್ ಮತ್ತು ಯಾರ್ಕರ್ ತಜ್ಞ ಟಿ.ನಟರಾಜನ್ ಅವರ ಮೇಲೆ ಹೊರೆ ಹೆಚ್ಚಾಗಿದೆ. ಸಂದೀಪ್ ಶರ್ಮಾ, ಖಲೀಲ್ ಅಹಮ್ಮದ್ ಮತ್ತು ಅಭಿಷೇಕ್ ಶರ್ಮಾ ಲಯಕ್ಕೆ ಮರಳಿದರೆ ತಂಡ ಚಿಂತೆ ಬಿಟ್ಟು ಆಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT