ಮಂಗಳವಾರ, ಆಗಸ್ಟ್ 4, 2020
22 °C
ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಮೈಕೆಲ್‌ ಹಸ್ಸಿ ಅಭಿಪ್ರಾಯ

ಟಿ20 ವಿಶ್ವಕಪ್‌ ಆಯೋಜನೆಗೆ ಕೋವಿಡ್‌ ದುಃಸ್ವಪ್ನವಾಗಿ ಕಾಡಬಹುದು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಆಸ್ಟ್ರೇಲಿಯಾ ಆತಿಥ್ಯ ವಹಿಸಲಿರುವ ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್‌ ಈ ವರ್ಷದ ಅಕ್ಟೋಬರ್‌–ನವೆಂಬರ್‌ನಲ್ಲಿ ನಡೆಯಲಿದೆಯೇ ಎಂಬುದರ ಕುರಿತು ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಮೈಕೆಲ್‌ ಹಸ್ಸಿ ಆತಂಕ ವ್ಯಕ್ತಪಡಿಸಿದ್ದಾರೆ. ಕೋವಿಡ್‌–19 ಪ್ರಕರಣಗಳಲ್ಲಿ ದಿನದಿಂದ ಏರಿಕೆ ಕಂಡುಬರುತ್ತಿದ್ದು, ಟೂರ್ನಿಯ ಆಯೋಜನೆಗೆ ದುಸ್ವಪ್ನವಾಗಿ ಕಾಡಬಹುದು ಎಂದು ಅವರು ಹೇಳಿದ್ದಾರೆ.

ಸದ್ಯದ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಟೂರ್ನಿಯನ್ನು ನಿಗದಿತ ವೇಳಾಪಟ್ಟಿಯ ಪ್ರಕಾರ ನಡೆಸುವುದು ‘ಅವಾಸ್ತವ’ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ಹೇಳಿತ್ತು. ಆದರೆ ಈ ಕುರಿತು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್ (ಐಸಿಸಿ)‌ ಇನ್ನಷ್ಟೇ ನಿರ್ಧಾರ ತೆಗೆದುಕೊಳ್ಳಬೇಕಿದೆ. ವಿಶ್ವಕಪ್‌ ಈ ವರ್ಷವೇ ನಡೆಯಬಹುದೆ ಎಂಬುದರ ಬಗ್ಗೆಯೂ ಹಸ್ಸಿ ಅವರಿಗೆ ಸಂದೇಹವಿದೆ.

‘ಟ್ವೆಂಟಿ–20 ವಿಶ್ವಕಪ್‌ ಟೂರ್ನಿಯ ಬಗ್ಗೆ ನಿಜವಾಗಿಯೂ ನನಗೆ ಆತಂಕವಿದೆ. ಅದಕ್ಕೆ ಕಾರಣವೂ ಇದೆ. ಸದ್ಯದ ಸ್ಥಿತಿಯಲ್ಲಿ ಒಂದು ತಂಡವನ್ನು ಕರೆಸಿ ಅಂತರರಾಷ್ಟ್ರೀಯ ಕ್ರಿಕೆಟ್‌ ಆಡಿಸುವುದು, ಸುರಕ್ಷಿತ ವಾತಾವರಣದಲ್ಲಿ ಆಟಗಾರರನ್ನು ಇರಿಸುವುದು ಸರಿಯೆನ್ನಿಸಬಹುದು. ಆದರೆ ಹಲವು ತಂಡಗಳು ಭಾಗವಹಿಸುವ ಟೂರ್ನಿಯಲ್ಲಿ ಪ್ರತ್ಯೇಕವಾಗಿರಿಸುವಿಕೆ, ದೇಶದ ದೇಶ ಬೇರೆ ಕ್ರೀಡಾಂಗಣಗಳಲ್ಲಿ ಆಡಿಸುವುದಕ್ಕೆ ತೊಂದರೆಯಾಗಬಹುದು. ಅದೊಂದು ವ್ಯವಸ್ಥಾಪನಾ ದುಃಸ್ವಪ್ನವಾಗಬಹುದು’ ಎಂದು ಹಾಟ್‌ಸ್ಪಾಟ್‌ ಎಂಬ ಪಾಡ್‌ಕಾಸ್ಟ್‌ನಲ್ಲಿ ಹಸ್ಸಿ ಹೇಳಿದ್ದಾರೆ.

‘ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸದ ಬಗ್ಗೆ ನನಗೆ ಸಂದೇಹವಿಲ್ಲ. ಒಂದೇ ತಂಡವಿರುವುದರಿಂದ ಹೆಚ್ಚು ಸಮಸ್ಯೆಯಾಗದು. ಉದಾಹರಣೆಗೆ ಅಡಿಲೇಡ್‌ ಓವಲ್‌ ಕ್ರೀಡಾಂಗಣದ ಪಕ್ಕದಲ್ಲೇ ಒಂದು ಹೊಟೇಲ್‌ ಇದೆ. ಹೀಗಾಗಿ ಭಾರತ ತಂಡ ಆ ಹೊಟೇಲ್‌ನಲ್ಲಿ ಉಳಿದುಕೊಂಡು, ತರಬೇತಿ ಹಾಗೂ ಸರಣಿಗೆ ಸಿದ್ಧವಾಗಬಹುದು’ ಎಂದು ಅವರು ಹೇಳಿದ್ದಾರೆ.

‘ಪರಿಸ್ಥಿತಿ ನಮ್ಮ ಕೈ ಮೀರಿದ್ದು, ಕೊರೊನಾ ಪಿಡುಗು ಸಮಸ್ಯೆಗಳನ್ನು ಸೃಷ್ಟಿಸುತ್ತಲೇ ಇದೆ. ಇರುವ ಸ್ಥಿತಿಯನ್ನು ಸ್ವೀಕರಿಸಿ ಮುನ್ನಡೆಯಬೇಕಾದ ಅಗತ್ಯವಿದೆ’ ಎಂದು ಹಸ್ಸಿ ನುಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು