ಬುಧವಾರ, ಏಪ್ರಿಲ್ 1, 2020
19 °C

ಹಾಕಿ ಲೀಗ್: ಹೋರಾಡಿ ಸೋತ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಭುವನೇಶ್ವರ: ಭಾರತ ಉತ್ತಮ ಹೋರಾಟ ಪ್ರದರ್ಶಿಸಿದರೂ, ಎಫ್‌ಐಎಚ್‌ ಪ್ರೊ ಲೀಗ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ತಂಡದ ಎದುರು ಶುಕ್ರವಾರ 3–4 ಗೋಲುಗಳ ಅಂತರದಿಂದ ಸೋಲನುಭವಿಸಬೇಕಾಯಿತು.

ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯ ಈ ಪಂದ್ಯದಲ್ಲಿ ವಿರಾಮದ ವೇಳೆ ಆಸ್ಟ್ರೇಲಿಯಾ 2–0 ಮುನ್ನಡೆ ಪಡೆದಿತ್ತು.

ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ತಂಡದ ಪರ ಡೀಲಾನ್‌ ವುದರ್‌ಸ್ಪೂನ್‌ (6ನೇ ನಿಮಿಷ), ಟಾಮ್‌ ವಿಕ್ಹಾಮ್‌ (18ನೇ), ಲಾಚ್ಲನ್‌ ಶಾರ್ಪ್‌ (41ನೇ) ಮತ್ತು ಜಾಕೋಬ್‌ ಆ್ಯಂಡರ್ಸನ್‌ (42ನೇ) ಅವರು ಗೋಲುಗಳನ್ನು ಗಳಿಸಿದರು.

ಭಾರತದ ಪರ ರಾಜಕುಮಾರ್‌ ಪಾಲ್‌ (36, 47ನೇ ನಿಮಿಷ) ಮತ್ತು ರೂಪಿಂದರ್‌ ಪಾಲ್‌ ಸಿಂಗ್‌ (52ನೇ ನಿಮಿಷ) ಗೋಲುಗಳನ್ನು ಹೊಡೆದರು

ಶನಿವಾರ ಇದೇ ಕ್ರೀಡಾಂಗಣದಲ್ಲಿ ಎರಡೂ ತಂಡಗಳು ಎರಡನೇ ಲೆಗ್‌ ಆಡಲು ಮುಖಾಮುಖಿಯಾಗಲಿವೆ.

ಐದು ಪಂದ್ಯಗಳನ್ನಾಡಿರುವ ಆಸ್ಟ್ರೇಲಿಯಾ ಈ ಗೆಲುವಿನಿಂದ ಒಟ್ಟಾರೆ 9 ಪಾಯಿಂಟ್ಸ್‌ ಸಂಗ್ರಹಿಸಿ ಲೀಗ್‌ನಲ್ಲಿ ಮೂರನೇ ಸ್ಥಾನಕ್ಕೇರಿತು. ಭಾರತ ಇಷ್ಟೇ ಪಂದ್ಯಗಳಿಂದ ಎಂಟು ಪಾಯಿಂಟ್ಸ್‌ ಸಂಗ್ರಹಿಸಿ ನಾಲ್ಕನೇ ಸ್ಥಾನದಲ್ಲಿದೆ.

ಆಸ್ಟ್ರೇಲಿಯಾ ವಿಶ್ವ ಹಾಕಿಯಲ್ಲಿ ಪ್ರಬಲ ತಂಡ ತಾನೆಂಬುದನ್ನು ನಿರ್ದಯ ಆಟದ ಮೂಲಕ ತೋರಿಸಿತು. ಆರನೇ ನಿಮಿಷವೇ ಶಾರ್ಪ್‌ ಅವರ ಉತ್ತಮ ಪಾಸ್‌ನಲ್ಲಿ ವುದರ್‌ಸ್ಪೂನ್‌ ಗೋಲುಪೆಟ್ಟಿಗೆಯ ಸಮೀಪದಿಂದ ಚೆಂಡನ್ನು ಗುರಿತಲುಪಿಸಿದರು. ಭಾರತ ಪ್ರತಿಹೋರಾಟ ತೋರಿದರೂ ಆಸ್ಟ್ರೇಲಿಯಾದ ರಕ್ಷಣಾ ವ್ಯೂಹವನ್ನು ಭೇದಿಸಲು ಆಗಲಿಲ್ಲ. 18ನೇ ನಿಮಿಷ ಎಡೀ ಒಕೆಂಡನ್‌ ಅವರ ಪಾಸ್‌ನಲ್ಲಿ ವಿಕ್ಹಾಮ್‌ ಚೆಂಡನ್ನು ಗುರಿತಲುಪಿಸಿ ಆತಿಥೇಯರ ಮೇಲೆ ಒತ್ತಡ ಹೆಚ್ಚಿಸಿದರು.

ಮೂರನೇ ಕ್ವಾರ್ಟರ್‌ನ ಐದನೇ ನಿಮಿಷ ರೂಪಿಂದರ್‌ ಅವರ ಡ್ರ್ಯಾಗ್‌ಫ್ಲಿಕ್‌ನಲ್ಲಿ ಗೋಲಿಗೆ ಕಳಿಸಿದ ಚೆಂಡನ್ನು ಜೇಕ್‌ ಹಾರ್ವಿ ಅಮೋಘವಾಗಿ ತಡೆದರು. ಆದರೆ ಮರು ನಿಮಿಷವೇ ಪೆನಾಲ್ಟಿ ಕಾರ್ನರ್‌ನಲ್ಲಿ ರಿಬೌಂಡ್‌ ಆದ ಚೆಂಡನ್ನು ರಾಜ್‌ಕುಮಾರ್‌ ಗುರಿತಲುಪಿಸಿದರು. ರೂಪಿಂದರ್‌ ಅವರ ಯತ್ನವನ್ನು ಗೋಲ್‌ ಕೀಪರ್‌ ಆ್ಯಂಡ್ರು ಚಾರ್ಟರ್‌ ಸರಿಯಾಗಿ ತಡೆಯದ ಪರಿಣಾಮ ಭಾರತಕ್ಕೆ ಈ ಅವಕಾಶ ದೊರೆಯಿತು.

ಆದರೆ ಆಸ್ಟ್ರೇಲಿಯಾ ಎರಡು ನಿಮಿಷಗಳ ಅಂತರದಲ್ಲಿ ಎರಡು ಗೋಲುಗಳನ್ನು ಗಳಿಸಿ ಮುನ್ನಡೆಯನ್ನು 4–1ಕ್ಕೆ ಹೆಚ್ಚಿಸಿ ‌ಬಿಗಿ ಹಿಡಿತ ಸಾಧಿಸಿತು. ಭಾರತ ಪ್ರತಿ ಹೋರಾಟ ತೋರಿದರೂ ಸೋಲಿನ ಅಂತರವನ್ನು ಇಳಿಸುವಷ್ಟಕ್ಕೆ ಸಮಾಧಾನಪಡಬೇಕಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು