ಟೆಸ್ಟ್ ಕ್ರಿಕೆಟ್‌ನಲ್ಲೂ ಫ್ರೀ ಹಿಟ್‌!

ಬುಧವಾರ, ಮಾರ್ಚ್ 27, 2019
26 °C
ಐದು ದಿನಗಳ ಪಂದ್ಯಗಳತ್ತ ಪ್ರೇಕ್ಷಕರನ್ನು ಸೆಳೆಯಲು ಹೊಸ ‘ತಂತ್ರ’ಗಳ ಬಳಕೆಗೆ ಶಿಫಾರಸು

ಟೆಸ್ಟ್ ಕ್ರಿಕೆಟ್‌ನಲ್ಲೂ ಫ್ರೀ ಹಿಟ್‌!

Published:
Updated:

ಲಂಡನ್‌: ನೋಬಾಲ್‌ಗೆ ಫ್ರೀ ಹಿಟ್‌, ಸಮಯ ವ್ಯರ್ಥ ಆಗುವುದನ್ನು ತಡೆಯಲು ಶಾಟ್ ಕ್ಲಾಕ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಏಕರೂಪದ ಚೆಂಡಿನ ಬಳಕೆ.. ಟೆಸ್ಟ್ ಪಂದ್ಯದಲ್ಲಿ ಇವೆಲ್ಲವೂ ಸಾಧ್ಯವಾಗುವ ದಿನ ದೂರ ಇಲ್ಲ.

ಟೆಸ್ಟ್ ಕ್ರಿಕೆಟ್‌ನತ್ತ ಪ್ರೇಕ್ಷಕರನ್ನು ಸೆಳೆಯುವಂತೆ ಮಾಡಲು ಪ್ರಯತ್ನಿಸುತ್ತಿರುವ ಮರ್ಲಿಬೋರ್ನ್‌ ಕ್ರಿಕೆಟ್ ಕ್ಲಬ್‌ಗೆ (ಎಂಸಿಸಿ) ತಜ್ಞರ ಸಮಿತಿ ಮಾಡಿರುವ ಶಿಫಾರಸಿನಲ್ಲಿ ಈ ಅಂಶಗಳು ಪ್ರಮುಖ ಸ್ಥಾನ ಪಡೆದಿವೆ. ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಆಕರ್ಷಕವಾಗಿಸುವ ನಿಟ್ಟಿನಲ್ಲಿ ಚರ್ಚಿಸಲು ಎಂಸಿಸಿ ಇತ್ತೀಚೆಗೆ ಬೆಂಗಳೂರಿನಲ್ಲಿ ಸಭೆ ನಡೆಸಿತ್ತು.

ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕ್‌ ಗ್ಯಾಟಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾರತದ ಹಿರಿಯ ಆಟಗಾರ ಸೌರವ್ ಗಂಗೂಲಿ ಕೂಡ ಪಾಲ್ಗೊಂಡಿದ್ದರು. ಇವರು ಮಾಡಿರುವ ಶಿಫಾರಸುಗಳನ್ನು ಎಂಸಿಸಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ನಿಧಾನಗತಿಯ ಬೌಲಿಂಗ್ ಟೆಸ್ಟ್ ಕ್ರಿಕೆಟ್‌ನಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಪ್ರೇಕ್ಷಕರು ಟೆಸ್ಟ್ ಬಗ್ಗೆ ನಿರಾಸಕ್ತಿ ಹೊಂದಲು ಇದು ಕೂಡ ಕಾರಣ. ಆದ್ದರಿಂದ ಶಾಟ್ ಕ್ಲಾಕ್ ಜಾರಿಗೆ ತಂದು ನಿಗದಿತ ಅವಧಿಯಲ್ಲಿ ಓವರ್‌ಗಳನ್ನು ಮುಗಿಸಲು ಪ್ರಯತ್ನಿಸಬೇಕಾಗಿದೆ ಎಂದು ಶಿಫಾರಸಿನಲ್ಲಿ ಹೇಳಲಾಗಿದೆ.

ಸ್ಪಿನ್ನರ್‌ಗಳು ಕಡಿಮೆ ಇರುವ ಇಂಗ್ಲೆಂಡ್‌, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಮತ್ತು ದಕ್ಷಿಣ ಆಫ್ರಿಕಾದಲ್ಲಿ ದಿನದಲ್ಲಿ ನಿಗದಿತ 90 ಓವರ್‌ಗಳು ಮುಕ್ತಾಯವಾಗುವುದೇ ಕಡಿಮೆ. ಅಲ್ಲಿನ ಶೇಕಡಾ 25 ಮಂದಿ ಈ ಕಾರಣದಿಂದಲೇ ಟೆಸ್ಟ್ ವೀಕ್ಷಿಸುವುದನ್ನು ಬಿಟ್ಟಿದ್ದಾರೆ. ಈ ಸಮಸ್ಯೆಯನ್ನು ಮೀರಲು ಸ್ಕೋರ್ ಬೋರ್ಡ್‌ನಲ್ಲಿ ಟೈಮರ್ ಅಳವಡಿಸುವುದು ಉತ್ತಮ’ ಎಂದು ಎಂಸಿಸಿ ಹೇಳಿದೆ.

‘ಸದ್ಯ ಭಾರತದಲ್ಲಿ ಎಸ್‌ಜಿ ಬಾಲ್‌, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಡೂಕ್ಸ್ ಬಾಲ್‌, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಇತರ ರಾಷ್ಟ್ರಗಳಲ್ಲಿ ಕೂಕಬುರಾ ಬಾಲ್‌ ಬಳಸಲಾಗುತ್ತದೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಇದ್ಯಾವುದನ್ನೂ ಬಳಸದೆ ಬೇರೆಯೇ ಚೆಂಡಿಗೆ ಮೊರೆ ಹೋಗಲಾಗುವುದು’ ಎಂದು ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !