ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

IPL 2024 | GT vs PBKS: ಶಶಾಂಕ್‌ ಆಟ- ಪಂಜಾಬ್‌ಗೆ ಒಲಿದ ಜಯ

Published 4 ಏಪ್ರಿಲ್ 2024, 19:20 IST
Last Updated 4 ಏಪ್ರಿಲ್ 2024, 19:20 IST
ಅಕ್ಷರ ಗಾತ್ರ

ಅಹಮದಾಬಾದ್: ಶಶಾಂಕ್‌ ಸಿಂಗ್‌ ಅವರ ಸ್ಫೋಟಕ ಬ್ಯಾಟಿಂಗ್‌ (ಔಟಾಗದೆ 61; 29ಎ, 4x6, 6x4) ನೆರವಿನಿಂದ ಪಂಜಾಬ್‌ ಕಿಂಗ್ಸ್‌ ತಂಡವು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಗುರುವಾರ ಗುಜರಾತ್‌ ಟೈಟನ್ಸ್‌ ವಿರುದ್ಧ ಮೂರು ವಿಕೆಟ್‌ಗಳ ರೋಚಕ ಜಯ ಸಾಧಿಸಿತು.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ತಂಡದ ನಾಯಕ ಶಿಖರ್ ಧವನ್ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡರು. ಟೈಟನ್ಸ್ ತಂಡವು ನಾಯಕ ಶುಭಮನ್‌ ಗಿಲ್ (ಅಜೇಯ 89; 48ಎಸೆತ) ಅವರ ಅಮೋಘ ಆಟದ ಬಲದಿಂದ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 199 ರನ್ ಗಳಿಸಿತು. 

ಈ ಕಠಿಣ ಗುರಿಯನ್ನು ಬೆನ್ನಟ್ಟಿದ ಪಂಜಾಬ್‌ ತಂಡದ ಆರಂಭ ಉತ್ತಮವಾಗಿರಲಿಲ್ಲ. 70 ರನ್‌ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ಶಿಖರ್‌ (1), ಜಾನಿ ಬೇಸ್ಟೊ (22), ಸ್ಯಾಮ್ ಕರನ್ (5) ಮತ್ತು ಸಿಕಂದರ್‌ ರಝಾ (15) ಬೇಗನೇ ನಿರ್ಗಮಿಸಿದರು.

ಈ ಹಂತದಲ್ಲಿ ಶಶಾಂಕ್‌ ಜವಾಬ್ದಾರಿಯುತವಾಗಿ ಬ್ಯಾಟಿಂಗ್‌ ಪ್ರದರ್ಶಿಸಿದರು. ಅವರಿಗೆ ಪ್ರಭಸಿಮ್ರನ್ ಸಿಂಗ್ (35; 24ಎ) ಮತ್ತು ಅಶುತೋಷ್ ಶರ್ಮಾ (31; 17ಎ) ಅವರು ಬೆಂಬಲ ನೀಡಿದರು. ಏಳನೇ ವಿಕೆಟ್‌ ಜೊತೆಯಾಟದಲ್ಲಿ ಶಶಾಂಕ್‌ ಮತ್ತು ಅಶುತೋಷ್‌ ಅವರು 22 ಎಸೆತಗಳಲ್ಲಿ 43 ರನ್‌ ಸೇರಿಸಿದ್ದು, ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು. ಹೀಗಾಗಿ ಕಿಂಗ್ಸ್‌ ತಂಡವು ಒಂದು ಎಸೆತ ಬಾಕಿ ಇರುವಂತೆ 7 ವಿಕೆಟ್‌ಗೆ 200 ರನ್‌ ಗಳಿಸಿ ಗೆಲುವಿನ ಗಡಿ ತಲುಪಿತು. ಟೈಟನ್ಸ್‌ ಪರ ನೂರ್‌ ಅಹಮ್ಮದ್‌ ಎರಡು ವಿಕೆಟ್‌ ಪಡೆದರು.

ಇದಕ್ಕೂ ಮೊದಲು ನಾಯಕನಿಗೆ ತಕ್ಕ ಆಟವಾಡಿದ ಗಿಲ್ ಈ ಆವೃತ್ತಿಯಲ್ಲಿ ತಮ್ಮ ಮೊದಲ ಅರ್ಧಶತಕ ದಾಖಲಿಸಿದರು. ಗಿಲ್ ಮೂರನೇ ವಿಕೆಟ್ ಜೊತೆಯಾಟದಲ್ಲಿ ಸಾಯಿ ಸುದರ್ಶನ್ (33; 19ಎ) ಅವರೊಂದಿಗೆ 53 ರನ್‌ ಕಲೆಹಾಕಿದರು.  

ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಕಗಿಸೊ ರಬಾಡ ಬೌಲಿಂಗ್‌ನಲ್ಲಿ ವೃದ್ಧಿಮಾನ್ ಸಹಾ ಔಟಾದರು. ಆಗ ತಂಡದ ಮೊತ್ತ 29 ರನ್‌ಗಳಾಗಿತ್ತು. ಗಿಲ್ ಜೊತೆಗೂಡಿದ ಕೇನ್ ವಿಲಿಯಮ್ಸನ್ (26ರನ್) ಎರಡನೇ ವಿಕೆಟ್ ಜೊತೆಯಾಟದಲ್ಲಿ 40 ರನ್ ಸೇರಿಸಿದರು. ಹರಪ್ರೀತ್ ಬ್ರಾರ್ ಬೌಲಿಂಗ್‌ನಲ್ಲಿ ಕೇನ್ ಔಟಾಗುವುದರೊಂದಿಗೆ ಜೊತೆಯಾಟ ಮುರಿದುಬಿತ್ತು. ಇದರಿಂದಾಗಿ ಗುಜರಾತ್ ತಂಡದ ಮೇಲೆ ಒತ್ತಡ ಹೆಚ್ಚಿತ್ತು. ಸಾಯಿ ಮತ್ತು ಗಿಲ್ ಜೊತೆಯಾಟದಿಂದಾಗಿ ಆತಂಕ ದೂರವಾಯಿತು. 

ಈ ಹಂತದಲ್ಲಿ  ಗಿಲ್ ಅವರು ಹೆಚ್ಚು ಎಸೆತಗಳನ್ನು ಎದುರಿಸಲಿಲ್ಲ. ಬೌಲರ್‌ಗಳನ್ನು ಆತ್ಮವಿಶ್ವಾಸದಿಂದ ಎದುರಿಸುತ್ತಿದ್ದ ಸಾಯಿ ಅವರಿಗೇ ಹೆಚ್ಚು ಅವಕಾಶ ಕೊಟ್ಟರು. ಪಂಜಾಬ್ ತಂಡದಲ್ಲಿ ಗಾಯಗೊಂಡಿರುವ ಲಿಯಾಮ್ ಲಿವಿಂಗ್‌ಸ್ಟೋನ್ ಬದಲು ಸ್ಥಾನ ಪಡೆದ ಸಿಕಂದರ್ ರಝಾ ಹಾಕಿದ 12ನೇ ಓವರ್‌ನಲ್ಲಿ ಸಾಯಿ 14 ರನ್ ಸೂರೆ ಮಾಡಿದರು. ಇದಾಗಿ ಸ್ವಲ್ಪ ಹೊತ್ತಿನಲ್ಲಿ ಸಾಯಿ ವಿಕೆಟ್ ಗಳಿಸಿದ ಹರ್ಷಲ್ ಪಟೇಲ್ ಜೊತೆಯಾಟ ಮುರಿದರು. ವಿಜಯಶಂಕರ್ (10 ಎಸೆತಗಳಲ್ಲಿ 8) ಪ್ರಭಾವಿಯಾಗಲಿಲ್ಲ. 

ಗಿಲ್ ತಾವೆದುರಿಸಿದ 31ನೇ ಎಸೆತದಲ್ಲಿ ಡೀಪ್‌ ಸ್ಕ್ವೇರ್‌ ಲೆಗ್‌ಗೆ ಬೌಂಡರಿ ಬಾರಿಸಿ ಅರ್ಧಶತಕದ ಗಡಿ ದಾಟಿದರು. ಈ ಬಾರಿಯ ಟೂರ್ನಿಯಲ್ಲಿ ಗಿಲ್ ಅವರಿಗೆ ಇದು ಮೊದಲ ಅರ್ಧಶತಕ ಹಾಗೂ ಐಪಿಎಲ್‌ನಲ್ಲಿ 20ನೇಯದ್ದು. ನಂತರವೂ ಅವರು ಮೊತ್ತ ಹಿಗ್ಗಿಸುವಲ್ಲಿ ನಿರತರಾದರು. ಅವರ ಇನಿಂಗ್ಸ್‌ನಲ್ಲಿ ಒಟ್ಟು ಆರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳಿದ್ವವು. ಫ್ಲಿಕ್, ಪುಲ್ ಮತ್ತು ಡ್ರೈವ್‌ಗಳ ನಿಖರ ಪ್ರಯೋಗ ಅವರ ಆಟದಲ್ಲಿ ಕಂಡಿತು. 

ಇನಿಂಗ್ಸ್‌ನಲ್ಲಿ 14 ಎಸೆತಗಳು ಬಾಕಿಯಿದ್ದಾಗ ಕ್ರೀಸ್‌ಗೆ ಬಂದ ರಾಹುಲ್ ತೆವಾಟಿಯಾ ರನ್‌ ಗಳಿಕೆಗೆ ಶರವೇಗ ನೀಡಿದರು.  ಕೇವಲ 8 ಎಸೆತಗಳಲ್ಲಿ 23 ರನ್‌ ಗಳಿಸಿದರು. ಗಿಲ್ ಶತಕದ ಸನಿಹವಿದ್ದರೂ  ಅವಸರಪಡಲಿಲ್ಲ. ರಾಹುಲ್‌ಗೆ ಹೆಚ್ಚು ಅವಕಾಶ ಬಿಟ್ಟುಕೊಟ್ಟರು. 287ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ ರಾಹುಲ್ 3 ಬೌಂಡರಿ, ಒಂದು ಸಿಕ್ಸರ್ ಬಾರಿಸಿದರು. 

ಪಂಜಾಬ್‌ ತಂಡಕ್ಕೆ ಈ ಆವೃತ್ತಿಯಲ್ಲಿ ಇದು ಎರಡನೇ ಗೆಲುವಾಗಿದೆ. ಪಾಯಿಂಟ್‌ ಪಟ್ಟಿಯಲ್ಲಿ ಕಿಂಗ್ಸ್‌ ತಂಡವು 7ರಿಂದ ಐದನೇ ಸ್ಥಾನಕ್ಕೆ ಬಡ್ತಿ ಪಡೆಯಿತು. ಟೈಟನ್ಸ್‌ ತಂಡವು ಐದನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಜಾರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT