ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ ಪ್ರವಾಸ ತೆರಳಲಿರುವ ಪಾಕ್ ತಂಡದಲ್ಲಿ ಹೈದರ್ ಅಲಿ, ಸರ್ಫರಾಜ್‌ಗೆ ಸ್ಥಾನ

Last Updated 12 ಜೂನ್ 2020, 13:40 IST
ಅಕ್ಷರ ಗಾತ್ರ

ಲಾಹೋರ್: ಇತ್ತೀಚೆಗೆ ಅಮೋಘ ಸಾಮರ್ಥ್ಯ ತೋರುತ್ತಿರುವ ಯುವ ಆಟಗಾರ ಹೈದರ್ ಅಲಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ನೀಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿ ಒಂದು ವರ್ಷದ ನಂತರ ಮಾಜಿ ನಾಯಕ ಸರ್ಫರಾಜ್ ಅಹಮ್ಮದ್ ಅವರನ್ನು ಕರೆಸಿಕೊಂಡಿದೆ.

ಇಂಗ್ಲೆಂಡ್‌ನಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ‘ಬಯೊಸೆಕ್ಯುರ್’ ಸೌಲಭ್ಯದಡಿ ನಡೆಯಲಿರುವ ಟೆಸ್ಟ್ ಹಾಗೂ ಟ್ವೆಂಟಿ–20 ಸರಣಿಗೆ ಆಯ್ಕೆ ಸಮಿತಿ ಶುಕ್ರವಾರ 29 ಆಟಗಾರರ ತಂಡವನ್ನು ಪ್ರಕಟಿಸಿದ್ದು ವೇಗದ ಬೌಲರ್ ಸೊಹೈಲ್ ಖಾನ್‌ಗೂ ಅವಕಾಶ ನೀಡಿದೆ. ಸೊಹೈಲ್ 2017ರ ಡಿಸೆಂಬರ್‌ನಲ್ಲಿ ಕೊನೆಯದಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ್ದರೆ ಸರ್ಫರಾಜ್ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ರಾಷ್ಟ್ರೀಯ ತಂಡದ ಪರ ಕಣಕ್ಕೆ ಇಳಿದಿದ್ದರು.

2019–20ರ ಋತು ಹೈದರ್‌ ಅಲಿಗೆ ಸಂಬಂಧಿಸಿ ಸುಗ್ಗಿಕಾಲವಾಗಿತ್ತು. 19 ವರ್ಷದೊಳಗಿನವರ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ 317 ರನ್‌ ಕಲೆ ಹಾಕಿದ್ದ ಅವರು ಬಾಂಗ್ಲಾದೇಶದಲ್ಲಿ ನಡೆದಿದ್ದ ಎಸಿಸಿ ಎಮರ್ಜಿಂಗ್ ಟೀಮ್ಸ್ ಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದರು.

ಸೊಹೈಲ್ ಖಾನ್ ಈ ಬಾರಿ ದೇಶಿ ಕ್ರಿಕೆಟ್‌ನಲ್ಲಿ ಅಮೋಘ ಬೌಲಿಂಗ್ ದಾಳಿ ನಡೆಸಿದ್ದರು. ಕ್ವಾಯಿದ್ ಇ–ಆಜಂ ಟ್ರೋಫಿ ಟೂರ್ನಿಯ ಒಂಬತ್ತು ಪಂದ್ಯಗಳಲ್ಲಿ 22 ವಿಕೆಟ್ ಕಬಳಿಸಿದ್ದರು. ಪಾಕಿಸ್ತಾನ್ ಸೂಪರ್ ಲೀಗ್ ಟ್ವೆಂಟಿ–20 ಟೂರ್ನಿಯಲ್ಲಿ ಏಳು ವಿಕೆಟ್‌ಗಳು ಅವರ ಪಾಲಾಗಿದ್ದವು.

ಪ್ರಮುಖ ವೇಗದ ಬೌಲರ್ ಮೊಹಮ್ಮದ್ ಅಮೀರ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹ್ಯಾರಿಸ್ ಸೊಹೈಲ್ ವೈಯಕ್ತಿಕ ಕಾರಣಗಳಿಂದ ಇಂಗ್ಲೆಂಡ್ ಪ್ರವಾಸದಿಂದ ದೂರ ಉಳಿದ ಮರುದಿನವೇ ಆಯ್ಕೆ ಸಮಿತಿ ತಂಡವನ್ನು ಪ್ರಕಟಿಸಿದೆ.

‘ಅಮೀರ್ ಅವರ ಪತ್ನಿ ಆಗಸ್ಟ್‌ನಲ್ಲಿ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ. ಆ ಸಂದರ್ಭದಲ್ಲಿ ಪತ್ನಿಯೊಂದಿಗೆ ಇರಲು ಅವರು ಬಯಸಿದ್ದಾರೆ. ಕೊರೊನಾ ಆತಂಕದಿಂದ ಹ್ಯಾರಿಸ್ ಇಂಗ್ಲೆಂಡ್ ಪ್ರವಾಸಕ್ಕೆ ಸಿದ್ಧರಿಲ್ಲ ಎಂದು ತಿಳಿಸಿದ್ದಾರೆ’ ಎಂದು ಮಂಡಳಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಕೊರೊನಾ ಸೋಂಕು ಇದೆಯೇ ಎಂಬುದನ್ನು ಪತ್ತೆಹಚ್ಚಲು ಜೂನ್‌ 20ರಿಂದ 25ರ ವರೆಗೆ ಆಟಗಾರರ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಯಾರಿಗಾದರೂ ಸೋಂಕಿನ ಲಕ್ಷಣಗಳು ಕಂಡುಬಂದರೆ ಪರ್ಯಾಯ ವ್ಯವಸ್ಥೆಗಾಗಿ ಕಾಯ್ದಿರಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ವರನ್ನು ಸೇರಿಸಲಾಗಿದೆ. ಕೋವಿಡ್ ಆತಂಕದಿಂದ ಜಾರಿಯಲ್ಲಿರುವ ಎಸ್‌ಒಪಿಯನ್ನು ಕಟ್ಟುನಿಟ್ಟಾಗಿ ಪಾಲಿಸುವುದಕ್ಕಾಗಿ ಟ್ವೆಂಟಿ–20 ಸರಣಿಯಲ್ಲಿ ಆಡುವ ಆಟಗಾರರನ್ನೂ ಟೆಸ್ಟ್ ತಂಡದೊಂದಿಗೆ ಕಳುಹಿಸಲು ನಿರ್ಧರಿಸಲಾಗಿದೆ.

‘ಇಂಗ್ಲೆಂಡ್‌ನಲ್ಲಿ ಯಶಸ್ಸು ಗಳಿಸಲು ಸಮರ್ಥವಾಗಿರುವ ತಂಡವನ್ನು ಆಯ್ಕೆ ಸಮಿತಿ ನೀಡಿದೆ. ಸುಮಾರು ಎರಡು ತಿಂಗಳು ನಡೆಯಲಿರುವ ಟೆಸ್ಟ್ ಸರಣಿಯ ಮೇಲೆ ಸದ್ಯ ಗಮನ ಕೇಂದ್ರೀಕರಿಸಿದ್ದು ನಂತರ ನಡೆಯಲಿರುವ ಟ್ವೆಂಟಿ–20 ಸರಣಿಯನ್ನು ಟಿ20 ವಿಶ್ವಕಪ್ ಟೂರ್ನಿ ಗಮನದಲ್ಲಿರಿಸಿ ಆಡಲಿದ್ದೇವೆ’ ಎಂದು ಮುಖ್ಯ ಕೋಚ್ ಮಿಸ್ಬಾ ಉಲ್ ಹಕ್ ತಿಳಿಸಿದರು.

ತಂಡ: ಅಬೀದ್ ಅಲಿ, ಫಕ್ರ್ ಜಮಾನ್, ಇಮಾಮ್ ಉಲ್ ಹಕ್, ಶಾನ್ ಮಸೂದ್, ಅಜರ್ ಅಲಿ (ನಾಯಕ), ಬಾಬರ್ ಆಜಂ (ಟೆಸ್ಟ್ ತಂಡದ ಉಪನಾಯಕ ಮತ್ತು ಟ್ವೆಂಟಿ–20 ತಂಡದ ನಾಯಕ), ಆಜಾದ್ ಶಫೀಕ್, ಫವಾದ್ ಆಲಂ, ಹೈದರ್ ಅಲಿ, ಇಫ್ತಿಕರ್ ಅಹಮ್ಮದ್, ಖುಶ್ದಿಲ್ ಶಾ, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸರ್ಫರಾಜ್ ಅಹಮ್ಮದ್ (ವಿಕೆಟ್ ಕೀಪರ್), ಫಾಹಿಂ ಅಶ್ರಫ್, ಹ್ಯಾರಿಸ್ ರವೂಫ್‌, ಇಮ್ರಾನ್ ಖಾನ್, ಮೊಹಮ್ಮದ್ ಅಬ್ಬಾಸ್, ಮೊಹಮ್ಮದ್ ಹಸ್ನೈನ್, ನಸೀಮ್ ಶಾ, ಶಹೀನ್ ಶಾ ಅಫ್ರಿದಿ, ಸೊಹೈಲ್ ಖಾನ್, ಉಸ್ಮಾನ್ ಶಿನ್ವಾರಿ, ವಹಾಬ್ ರಿಯಾಜ್, ಐಮದ್ ವಾಸಿಮ್, ಖಾಸಿಫ್ ಭಟ್ಟಿ, ಶಾದಬ್ ಖಾನ್, ಯಾಸಿರ್ ಶಾ; ಕಾಯ್ದಿರಿಸಿದ ಆಟಗಾರರು: ಬಿಲಾಲ್ ಆಸಿಫ್, ಇಮ್ರಾನ್ ಬಟ್‌, ಮೂಸಾ ಖಾನ್, ಮೊಹಮ್ಮದ್ ನವಾಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT