ಬುಧವಾರ, ಡಿಸೆಂಬರ್ 2, 2020
26 °C
ಹ್ಯಾಮ್‌ಸ್ಟ್ರಿಂಗ್‌ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದೇನೆ ಎಂದ ‘ಹಿಟ್‌ಮ್ಯಾನ್‌‘

ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಸಿದ್ಧ: ರೋಹಿತ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಬ್ಯಾಟ್ಸ್‌ಮನ್ ರೋಹಿತ್‌ ಶರ್ಮಾ ಅವರು ತಮ್ಮ ಹ್ಯಾಮ್‌ಸ್ಟ್ರಿಂಗ್‌ ಗಾಯದ ಕುರಿತು ಎದ್ದಿರುವ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಅಷ್ಟೊಂದು ಗಂಭೀರ ಸಮಸ್ಯೆಯೇನೂ ಇಲ್ಲ; ಆಸ್ಟ್ರೇಲಿಯಾ ಎದುರಿನ ಸರಣಿಗೆ ಸಿದ್ಧವಾಗುತ್ತಿರುವುದಾಗಿ ಹೇಳಿದ್ದಾರೆ.

ಭಾರತ ತಂಡದ ಸೀಮಿತ ಓವರ್‌ಗಳ ಪಂದ್ಯಗಳ ಉಪನಾಯಕ ರೋಹಿತ್ ಅವರು ಐಪಿಎಲ್‌ ಟೂರ್ನಿಯ ಸಂದರ್ಭದಲ್ಲಿ ಗಾಯಕ್ಕೆ ತುತ್ತಾಗಿದ್ದರು. ಇದರಿಂದ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಅವರನ್ನು ಆಯ್ಕೆ ಮಾಡಿರಲಿಲ್ಲ. ಆದರೆ ತಂಡದ ಆಯ್ಕೆ ನಡೆದ ಕೆಲವೇ ದಿನಗಳ ಬಳಿಕ ಅವರು ಐಪಿಎಲ್‌ ಟೂರ್ನಿಯ ಪ್ಲೇ ಆಫ್‌ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಇದು ತೀವ್ರ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ಆ ಬಳಿಕ ಅವರನ್ನು ಟೆಸ್ಟ್‌ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.

‘ನನಗಾಗಿರುವ ಗಾಯದ ಕುರಿತು ಏನು ಚರ್ಚೆ ನಡೆಯುತ್ತಿದೆ ಎಂಬುದು ಖಂಡಿತವಾಗಿಯೂ ಗೊತ್ತಿಲ್ಲ. ಆದರೆ ನಾನು ಈ ಬಗ್ಗೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಮುಂಬೈ ಇಂಡಿಯನ್ಸ್ ಆಡಳಿತ ಮಂಡಳಿಯೊಂದಿಗೆ ನಿರಂತರ ಮಾತುಕತೆ ನಡೆಸಿದ್ದೇನೆ‘ ಎಂದಿದ್ದಾರೆ.

ಐಪಿಎಲ್‌ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ನಡೆದ ಫೈನಲ್‌ ಪಂದ್ಯದಲ್ಲಿ ಗಾಯದ ನಡುವೆಯೂ ಕಣಕ್ಕಿಳಿದಿದ್ದ ರೋಹಿತ್‌ 50 ಎಸೆತಗಳಲ್ಲಿ 68 ರನ್‌ ಗಳಿಸಿದ್ದರು. ತಮ್ಮ ನಾಯಕತ್ವದ ತಂಡವನ್ನು ಚಾಂಪಿಯನ್‌ ಆಗಿಸಿದ್ದರು. ಸದ್ಯ ಅವರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ (ಎನ್‌ಸಿಎ) ಫಿಟ್‌ನೆಸ್‌ ಪುನಶ್ಚೇತನ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ.

‘ನಾನು ಅಂಗಣಕ್ಕಿಳಿಯುವುದಾಗಿ ಮುಂಬೈ ಇಂಡಿಯನ್ಸ್ ತಂಡಕ್ಕೆ ತಿಳಿಸಿದ್ದೆ. ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸುವುದಾಗಿಯೂ ಹೇಳಿದ್ದೆ. ಮುಕ್ತ ಮನಸ್ಸಿನಿಂದ ಆ ಪಂದ್ಯಗಳಲ್ಲಿ ಆಡಿದ್ದೆ‘ ಎಂದು ರೋಹಿತ್‌ ಹೇಳಿದ್ದಾರೆ.

‘ಹ್ಯಾಮ್‌ಸ್ಟ್ರಿಂಗ್ ಗಾಯದಿಂದ ಈಗ ಸಂಪೂರ್ಣ ಗುಣಮುಖನಾಗಿದ್ದೇನೆ ಎಂದೆನಿಸುತ್ತಿದೆ. ಟೆಸ್ಟ್ ಪಂದ್ಯಗಳಿಗೆ ಸಜ್ಜುಗೊಳ್ಳುವ ಮುನ್ನ ಯಾವುದೇ ಗೊಂದಗಳಿಗೆ ಅವಕಾಶ ಮಾಡಿಕೊಡಬಾರದು. ಇದೇ ಕಾರಣದಿಂದ ಎನ್‌ಸಿಎಗೆ ಬಂದಿದ್ದೇನೆ‘ ಎಂದು ರೋಹಿತ್‌ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು