ಶನಿವಾರ, ಸೆಪ್ಟೆಂಬರ್ 18, 2021
21 °C

48ನೇ ಹುಟ್ಟುಹಬ್ಬದಂದು ಕೋವಿಡ್ ರೋಗಿಗಳಿಗೆ ಪ್ಲಾಸ್ಮಾ ದಾನ ಮಾಡಲು ಸಚಿನ್ ಕರೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ದಿಗ್ಗಜ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್, 48ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಈ ಸಂದರ್ಭದಲ್ಲಿ ಶುಭಾಶಯ ಕೋರಿದ ಎಲ್ಲರಿಗೂ ಧನ್ಯವಾದ ಅರ್ಪಿಸಿರುವ ಸಚಿನ್ ತೆಂಡೂಲ್ಕರ್, ಕೊರೊನಾದಿಂದ ಗುಣಮುಖರಾದವರು ಸೋಂಕಿನಿಂದ ಬಳಲುತ್ತಿರುವವರ ಜೀವ ಉಳಿಸಲು ಪ್ಲಾಸ್ಮಾ ದಾನ ಮಾಡುವಂತೆ ಕರೆ ನೀಡಿದ್ದಾರೆ. 

ಇತ್ತೀಚೆಗಷ್ಟೇ ಕೊರೊನಾ ಸೋಂಕಿಗೊಳಗಾಗಿದ್ದ ಸಚಿನ್ ಸಂಪೂರ್ಣವಾಗಿ ಗುಣಮುಖರಾಗಿದ್ದರು. ಅಲ್ಲದೆ ಕೋವಿಡ್ ರೋಗಿಗಳಿಗೆ ಪ್ಲಾಸ್ಮಾ ದಾನ ಮಾಡುವುದಾಗಿ ಹೇಳಿದ್ದಾರೆ. 

 

 

‘ವೈದ್ಯರು ನನಗೆ ನೀಡಿದ ಒಂದು ಸಂದೇಶವನ್ನು ಹಂಚಿಕೊಳ್ಳುತ್ತಿದ್ದೇನೆ. ಕಳೆದ ವರ್ಷ ನಾನು ಪ್ಲಾಸ್ಮಾ ಥೆರಪಿ ಕೇಂದ್ರವೊಂದನ್ನು ಉದ್ಘಾಟಿಸಿದ್ದೆ. ಸೂಕ್ತ ಸಮಯದಲ್ಲಿ ಪ್ಲಾಸ್ಮಾ ನೀಡಿದರೆ ರೋಗಿಗಳು ಬೇಗ ಗುಣಮುಖರಾಗುತ್ತಾರೆ ಎಂದು ಅಲ್ಲಿ ವೈದ್ಯರು ನನಗೆ ಹೇಳಿದ್ದರು. ನಾನು ಅರ್ಹ ಎನಿಸಿದ ಬಳಿಕ ಪ್ಲಾಸ್ಮಾ ದಾನ ಮಾಡುವೆ ಎಂದು ತಿಳಿಸಿದ್ದೆ‘ ಎಂದು ಹೇಳಿರುವ ವಿಡಿಯೊವನ್ನು ಸಚಿನ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಮಾರ್ಚ್‌ 27ರಂದು ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಮುಂಜಾಗೃತಾ ಕ್ರಮವಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಏಪ್ರಿಲ್ 8ರಂದು ಆಸ್ಟತ್ರೆಯಿಂದ ಮರಳಿದ್ದ ಅವರು ಮನೆಯಲ್ಲಿ ಪ್ರತ್ಯೇಕವಾಸದಲ್ಲಿದ್ದರು.

ಕೋವಿಡ್‌ನಿಂದ ಗುಣಮುಖರಾಗಿರುವ ರೋಗಿಗಳು ದಾನ ಮಾಡಿದ ಪ್ಲಾಸ್ಮಾವನ್ನು ಸಾಮಾನ್ಯವಾಗಿ ಸೋಂಕಿನಿಂದ ಬಳಲುತ್ತಿರುವವರ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಪ್ಲಾಸ್ಮಾ ದಾನಕ್ಕೆ ಕನಿಷ್ಠ 14 ದಿನಗಳ ಮೊದಲು ವ್ಯಕ್ತಿಯು ಸೋಂಕಿನ ಯಾವುದೇ ಲಕ್ಷಣಗಳನ್ನು ಹೊಂದಿರಬಾರದು.

ಏತನ್ಮಧ್ಯೆ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸಚಿನ್ ಅವರಿಗೆ ಕ್ರಿಕೆಟ್ ಲೋಕದಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿವೆ.

ಮಾಜಿ ಕಲಾತ್ಮಕ ಬ್ಯಾಟ್ಸ್‌ಮನ್ ವಿ.ವಿ.ಎಸ್. ಲಕ್ಷ್ಮಣ್ ಅವರು ಸಚಿನ್‌ಗೆ ಅತ್ಯುತ್ತಮ ವರ್ಷವನ್ನು ಶುಭ ಹಾರೈಸಿದ್ದಾರೆ. ಅದೇ ಹೊತ್ತಿಗೆ ಸಚಿನ್ ತೆಂಡೂಲ್ಕರ್ ತಮ್ಮ ಆಡುವ ಕಾಲಘಟ್ಟದಲ್ಲಿ ಟೀಮ್ ಇಂಡಿಯಾ ಸಂಕಷ್ಟಕ್ಕೊಳಗಾಗಿದ್ದ ಸಂದರ್ಭದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮೂಲಕ ರಕ್ಷಿಸಿದ ಅದೇ ರೀತಿಯಲ್ಲಿ ದೇಶವು ಈ ಕೊರೊನಾವೈರಸ್ ಸವಾಲಿನ ಪರಿಸ್ಥಿಯಿಂದ ಬೇಗನೇ ಹೊರಬಲಿದೆ ಎಂದು ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಶುಭಾಶಯ ತಿಳಿಸಿದ್ದಾರೆ.

 

 

 

 

ಲಿಟ್ಲ್ ಮಾಸ್ಟರ್ ಅವರ ಹುಟ್ಟುಹಬ್ಬದಂದು ಶುಭಾಶಯ ಕೋರಿರುವ ನಾಯಕ ವಿರಾಟ್ ಕೊಹ್ಲಿ, ಸಚಿನ್ ಮಹಾನ್ ಆಟಗಾರ ಎಂದು ಗುಣಗಾನ ಮಾಡಿದ್ದಾರೆ.

 

ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ ಸಚಿನ್ ತೆಂಡೂಲ್ಕರ್ ತಮ್ಮ 16ನೇ ವಯಸ್ಸಿನಲ್ಲಿ 1989ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ದಾಖಲೆಯ 34,357 ರನ್ ಪೇರಿಸಿದ್ದರು. ಎರಡನೇ ಸ್ಥಾನದಲ್ಲಿರುವ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ ಅವರಿಗಿಂತಲೂ 6,000 ರನ್‌ಗಳ ಅಂತರವನ್ನು ಕಾಯ್ದುಕೊಂಡಿದ್ದಾರೆ.

'ಕ್ರಿಕೆಟ್ ದೇವರು' ಎಂದೇ ಆರಾಧನೆಗೆ ಪಾತ್ರವಾಗಿರುವ ಸಚಿನ್ ಏಕದಿನದಲ್ಲಿ 18,426 ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ 15,921 ರನ್ ಗಳಿಸಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಬಾರಿಸಿದ ವಿಶ್ವದ ಮೊತ್ತ ಮೊದಲ ಹಾಗೂ ಏಕಮಾತ್ರ ಬ್ಯಾಟ್ಸ್‌ಮನ್ ಎಂಬ ಗೌರವಕ್ಕೂ ಸಚಿನ್ ಭಾಜನವಾಗಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಪ್ರಪ್ರಥಮ ಬ್ಯಾಟ್ಸ್‌ಮನ್ ಎಂಬ ಶ್ರೇಯ ಅವರದ್ದಾಗಿದೆ. ಹೀಗೆ 'ದಾಖಲೆಗಳ ಸರದಾರ' ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ.

ಸಚಿನ್‌ಗೆ ಪ್ರಮುಖರು ಮಾಡಿದ ಶುಭಾಶಯಗಳು ಇಲ್ಲಿವೆ:

ರವಿಶಾಸ್ತ್ರಿ

 

 

 

ಮರಳು ಶಿಲ್ಪಿ ಸುದರ್ಶನ್‌ ಪಟ್ನಾಯಕ್‌

 

 

 

 

 ವಿರಾಟ್ ಕೊಹ್ಲಿ:

 

 

 

ವಿವಿಎಸ್ ಲಕ್ಷ್ಮಣ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು