ದಾದಾ ಖ್ಯಾತಿಯ ಸೌರವ್ ಗಂಗೂಲಿ ಬಗ್ಗೆ ಇಲ್ಲಿದೆ ಕುತೂಹಲಕಾರಿ ಅಂಶ

ಮುಂಬೈ: ಬಿಸಿಸಿಐ ಅಧ್ಯಕ್ಷ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಇಂದು (ಜುಲೈ 8, ಗುರುವಾರ) 49ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ದಾದಾ ಖ್ಯಾತಿಯ ಸೌರವ್ ಗಂಗೂಲಿ, 2000ನೇ ಕಾಲಘಟ್ಟದಲ್ಲಿ ಟೀಮ್ ಇಂಡಿಯಾಗೆ ಮ್ಯಾಚ್ ಫಿಕ್ಸಿಂಗ್ ಕಳಂಕ ತಟ್ಟಿದ ಸಂದರ್ಭದಲ್ಲಿ ಯುವ ತಂಡವನ್ನು ಕಟ್ಟಿ ವಿದೇಶದಲ್ಲೂ ಸ್ಮರಣೀಯ ಗೆಲುವು ದಾಖಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಭಾರತೀಯ ಕ್ರಿಕೆಟ್‌ನ ಏಳಿಗೆಯಲ್ಲಿ ಅನೇಕ ಕೊಡುಗೆಗಳನ್ನು ಸಲ್ಲಿಸಿರುವ ಸೌರವ್ ಗಂಗೂಲಿ ಬಗ್ಗೆ 5 ಕುತೂಹಲಕಾರಿ ಅಂಶಗಳನ್ನು ಇಲ್ಲಿ ಕೊಡಲಾಗಿದೆ.
ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ‘ದಾದಾ’
1. ಐಪಿಎಲ್‌ನ ಮೊದಲ ಎಸೆತ ಎದುರಿಸಿದ್ದು ಗಂಗೂಲಿ
ಐಪಿಎಲ್ ಟೂರ್ನಿ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಎಸೆತ ಎದುರಿಸಿದ್ದ ಸೌರವ್ ಗಂಗೂಲಿ, 6ನೇ ಓವರ್‌ನಲ್ಲಿ ಔಟ್ ಆಗುವ ಮೂಲಕ ಐಪಿಎಲ್ ಟೂರ್ನಿಯಲ್ಲಿ ಚೊಚ್ಚಲ ವಿಕೆಟ್ ಒಪ್ಪಿಸಿದ್ದರು. ಅಂದು ಕೆಕೆಆರ್ ತಂಡವನ್ನು ದಾದಾ ಮುನ್ನಡೆಸಿದ್ದರು. ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ ಚೊಚ್ಚಲ ಪಂದ್ಯ ನೆರವೇರಿತ್ತು.
2. ಪ್ರಿನ್ಸ್ ಆಫ್ ಕೋಲ್ಕತ್ತ
ಸೌರವ್ ಗಂಗೂಲಿ 'ಪ್ರಿನ್ಸ್ ಆಫ್ ಕೋಲ್ಕತ್ತ' ಎಂಬ ಹೆಸರಿನಿಂದಲೂ ಖ್ಯಾತಿ ಪಡೆದಿದ್ದಾರೆ. ಅಲ್ಲದೆ ಭಾರತೀಯ ಕ್ರಿಕೆಟ್‌ನ 'ಮಹಾರಾಜ' ಎಂದು ಗುರುತಿಸ್ಪಟ್ಟಿದ್ದಾರೆ.
3. ರೆಸ್ಟೋರೆಂಟ್ ಮಾಲೀಕ
ಕೋಲ್ಕತ್ತದ ಪಾರ್ಕ್ ಸ್ಟ್ರೀಟ್‌ನಲ್ಲಿ 'ಸೌರವ್ಸ್ - ದಿ ಫುಡ್ ಪೆವಿಲಿಯನ್' ಎಂಬ ಮೂರು ಮಹಡಿಯ ರೆಸ್ಟೋರೆಂಟ್ ಅನ್ನು ಸೌರವ್ ಗಂಗೂಲಿ ಹೊಂದಿದ್ದಾರೆ. ಇದನ್ನು 2004ರಲ್ಲಿ ಸಚಿನ್ ತೆಂಡೂಲ್ಕರ್ ಉದ್ಘಾಟಿಸಿದ್ದರು.
4. ಚೊಚ್ಚಲ ಶತಕ
ಐತಿಹಾಸಿಕ ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆದ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಸೌರವ್ ಗಂಗೂಲಿ ಶತಕ ಸಿಡಿಸಿದ್ದರು. ಇದೇ ಪಂದ್ಯದಲ್ಲಿ ರಾಹುಲ್ ದ್ರಾವಿಡ್ 95 ರನ್ ಗಳಿಸಿ ಔಟಾಗಿದ್ದರು.
5. ಫುಟ್ಬಾಲ್ ಪ್ರೀತಿ
ಕ್ರಿಕೆಟ್ ಹೊರತಾಗಿ ಫುಟ್ಬಾಲ್ ಕ್ರೀಡೆಯ ಮೇಲೂ ಅತೀವ ಪ್ರೀತಿ ಹೊಂದಿರುವ ಸೌರವ್ ಗಂಗೂಲಿ, ಇಂಡಿಯನ್ ಸೂಪರ್ ಲೀಗ್‌ನಲ್ಲಿ (ಐಎಸ್‌ಎಲ್) ಎಟಿಕೆ ಮೋಹನ್ ಬಾಗನ್ ತಂಡದ ಸಹ ಮಾಲೀಕರಾಗಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.