ಲಂಡನ್:ಚೆಂಡಿನ ಹೊಳಪು ಉಳಿಸಿಕೊಳ್ಳಲು ಬೌಲರ್‌ಗಳು ಎಂಜಲು ಮತ್ತು ಬೆವರು ಬಳಸುವುದರಿಂದ ಆರೋಗ್ಯಕ್ಕೆ ಸಮಸ್ಯೆಯಾಗುವ ಅಪಾಯ ಇದೆ. ಆದ್ದರಿಂದ ಕ್ರಿಕೆಟ್‌ನಲ್ಲಿ ಕೆಲ ಮಟ್ಟಿಗೆ ಚೆಂಡು ‘ವಿರೂಪ’ಗೊಳಿಸಲು ಅವಕಾಶ ನೀಡಬೇಕು ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಇಯಾನ್ ಚಾಪೆಲ್ ಸಲಹೆ ನೀಡಿದ್ದಾರೆ.
ಚೆಂಡು ಸ್ವಿಂಗ್ ಆಗಿ ಬ್ಯಾಟ್ಸ್‌ಮನ್‌ಗಳು ಗಲಿಬಿಲಿಗೊಳ್ಳುವಂತೆ ಮಾಡಲು ಬೌಲರ್‌ಗಳು ಚೆಂಡಿನ ಒಂದು ಬದಿ ಹೊಳಪಿನಿಂದ ಕೂಡಿರುವಂತೆ ನೋಡಿಕೊಳ್ಳುತ್ತಾರೆ.
ಚೆಂಡು ಸ್ವಿಂಗ್ ಆಗಲು ಸಹಾಯಕವಾಗಬಹುದು ಎಂದು ಬೌಲರ್‌ಗಳಿಗೆ ಅನಿಸುವಂಥ ಸ್ವಾಭಾವಿಕ ವಸ್ತುಗಳ ಪಟ್ಟ ಮಾಡುವಂತೆ ಚಾಪೆಲ್, ವಿವಿಧ ತಂಡಗಳ ನಾಯಕರಿಗೆ ಈ ಹಿಂದೆ ಸಲಹೆ ನೀಡಿದ್ದರು.
ಈ ನಾಯಕರು ನೀಡುವ ಪಟ್ಟಿಯಿಂದ ಯಾವುದಾದರೂ ಒಂದು ವಿಧಾನವನ್ನು ಕಾನೂನುಬದ್ಧಗೊಳಿಸಬೇಕು. ಉಳಿದೆಲ್ಲವನ್ನು ನಿಯಮಬಾಹಿರವೆಂದು ಪರಿಗಣಿಸಿ ದಂಡಿಸಬೇಕು ಎಂದು ಅವರು ಕ್ರಿಕ್ ಇನ್ಫೊ ವೆಬ್‌ಸೈಟ್‌ನಲ್ಲಿ ಬರೆದಿದ್ದಾರೆ.
ಈಗ ಕ್ರಿಕೆಟ್ ನಡೆಯದೇ ಇರುವ ಕಾರಣ, ಇಂಥ ಪ್ರಕ್ರಿಯೆಯನ್ನು ಕೈಗೊಳ್ಳಲು ಸಕಾಲ. ಬೆವರು, ಎಂಜಲು ಬಳಕೆಯನ್ನು ಇದೀಗ ಆರೋಗ್ಯ ಸಮಸ್ಯೆಯ ಭಾಗವಾಗಿ ಪರಿಗಣಿಸುತ್ತಿರುವ ಕಾರಣ ಬೌಲರ್‌ಗಳಿಗೆ ಚೆಂಡಿಗೆ ಹೊಳಪು ನೀಡಲು ಸಾಂಪ್ರದಾಯಿಕ ವಿಧಾನದ ಬದಲು ಪರ್ಯಾಯ ವಿಧಾನ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.