ಶುಕ್ರವಾರ, ಆಗಸ್ಟ್ 12, 2022
20 °C
ಟಿ–20 ಲೀಗ್‌ಗಳು–ಅಂತರರಾಷ್ಟ್ರೀಯ ಕ್ರಿಕೆಟ್ ನಡುವೆ ಐಸಿಸಿಗೆ ಆರ್ಥಿಕ ಸಮತೋಲನ ಸಾಧಿಸುವ ಸವಾಲು

ಟೆಸ್ಟ್‌ ಮಾದರಿಗೂ ಪ್ರಾಮಖ್ಯತೆ ಇರಲಿ: ಆ್ಯಂಡಿ ಫ್ಲವರ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದಿನದಿಂದ ದಿನಕ್ಕೆ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿರುವ ಟಿ–20 ಲೀಗ್‌ಗಳು ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್‌ ನಡುವೆ ಆರ್ಥಿಕ ಸಮತೋಲನ ಸಾಧಿಸುವುದು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ಗೆ‌ (ಐಸಿಸಿ) ಮುಂದಿನ ದಶಕದಲ್ಲಿ ಸವಾಲಾಗಿ ಪರಿಣಮಿಸಲಿದೆ ಎಂದು ಖ್ಯಾತ ಕೋಚ್‌ ಆ್ಯಂಡಿ ಫ್ಲವರ್‌ ಅಭಿಪ್ರಾಯಪಟ್ಟಿದ್ದಾರೆ.

ಟೆಸ್ಟ್ ಮಾದರಿಯ ಪರವಾಗಿ ವಿರಾಟ್‌ ಕೊಹ್ಲಿಯಂತಹ ತಾರಾ ಆಟಗಾರರು ಧ್ವನಿಯೆತ್ತುವುದನ್ನು ಮುಂದುವರಿಸಬೇಕು ಎಂದೂ ಫ್ಲವರ್‌ ಹೇಳಿದ್ದಾರೆ.

ಬಿಸಿಸಿಐ ಬೆಂಬಲಿತ ಐಪಿಎಲ್ ಸೇರಿದಂತೆ, ಐಸಿಸಿಯ ಪೂರ್ಣ ಸದಸ್ಯತ್ವ ಹೊಂದಿರುವ ದೇಶಗಳು ತಮ್ಮದೇ ಆದ ಟಿ20 ಲೀಗ್‌ಗಳನ್ನು ಹೊಂದಿವೆ. ಅಲ್ಲದೆ ಫ್ರ್ಯಾಂಚೈಸ್ ಆಧಾರಿತ ಕ್ರಿಕೆಟ್‌ನ ತ್ವರಿತ ಬೆಳವಣಿಗೆಯು, ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ (ಬಿಗ್‌ ತ್ರಿ) ದೇಶಗಳನ್ನು ಹೊರತುಪಡಿಸಿ ಅಂತರರಾಷ್ಟ್ರೀಯ ಕ್ರಿಕೆಟ್‌ನ ವೇಳಾಪಟ್ಟಿ ಮತ್ತು ಅದರ ಕಾರ್ಯಸಾಧ್ಯತೆ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡಿದೆ.

ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಸಹಾಯಕ ಕೋಚ್‌ ಹುದ್ದೆಯ ಮೂಲಕ ಫ್ಲವರ್‌ ಅವರು ಐಪಿಎಲ್‌ನಲ್ಲಿ ಮೊದಲ ಬಾರಿ ಕಾಣಿಸಿಕೊಳ್ಳುತ್ತಿದ್ದಾರೆ.

ದುಬೈನಲ್ಲಿ ಮಾತನಾಡಿದ ಅವರು ‘ಇಂಗ್ಲೆಂಡ್‌ನಲ್ಲಿ ಇತ್ತೀಚೆಗೆ ನಡೆದ ಸರಣಿಯಲ್ಲಿ ಟೆಸ್ಟ್‌ ಮಾದರಿಗೆ ಇರುವ ಆಸಕ್ತಿ ಕಾಣಿಸಿದೆ. ಆದರೂ ಟಿ20 ವೈಭವದ ಜೊತೆಗೇ ಟೆಸ್ಟ್‌ ಮಾದರಿಯನ್ನು ಜಾಣ್ಮೆಯಿಂದ ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ‘ ಎಂದು ಹೇಳಿದ್ದಾರೆ.

‘ನನ್ನ ಪ್ರಕಾರ ಭಾರತ, ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾಗಳಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಉತ್ತಮ ಸ್ಪಂದನೆ ಇದೆ. ಆಟಗಾರರಲ್ಲೂ ಈ ಮಾದರಿಯಲ್ಲಿ ಆಡುವ ಆಸಕ್ತಿ ಇದೆ‘ ಎಂದು ಜಿಂಬಾಬ್ವೆ ತಂಡದ ಮಾಜಿ ನಾಯಕರೂ ಆಗಿರುವ ಫ್ಲವರ್‌‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು