ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧೆಯಲ್ಲಿ ಅಶ್ವಿನ್, ರೂಟ್, ಮೇಯರ್ಸ್

ಐಸಿಸಿ ಫೆಬ್ರುವರಿ ತಿಂಗಳ ಆಟಗಾರ ಗೌರವ ಯಾರಿಗೆ?
Last Updated 2 ಮಾರ್ಚ್ 2021, 16:43 IST
ಅಕ್ಷರ ಗಾತ್ರ

ದುಬೈ (ಪಿಟಿಐ): ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಯ ತಿಂಗಳ ಆಟಗಾರ ಗೌರವ ಗಳಿಸಲು ಮೂವರು ಪ್ರಮುಖ ಆಟಗಾರರು ಸ್ಪರ್ಧೆಯಲ್ಲಿದ್ದಾರೆ.

ಪ್ರತಿ ತಿಂಗಳೂ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಗೌರವಿಸುವ ಕಾರ್ಯಕ್ರಮವನ್ನು ಹೋದ ತಿಂಗಳಷ್ಟೇ ಐಸಿಸಿ ಆರಂಭಿಸಿದೆ. ಇದೀಗ ಫೆಬ್ರುವರಿ ತಿಂಗಳ ಆಟಗಾರರನ್ನು ನಾಮನಿರ್ದೇಶನ ಮಾಡಿದೆ.

ಅದರಲ್ಲಿ ಭಾರತದ ಆಫ್‌ಸ್ಪಿನ್ನರ್ ಆರ್. ಅಶ್ವಿನ್, ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಮತ್ತು ವೆಸ್ಟ್‌ ಇಂಡೀಸ್‌ನ ಯುವ ಆಟಗಾರ ಕೈಲ್ ಮೇಯರ್ಸ್ ಸ್ಪರ್ಧೆಯಲ್ಲಿದ್ದಾರೆ.

ಅಶ್ವಿನ್ ಹೋದ ತಿಂಗಳು ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದರು ಮತ್ತು ಐದು ವಿಕೆಟ್ ಗೊಂಚಲೂ ಗಳಿಸಿದ್ದರು. ಅಹಮದಾಬಾದ್ ಟೆಸ್ಟ್‌ನಲ್ಲಿಯೂ ಉತ್ತಮ ಬೌಲಿಂಗ್ ಮಾಡಿದ್ದರು. ವೃತ್ತಿಜೀವನದ 400ನೇ ವಿಕೆಟ್‌ ಅನ್ನೂ ಇಲ್ಲಿ ಗಳಿಸಿದ್ದರು. ಎರಡೂ ಪಂದ್ಯಗಳಲ್ಲಿ ಭಾರತ ಜಯಿಸಿತ್ತು.

’ಈ ಅವಧಿಯಲ್ಲಿ 176 ರನ್ ಮತ್ತು 24 ವಿಕೆಟ್‌ಗಳನ್ನು ಗಳಿಸಿರುವ ಅಶ್ವಿನ್ ಪುರುಷರ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದಾರೆ. ಜೋ ರೂಟ್ ಭಾರತ ವಿರುದ್ಧದ ಮೂರು ಪಂದ್ಯಗಳಲ್ಲಿ 333 ರನ್ ಮತ್ತು ಆರು ವಿಕೆಟ್‌ಗಳನ್ನು ಗಳಿಸಿದ್ದಾರೆ. ಚೆ್ನ್ನೈನ ಮೊದಲ ಟೆಸ್ಟ್‌ನಲ್ಲಿ ಅವರು ದ್ವಿಶತಕ ಬಾರಿಸಿದ್ದರು‘ ಎಂದು ಐಸಿಸಿ ಮಾಹಿತಿ ನೀಡಿದೆ.

ಚಿತ್ತಗಾಂಗ್‌ನಲ್ಲಿ ನಡೆದಿದ್ದ ಬಾಂಗ್ಲಾ ವಿರುದ್ಧದ ಟೆಸ್ಟ್‌ನಲ್ಲಿ 395 ರನ್‌ಗಳ ಗುರಿ ಬೆನ್ನತ್ತಿದ್ದ ವೆಸ್ಟ್‌ ಇಂಡೀಸ್‌ ಗೆಲ್ಲಲು ಕಾರಣರಾಗಿದ್ದ ಯುವ ಆಟಗಾರ ಕೈಲ್ ಮೇಯರ್ಸ್‌ ಅವರೂ ಈ ಸ್ಪರ್ಧೆಯಲ್ಲಿದ್ದಾರೆ. ಅದು ಅವರ ಪದಾರ್ಪಣೆ ಪಂದ್ಯವಾಗಿತ್ತು. ಅದರಲ್ಲಿ ಅವರು ದ್ವಿಶತಕ ಗಳಿಸಿ ತಂಡಕ್ಕೆ ಜಯದ ಕಾಣಿಕೆ ಕೊಟ್ಟಿದ್ದರು.

ಮಹಿಳಾ ವಿಭಾಗದಲ್ಲಿ ಇಂಗ್ಲೆಂಡ್‌ನ ನ್ಯಾಟ್ ಸಿವರ್, ಟ್ಯಾಮಿ ಬೀಮೌಂಟ್ ಮತ್ತು ನ್ಯೂಜಿಲೆಂಡ್‌ನ ಬ್ರೂಕ್ ಹಾಲಿಡೆ ಅವರು ಸ್ಪರ್ಧೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT