ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವೆಂಟಿ–20 ವಿಶ್ವಕಪ್‌ ಮುಂದಕ್ಕೆ?

ಐಸಿಸಿ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ
Last Updated 15 ಮೇ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯನ್ನು 2022ಕ್ಕೆ ಮುಂದೂಡುವ ಸಾಧ್ಯತೆ ಇದೆ.

ಇದೇ 28ರಂದು ನಡೆಯುವ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಲಿದೆ ಎಂದು ಕ್ರಿಕೆಟ್‌ ಮಂಡಳಿಯೊಂದರ ಸದಸ್ಯರೊಬ್ಬರು ತಿಳಿಸಿದ್ದಾರೆ.

ವಿಶ್ವಕಪ್‌ ಟೂರ್ನಿಯು ಇದೇ ವರ್ಷದ ಅಕ್ಟೋಬರ್‌ 18ರಿಂದ ನವೆಂಬರ್‌ 15ರವರೆಗೆ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿದೆ. ಕೊರೊನಾ ಬಿಕ್ಕಟ್ಟು ಉಲ್ಬಣಿಸುತ್ತಿರುವ ಕಾರಣ ಟೂರ್ನಿಯ ಭವಿಷ್ಯ ಡೋಲಾಯಮಾನವಾಗಿದೆ.

ಕ್ರಿಸ್‌ ಟೆಟ್ಲಿ ನೇತೃತ್ವದಐಸಿಸಿ ಕ್ರೀಡಾಕೂಟಗಳ ಸಮಿತಿಯು ವಿಶ್ವಕಪ್‌ ಆಯೋಜನೆಗೆ ಇರುವ ಆಯ್ಕೆಗಳ ಕುರಿತು ಸಭೆಯಲ್ಲಿ ಪ್ರಸ್ತಾಪಿಸಲಿದೆ.

‘ಎಲ್ಲಾ ತಂಡಗಳನ್ನು 14 ದಿನಗಳ ಪ್ರತ್ಯೇಕವಾಸಕ್ಕೆ ಒಳಪಡಿಸುವುದರ ಜೊತೆಗೆ ಪ್ರೇಕ್ಷಕರ ಸಮ್ಮುಖದಲ್ಲಿ ನಿಗದಿತ ವೇಳಾಪಟ್ಟಿಯ ಪ್ರಕಾರವೇ ಟೂರ್ನಿ ನಡೆಸುವುದು ಮೊದಲ ಆಯ್ಕೆ. ಎರಡನೇಯದ್ದು ಪ್ರೇಕ್ಷಕರಿಲ್ಲದೆಯೇ ಪಂದ್ಯಗಳನ್ನು ಆಯೋಜಿಸುವುದು. ಇದು ಸಾಧ್ಯವಾಗದೇ ಹೋದರೆ 2022ಕ್ಕೆ ಟೂರ್ನಿಯನ್ನು ಮುಂದೂಡುವುದು. ಇದು ಅಂತಿಮ ಆಯ್ಕೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘16 ತಂಡಗಳ ಆಟಗಾರರು, ನೆರವು ಸಿಬ್ಬಂದಿಯ ಜೊತೆಗೆ ನೇರ ಪ್ರಸಾರದ ಹಕ್ಕು ಖರೀದಿಸಿರುವ ಕ್ರೀಡಾ ವಾಹಿನಿಯ ಸಿಬ್ಬಂದಿಯನ್ನು 14 ದಿನ ಪ್ರತ್ಯೇಕವಾಸದಲ್ಲಿಡುವುದು ಕಷ್ಟ. ಇದಕ್ಕೆ ತುಂಬಾ ಹಣ ವ್ಯಯವಾಗುತ್ತದೆ. ವಿಶ್ವಕಪ್‌ ವೇಳೆಗೆ ಕೆಲ ರಾಷ್ಟ್ರಗಳಲ್ಲಿ ಕೋವಿಡ್‌ ಬಿಕ್ಕಟ್ಟು ನಿಯಂತ್ರಣಕ್ಕೆ ಬಾರದಿದ್ದರೆ, ಆ ದೇಶದ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳುವುದಾದರೂ ಹೇಗೆ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಟ್ವೆಂಟಿ–20 ವಿಶ್ವಕಪ್ ಅನ್ನು‌ ಮುಂದಿನ ವರ್ಷಕ್ಕೆ ಮುಂದೂಡುವುದು ಸಮಂಜಸವಲ್ಲ. ಏಕೆಂದರೆ ಫೆಬ್ರುವರಿ–ಮಾರ್ಚ್‌ನಲ್ಲಿ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿ ಇದೆ. ಹೀಗಾಗಿ ಟೂರ್ನಿಯನ್ನು 2022ರಲ್ಲಿ ಆಯೋಜಿಸುವುದೇ ಸೂಕ್ತ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಐಸಿಸಿ ಮುಖ್ಯಸ್ಥ ಶಶಾಂಕ್‌ ಮನೋಹರ್‌ ಅವರ ಅಧಿಕಾರಾವಧಿಯನ್ನು ಇನ್ನೆರಡು ತಿಂಗಳು ವಿಸ್ತರಿಸುವ ಕುರಿತೂ ಸಭೆಯಲ್ಲಿ ಚರ್ಚಿಸುವ ನಿರೀಕ್ಷೆ ಇದೆ.

ಇದೇ ವೇಳೆ ಕ್ರಿಕೆಟ್‌ ಸಮಿತಿಯ ಸಭೆ ನಡೆಯಲಿದೆ. ಕೊರೊನಾ ನಂತರದ ಕಾಲಘಟ್ಟದಲ್ಲಿ ಬೌಲರ್‌ಗಳು ಚೆಂಡಿಗೆ ಎಂಜಲು ಹಚ್ಚುವುದಕ್ಕೆ ಅವಕಾಶ ನೀಡಬೇಕೆ, ಬೇಡವೇ ಎಂಬುದರ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯುವ ಸಂಭವವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT