ಬುಧವಾರ, ಏಪ್ರಿಲ್ 14, 2021
31 °C
ಟಾಸ್ ಒಲಿದವರಿಗೆ ಜಯದ ಅವಕಾಶ ಹೆಚ್ಚು

ನಾಲ್ಕನೇ ಟ್ವೆಂಟಿ–20 ಪಂದ್ಯ: ಜಯಿಸಲೇಬೇಕಾದ ಒತ್ತಡದಲ್ಲಿ ವಿರಾಟ್ ಬಳಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್: ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ನಾಲ್ಕನೇ ಟ್ವೆಂಟಿ–20 ಪಂದ್ಯದಲ್ಲಿ ಟಾಸ್ ಜಯಿಸುವವರು ಯಾರು ಎಂಬ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ.

ಅದಕ್ಕೆ ಕಾರಣ ಕಳೆದ ಮೂರು ಪಂದ್ಯಗಳಲ್ಲಿಯೂ ಟಾಸ್ ಜಯಿಸಿದ ತಂಡವೇ ಜಯಭೇರಿ ಬಾರಿಸಿದ್ದು. ಇಲ್ಲಿ ರಾತ್ರಿ ಇಬ್ಬನಿಯಲ್ಲಿ ಕೈಜಾರುವ ಚೆಂಡಿನಲ್ಲಿ ಬೌಲಿಂಗ್ ಮಾಡುವುದು ಸ್ಪಿನ್ನರ್‌ಗಳಿಗೆ ಸವಾಲಾಗುತ್ತಿದೆ. ಜೊತೆಗೆ ಪಿಚ್‌ ಕೂಡ ಚೇಸಿಂಗ್‌ ನಲ್ಲಿ ಬ್ಯಾಟಿಂಗ್‌ಗೆ ಹೆಚ್ಚು ಅನುಕೂಲವಾಗುತ್ತಿದೆ. ಆದ್ದರಿಂದಲೇ ಟಾಸ್ ಜಯಿಸಿದವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಎರಡು ಬಾರಿ ಟಾಸ್ ಗೆದ್ದ ಏಯಾನ್ ಮಾರ್ಗನ್ ಸರಣಿಯಲ್ಲಿ 2–1ರ ಮುನ್ನಡೆ ಸಾಧಿಸಿದ್ದಾರೆ. ಎರಡನೇ ಪಂದ್ಯದಲ್ಲಿ ಚೇಸಿಂಗ್‌ನಲ್ಲಿ ಮಿಂಚಿದ್ದ ವಿರಾಟ್ ಕೊಹ್ಲಿ ಮತ್ತು ಇಶಾನ್ ಕಿಶನ್ ಆತಿಥೇಯರಿಗೆ ಜಯದ ಕಾಣಿಕೆ ನೀಡಿದ್ದರು. ಈ ಪಂದ್ಯದಲ್ಲಿ ಭಾರತವು ಜಯಿಸಲೇಬೇಕಾದ ಒತ್ತಡದಲ್ಲಿದೆ. ಸೋತರೆ ಸರಣಿಜಯದ ಅಸೆಯೂ ಕಮರುತ್ತದೆ.

 ಭಾರತ ತಂಡವು ಸೋತ ಎರಡೂ ಪಂದ್ಯಗಳಲ್ಲಿ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯ ಎದ್ದು ಕಂಡಿದೆ. ದೊಡ್ಡ ಮೊತ್ತವನ್ನು ಪೇರಿಸಲು ಸಾಧ್ಯವಾಗಿಲ್ಲ.

ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಮೂರು ಪಂದ್ಯಗಳ ಪೈಕಿ ಒಂದರಲ್ಲಿ ಮಾತ್ರ ಒಂದು ರನ್ ಮಾಡಿದ್ದಾರೆ. ಉಳಿದೆರಡರಲ್ಲಿ ಖಾತೆ ತೆರೆಯದೇ ಔಟಾಗಿದ್ದಾರೆ. ಅವರಿಗೆ ಇನ್ನೊಂದು ಅವಕಾಶ ಲಭಿಸುವ ಸಾಧ್ಯತೆ ಅತ್ಯಲ್ಪ.

ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ಶಿಖರ್ ಧವನ್ ಬದಲು ಎರಡನೇ ಪಂದ್ಯದಲ್ಲಿ ಆಡಿದ್ದ ಇಶಾನ್ ಕಿಶನ್ ಮಿಂಚಿದ್ದರು. ಮೂರನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಕಣಕ್ಕಿಳಿದಿದ್ದರು. ಆದರೆ ಅವರು ನಿರೀಕ್ಷಿತ ಮಟ್ಟದಲ್ಲಿ ಆಡಿರಲಿಲ್ಲ. ಮಂಗಳವಾರದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ ಮಾತ್ರ ತಂಡದ ಗೌರವ ಉಳಿಸಿತ್ತು.  ಆದರೆ ಜಯ ದಕ್ಕಿರಲಿಲ್ಲ.

ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ  ರನ್‌ ಗಳಿಕೆಗೆ ಸ್ವಲ್ಪ ಕಾಣಿಕೆ ನೀಡಿದ್ದಾರೆ. ಅದರಿಂದಾಗಿ ಮಧ್ಯಮಕ್ರಮಾಂಕದಲ್ಲಿ ಭರವಸೆ ಮೂಡಿದೆ. ಆದರೆ ತಂಡಕ್ಕೆ ಟಾಸ್ ಸೋತು ಮತ್ತೆ ಬ್ಯಾಟಿಂಗ್ ಮಾಡುವ ಪ್ರಸಂಗ ಬಂದರೆ, 200 ರನ್‌ಗಳ ಆಸುಪಾಸಿನ ಮೊತ್ತ ಗಳಿಸಿದರೆ  ಮಾತ್ರ ಎದುರಾಳಿಗಳಿಗೆ ದಿಟ್ಟ ಸವಾಲು ಒಡ್ಡಬಹುದು. ಅದಕ್ಕಾಗಿ ಉತ್ತಮ ಆರಂಭ ಅವಶ್ಯಕ.  ಇಂಗ್ಲೆಂಡ್‌ನ ವೇಗಿ ಜೋಫ್ರಾ ಆರ್ಚರ್, ಮಾರ್ಕ್ ವುಡ್, ಕ್ರಿಸ್ ಜೋರ್ಡಾನ್ ಅವರನ್ನು ಎದುರಿಸಿ ನಿಲ್ಲಬೇಕು. 

ಜೋಸ್ ಬಟ್ಲರ್, ಜಾನಿ ಬೆಸ್ಟೋ ಅವರು ಉತ್ತಮ ಲಯದಲ್ಲಿದ್ದಾರೆ. ಆದ್ದರಿಂದ ಪ್ರವಾಸಿ ಬಳಗದ  ಆತ್ಮವಿಶ್ವಾಸ ಹೆಚ್ಚಿಸಿದೆ. ಅವರೂ ಸೇರಿದಂತೆ ತಂಡದಲ್ಲಿರುವ ಒಟ್ಟು ಎಂಟು ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ಶಿಸ್ತಿನ ಬೌಲಿಂಗ್ ಮಾಡುವುದು ಆತಿಥೇಯರಿಗೆ ಅನಿವಾರ್ಯ. ಕ್ಯಾಚ್‌ಗಳನ್ನು ಕೈಚೆಲ್ಲುವ ಚಟವನ್ನು ಬಿಟ್ಟರೆ ಗೆಲುವಿನ ಹಾದಿ ಸುಗಮವಾಗಬಹುದು.

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್. ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, , ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ದೀಪಕ್ ಚಾಹರ್, ರಾಹುಲ್ ತೆವಾಟಿಯಾ.

ಇಂಗ್ಲೆಂಡ್: ಏಯಾನ್ ಮಾರ್ಗನ್ (ನಾಯಕ), ಜಾಸ್ ಬಟ್ಲರ್, ಜೇಸನ್ ರಾಯ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ಬೆನ್ ಸ್ಟೋಕ್ಸ್‌, ಮೋಯಿನ್ ಅಲಿ,  ಆದಿಲ್ ರಶೀದ್, ರೀಸ್ ಟಾಪ್ಲೆ, ಕ್ರಿಸ್ ಜೋರ್ಡಾನ್, ಮಾರ್ಕ್ ವುಡ್, ಸ್ಯಾಮ್ ಕರನ್, ಟಾಮ್ ಕರನ್. ಸ್ಯಾಮ್ ಬಿಲಿಂಗ್ಸ್, ಜಾನಿ ಬೆಸ್ಟೊ, ಜೋಫ್ರಾ ಆರ್ಚರ್

ಪಂದ್ಯ ಆರಂಭ: ರಾತ್ರಿ 7

ನೇರಪ್ರಸಾರ: ಸ್ಟಾರ್ ನೆಟ್‌ವರ್ಕ್

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು