ಶುಕ್ರವಾರ, ಏಪ್ರಿಲ್ 23, 2021
27 °C
ಶುಭಮನ್ ಗಿಲ್, ಮೊಹಮ್ಮದ್ ಸಿರಾಜ್ ಪದಾರ್ಪಣೆ: ಕೆ.ಎಲ್.ರಾಹುಲ್‌ಗೆ ಸಿಗದ ಅವಕಾಶ

IND vs AUS: ಅಜಿಂಕ್ಯ ರಹಾನೆ ನಾಯಕತ್ವಕ್ಕೆ ‘ಟೆಸ್ಟ್‌’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್: ಶನಿವಾರ  ಆರಂಭವಾಗಲಿರುವ ಆಸ್ಟ್ರೇಲಿಯಾ ಎದುರಿನ  ಬಾಕ್ಸಿಂಗ್ ಡೇ ಟೆಸ್ಟ್‌ ಹಂಗಾಮಿ ನಾಯಕ ಅಜಿಂಕ್ಯ ರಹಾನೆಗೆ ಅಗ್ನಿಪರೀಕ್ಷೆಯಾಗಿದೆ.

ಹೋದ ವಾರ ಅಡಿಲೇಡ್‌ನಲ್ಲಿ ಹೀನಾಯ ಸೋಲು ಅನುಭವಿಸಿದ್ದ ತಂಡವನ್ನು ಗೆಲುವಿನ ಹಾದಿಗೆ ಮರಳಿ ತರುವ ಕಠಿಣ ಸವಾಲು ಅವರ ಮುಂದಿದೆ. ಶ್ರೇಷ್ಠ ಬ್ಯಾಟ್ಸ್‌ಮನ್ ಮತ್ತು ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವು ಕಣಕ್ಕಿಳಿಯಲಿದೆ.

ಈ ಹಾದಿಯ ಮೊದಲ ಸವಾ ಲಾಗಿದ್ದ ತಂಡದ ಆಯ್ಕೆಯನ್ನು ರಹಾನೆ ಮಾಡಿದ್ದಾರೆ. ಯುವ ಆಟಗಾರ ಶುಭ ಮನ್ ಗಿಲ್ ಪದಾರ್ಪಣೆ ಮಾಡುವುದು ಖಚಿತವಾಗಿದೆ. ಕನ್ನಡಿಗ ಮಯಂಕ್ ಅಗರವಾಲ್ ಜೊತೆಗೆ ಇನಿಂಗ್ಸ್ ಆರಂಭಿ ಸಲಿದ್ದಾರೆ. ಆದರೆ, ಬಹಳ ನಿರೀಕ್ಷೆ ಮೂಡಿಸಿದ್ದ ಕೆ.ಎಲ್.ರಾಹುಲ್ ಅವರಿಗೆ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಿಲ್ಲ.  ಮೊದಲ ಟೆಸ್ಟ್‌ನಲ್ಲಿ ವೈಫಲ್ಯ ಅನುಭವಿಸಿದ್ದ ವೃದ್ಧಿಮಾನ್ ಸಹಾ ಅವರಿಗೆ ವಿಶ್ರಾಂತಿ ಕೊಡಲಾಗಿದೆ. ಇದರಿಂದಾಗಿ ದೆಹಲಿ ವಿಕೆಟ್‌ಕೀಪರ್ ರಿಷಭ್ ಪಂತ್ ಸ್ಥಾನ ಪಡೆದಿದ್ದಾರೆ. ಹನುಮವಿಹಾರಿ ಮುಂದುವರಿದಿದ್ದಾರೆ.

ಕನ್‌ಕಷನ್‌ನಿಂದ ಚೇತರಿಸಿಕೊಂಡಿರುವ ಆಲ್‌ರೌಂಡರ್ ರವೀಂದ್ರ ಜಡೇಜ, ಆಫ್‌ ಸ್ಪಿನ್ನರ್ ಆರ್. ಅಶ್ವಿನ್ ಜೊತೆಗೆ ಸ್ಪಿನ್ ವಿಭಾಗದ ಹೊಣೆ ನಿಭಾಯಿಸಲಿದ್ದಾರೆ. ಗಾಯಗೊಂಡು ಹೊರಬಿದ್ದಿರುವ ಮಧ್ಯಮವೇಗಿ ಮೊಹಮ್ಮದ್ ಶಮಿ ಬದಲಿಗೆ ಮೊಹಮ್ಮದ್ ಸಿರಾಜ್ ಕಣಕ್ಕಿಳಿಯುವರು. ಅವರಿಗೆ ಇದು ಪದಾರ್ಪಣೆಯ ಪಂದ್ಯ.  

ಒಟ್ಟು ಐವರು ಬೌಲರ್‌ಗಳು ಕಣದಲ್ಲಿದ್ದಾರೆ. ಸಾಂದರ್ಭಿಕವಾಗಿ ಹನುಮವಿಹಾರಿ ಕೂಡ ಬೌಲಿಂಗ್ ಮಾಡಬಲ್ಲರು. ಅವರನ್ನು ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್‌ಗೆ ಕಳಿಸುವ ಸಾಧ್ಯತೆ ಇದೆ. ಚೇತೇಶ್ವರ್ ಪೂಜಾರ ಮೂರನೇ ಮತ್ತು ಐದನೇ ಕ್ರಮಾಂಕದಲ್ಲಿ ರಹಾನೆ ಆಡಬಹುದು. ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಆಸ್ಟ್ರೇಲಿಯಾದ ವೇಗಿ ಗಳಾದ ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್ ಮತ್ತು ಪ್ಯಾಟ್ ಕಮಿನ್ಸ್‌ ಎದುರು ಚಳಿ ಬಿಟ್ಟು ಆಡಿದರೆ ಅಡಿಲೇಡ್‌ನಲ್ಲಿ ಅನುಭವಿಸಿದ್ದ ’ಸಮ್ಮರ್ 36‘ ಬೇಗೆಯನ್ನು ಮರೆಯಬಹುದು.

ಮೊದಲ ಪಂದ್ಯದ ಜಯದ ಖುಷಿ ಯಲ್ಲಿರುವ ಆತಿಥೇಯ ಬಳಗವು ವಿರಾಟ್ ಇಲ್ಲದ ತಂಡವನ್ನು ಮಣಿಸುವ ಛಲದಲ್ಲಿದೆ.

’ಭಾರತ ತಂಡದಲ್ಲಿ ಬಹಳಷ್ಟು ಪ್ರತಿಭಾನ್ವಿತ ಆಟಗಾರರು ಇದ್ದಾರೆ. ಪಂದ್ಯ ಗೆಲ್ಲಿಸಬಲ್ಲ ಸಮರ್ಥರಿದ್ದಾರೆ‘ ಎಂದು ಆಸ್ಟ್ರೇಲಿಯಾ ನಾಯಕ ಟಿಮ್ ಪೇನ್ ಹೇಳಿದ್ದಾರೆ. ‌

ನಾಲ್ಕು ಪಂದ್ಯಗಳ ಬಾರ್ಡರ್‌–ಗಾವಸ್ಕರ್ ಸರಣಿಯಲ್ಲಿ ಆತಿಥೇಯರು 1–0 ಮುನ್ನಡೆ ಸಾಧಿಸಿದ್ದಾರೆ. ಭಾರತವು ಈ ಪಂದ್ಯ ಗೆದ್ದು ಸಮಬಲ ಸಾಧಿಸಿದರೆ, ಸರಣಿ ಜಯದ ಆಸೆ ಜೀವಂತವಾಗುಳಿಯುತ್ತದೆಯಲ್ಲದೇ, ನಡೆಯುವ ಮೂರನೇ ಟೆಸ್ಟ್ ರೋಚಕವಾಗುತ್ತದೆ.

ತಂಡಗಳು
ಭಾರತ: ಅಜಿಂಕ್ಯ ರಹಾನೆ (ನಾಯಕ), ಮಯಂಕ್ ಅಗರವಾಲ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ಹನುಮವಿಹಾರಿ, ರಿಷಭ್ ಪಂತ್ (ವಿಕೆಟ್‌ಕೀಪರ್), ರವೀಂದ್ರ ಜಡೇಜ, ಆರ್. ಅಶ್ವಿನ್, ಉಮೇಶ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್.

ಆಸ್ಟ್ರೇಲಿಯಾ: ಟಿಮ್ ಪೇನ್ (ನಾಯಕ–ವಿಕೆಟ್‌ಕೀಪರ್), ಜೋ ಬರ್ನ್ಸ್, ಮ್ಯಾಥ್ಯೂ ವೇಡ್, ಮಾರ್ನಸ್ ಲಾಬು ಷೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮರೂನ್ ಗ್ರೀನ್, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್‌ವುಡ್, ಮಿಚೆಲ್ ಸ್ಟಾರ್ಕ್, ನೇಥನ್ ಲಯನ್.
ಪಂದ್ಯ ಆರಂಭ: ಬೆಳಿಗ್ಗೆ 5ರಿಂದ
ನೇರಪ್ರಸಾರ: ಸೋನಿ ನೆಟ್‌ವರ್ಕ್

*

ಭಾರತ ತಂಡದ ನಾಯಕತ್ವ ವಹಿಸಿರುವುದು ಅತ್ಯಂತ ದೊಡ್ಡ ಗೌರವ. ಸಾಮರ್ಥ್ಯ ಸಾಬೀತುಪಡಿಸುವ ಸುವರ್ಣಾವಕಾಶವೂ ಹೌದು. ನನಗೆ ಯಾವುದೇ ಒತ್ತಡವಿಲ್ಲ.
-ಅಜಿಂಕ್ಯ ರಹಾನೆ, ಭಾರತ ತಂಡದ ಹಂಗಾಮಿ ನಾಯಕ

*

ಕ್ರಿಕೆಟ್‌ ಜಗತ್ತಿನಲ್ಲಿ ಭಾರತವು ಹೆಮ್ಮೆಯ ದೇಶವಾಗಿದೆ. ಅಡಿಲೇಡ್ ಮಾದರಿಯಲ್ಲಿ ಎಂಸಿಜಿಯಲ್ಲಿ ಉರುಳುವುದಿಲ್ಲ. ಪುಟಿದೇಳುವ ಶಕ್ತಿ ಅದಕ್ಕಿದೆ.
-ಟಿಮ್ ಪೇನ್, ಆಸ್ಟ್ರೆಲಿಯಾ ತಂಡದ ನಾಯಕ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು