ಮಂಗಳವಾರ, ಮಾರ್ಚ್ 2, 2021
21 °C

ರೋಹಿತ್ ಬೇಜವಾಬ್ದಾರಿ ಆಟಕ್ಕೆ ಗವಾಸ್ಕರ್ ಕಿಡಿ; ಬೇಸರವಿಲ್ಲ ಎಂದ ಹಿಟ್‌ಮ್ಯಾನ್

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಬ್ರಿಸ್ಬೇನ್: ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ಗಾಬಾದಲ್ಲಿ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಉತ್ತಮ ಆರಂಭ ಪಡೆದರೂ ಕಳಪೆ ಹೊಡೆತದ ಮೂಲಕ ವಿಕೆಟ್ ಒಪ್ಪಿಸಿರುವ ಭಾರತದ ಬಲಗೈ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರನ್ನು ಮಾಜಿ ದಿಗ್ಗಜ ಸುನಿಲ್ ಗವಾಸ್ಕರ್ ಟೀಕಿಸಿದ್ದಾರೆ.

ಆದರೆ ಶಾಟ್ ಆಯ್ಕೆ ಬಗ್ಗೆ ತಮಗೆ ಯಾವುದೇ ಬೇಸರವಿಲ್ಲ ಎಂದು ಎರಡನೇ ದಿನದಾಟದ ಬಳಿಕ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.

ಆಸ್ಟ್ರೇಲಿಯಾದ 369 ರನ್‌ಗಳ ಮೊದಲ ಇನ್ನಿಂಗ್ಸ್ ಮೊತ್ತಕ್ಕೆ ಉತ್ತರವಾಗಿ ಭಾರತ ಶುಭಮನ್ ಗಿಲ್ (7) ವಿಕೆಟ್ ಬೇಗನೇ ಕಳೆದುಕೊಂಡರೂ ಅನುಭವಿ ರೋಹಿತ್ ಶರ್ಮಾ ಕ್ರೀಸಿನಲ್ಲಿ ನೆಲೆಯೂರುವ ಮೂಲಕ ದೊಡ್ಡ ಮೊತ್ತ ಪೇರಿಸುವ ಸಂಕೇತ ನೀಡಿದ್ದರು.

74 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ ಆರು ಬೌಂಡರಿಗಳ ನೆರವಿನಿಂದ 44 ರನ್ ಗಳಿಸಿದ್ದರು. ಆದರೆ ಇನ್ನಿಂಗ್ಸ್‌ನ 20ನೇ ಓವರ್‌ನಲ್ಲಿ ಆಫ್ ಸ್ಪಿನ್ನರ್ ನಥನ್ ಲಿಯನ್ ದಾಳಿಯಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದ್ದರು.

ಇದನ್ನೂ ಓದಿ: 

ತಂಡದ ಹಿರಿಯ ಅನುಭವಿ ಬ್ಯಾಟ್ಸ್‌ಮನ್ ಆಗಿ ಅದರಲ್ಲೂ ನಿರ್ಣಾಯಕ ಪಂದ್ಯದಲ್ಲಿ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಬೇಜವಾಬ್ದಾರಿಯುತ ಆಟವನ್ನು ಸುನಿಲ್ ಗವಾಸ್ಕರ್ ಬಲವಾಗಿ ಖಂಡಿಸಿದ್ದರು.

'ಯಾಕೆ? ಯಾಕೆ? ಯಾಕೆ? ಅದನ್ನು ನಂಬಲಾಗುತ್ತಿಲ್ಲ. ಲಾಂಗ್ ಆನ್‌ನಲ್ಲಿ ಫೀಲ್ಡರ್ ಇದ್ದಾರೆ, ಸ್ಕ್ವೇರ್ ಲೆಗ್‌ನಲ್ಲೂ ಫೀಲ್ಡರ್ ಇದ್ದಾರೆ. ಒಂದೆರಡು ಎಸೆತಗಳ ಮೊದಲು ನೀವು ಬೌಂಡರಿ ಹೊಡೆದಿದ್ದೀರಿ. ಮತ್ತೆ ಏಕೆ ಆ ಶಾಟ್ ಆಡಿದ್ದೀರಿ? ನೀವು ತಂಡದ ಹಿರಿಯ ಆಟಗಾರ, ಇದಕ್ಕೆ ಯಾವುದೇ ಕ್ಷಮೆಯಿಲ್ಲ, ನಿಸ್ಸಂಶಯವಾಗಿಯೂ ಈ ಬೇಜವಾಬ್ದಾರಿ ಆಟಕ್ಕೆ ಕ್ಷಮೆಯಿಲ್ಲ. ಅನಗತ್ಯ ವಿಕೆಟ್, ಅನಗತ್ಯ ವಿಕೆಟ್ ಉಡುಗೊರೆಯಾಗಿ ನೀಡಲಾಗಿದೆ. ಖಂಡಿತವಾಗಿಯೂ ಅನಗತ್ಯವಾಗಿತ್ತು' ಎಂದು ಗವಾಸ್ಕರ್ ಟೀಕೆ ಮಾಡಿದರು.

ಆದರೆ ಪಂದ್ಯದ ಬಳಿಕ ಈ ಬಗ್ಗೆ ಮಾಧ್ಯಮ ಮಿತ್ರರು ಕೇಳಿದಾಗ, ತಮ್ಮ ಹೊಡೆತದ ಬಗ್ಗೆ ಕೊರುಗುವುದಿಲ್ಲ ಎಂದು ರೋಹಿತ್ ಶರ್ಮಾ ಸಮರ್ಥಿಸಿಕೊಂಡರು. ನಾನು ಬಯಸಿದ ರೀತಿಯಲ್ಲಿ ಚೆಂಡನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಆದರೆ ಇದೇ ಶೈಲಿಯ ಆಟವನ್ನು ತಾವು ಇಷ್ಟಪಡುವುದಾಗಿ ತಿಳಿಸಿದರು.

ಔಟ್ ಆಗಿರುವುದು ದುರದೃಷ್ಟಕರ. ಆದರೆ ಆ ಬಗ್ಗೆ ಬೇಸರವಿಲ್ಲ. ಒಮ್ಮೆ ಕ್ರೀಸಿನಲ್ಲಿ ನೆಲೆಯೂರಿದ ಬಳಿಕ ಪಿಚ್‌ನಲ್ಲಿ ಹೆಚ್ಚು ಸ್ವಿಂಗ್ ಇಲ್ಲವೆಂದು ಅರಿತ ನಾನು ಬೌಲರ್‌ಗಳ ಮೇಲೆ ಒತ್ತಡ ಹೇರಲು ಬಯಸಿದ್ದೆ. ತಂಡದಲ್ಲಿ ನನ್ನ ಪಾತ್ರವೇ ಅದಾಗಿದೆ ಎಂದು ವಿವರಿಸಿದರು.

ಹಾಗೇ ಆಡುವಾಗ ಔಟ್ ಆಗುವ ಅಪಾಯವಿರುತ್ತದೆ. ಆದರೆ ಅದನ್ನು ಅರಗಿಸಿಕೊಳ್ಳಲು ತಯಾರಿರಬೇಕು. ಇದುವೇ ನನ್ನ ಯೋಜನೆಯಾಗಿದ್ದರಿಂದ ಶಾಟ್ ಆಯ್ಕೆ ಬಗ್ಗೆ ಬೇಸರವಿಲ್ಲ. ತಂಡದಲ್ಲಿ ಯಾರಾದರೂ ಈ ಜವಾಬ್ದಾರಿ ವಹಿಸಬೇಕಿತ್ತು. ನಥನ್ ಲಿಯನ್ ಜಾಣ ಬೌಲರ್. ಹಾಗಾಗಿ ನಾನು ಅಂದುಕೊಂಡ ಹಾಗೆ ಚೆಂಡನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು