ಅಹಮದಾಬಾದ್: ಇಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಈ ಮೂಲಕ ಬಾರ್ಡರ್-ಗಾವಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತ 2-1ರ ಅಂತರದ ಗೆಲುವು ದಾಖಲಿಸಿದೆ.
ಈ ಮಧ್ಯೆ ಭಾರತೀಯ ಬ್ಯಾಟರ್‌ಗಳಾದ ಚೇತೇಶ್ವರ ಪೂಜಾರ ಹಾಗೂ ಶುಭಮನ್ ಗಿಲ್ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಅಹಮಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಅಂತಿಮ ದಿನದಾಟದಲ್ಲಿ ಆಸ್ಟ್ರೇಲಿಯಾದ ಬ್ಯಾಟರ್‌ಗಳು ಉತ್ತಮ ಪ್ರದರ್ಶನ ನೀಡಿದ್ದರು. ಇದರಿಂದ ಪಂದ್ಯ ಡ್ರಾದತ್ತ ಮುಖ ಮಾಡಿತ್ತು. ಈ ವೇಳೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಚೆಂಡನ್ನು ಶುಭಮನ್ ಗಿಲ್ ಹಾಗೂ ಚೇತೇಶ್ವರ ಪೂಜಾರ ಅವರಿಗೆ ನೀಡಿದರು.
ಇಬ್ಬರು ತಲಾ ಒಂದು ಓವರ್ ಬೌಲಿಂಗ್ ಮಾಡಿದರು. ಪಂದ್ಯದ ಬಳಿಕ ಇದನ್ನು ಪ್ರತಿಪಾದಿಸಿದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, 'ನಾನೇನು ಮಾಡಲಿ ? ಕೆಲಸ ಬಿಡಬೇಕೇ ?' ಎಂದು ಕಾಲೆಳೆದಿದ್ದಾರೆ.
ಇದಕ್ಕೆ ನಾಗಪುರ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಮೂರನೇ ಕ್ರಮಾಂಕದಲ್ಲಿ ಮಾಡಿರುವುದನ್ನು ಉಲ್ಲೇಖ ಮಾಡಿರುವ ಪೂಜಾರ, 'ಬೇಡ. ನೀವು ನಾಗಪುರದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿರುವುದಕ್ಕೆ ಈ ಮೂಲಕ ಧನ್ಯವಾದ ತಿಳಿಸುತ್ತೇನೆ' ಎಂದು ಹೇಳಿದ್ದಾರೆ.
ನಾಗಪುರದ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಬ್ಯಾಟರ್‌ಗಳು ಪರದಾಡಿದ್ದರು. ಈ ಕುರಿತು ಆಸೀಸ್ ಮಾಧ್ಯಗಳಲ್ಲೂ ಟೀಕೆ ವ್ಯಕ್ತವಾಗಿತ್ತು. ನೈಟ್ ವಾಚ್‌ಮನ್ ಆಗಿ ಕ್ರೀಸಿಗಿಳಿಸಿದ್ದ ಅಶ್ವಿನ್ 62 ಎಸೆತಗಳಲ್ಲಿ 23 ರನ್ ಗಳಿಸಿದ್ದರು.
ಇದಕ್ಕೆ ಉತ್ತರಿಸಿರುವ ಅಶ್ವಿನ್, 'ನಿಮ್ಮ ಉದ್ದೇಶವನ್ನು ಮೆಚ್ಚುತ್ತೇನೆ. ಆದರೆ ಇದು ಪ್ರತ್ಯುತ್ತರವೇ' ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.