ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಚ್ ವಿರೂಪಕ್ಕೆ ಯತ್ನಿಸಿದರೇ ಸ್ಮಿತ್? ದೃಶ್ಯ ವೈರಲ್

Last Updated 11 ಜನವರಿ 2021, 14:08 IST
ಅಕ್ಷರ ಗಾತ್ರ

ಸಿಡ್ನಿ: ಹಿಂದೊಮ್ಮೆ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದು ಒಂದು ವರ್ಷದ ನಿಷೇಧ ಶಿಕ್ಷೆಯನ್ನು ಅನುಭವಿಸಿರುವ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಸ್ಟೀವನ್ ಸ್ಮಿತ್ ಈಗ ಪಿಚ್ ವಿರೂಪಗೊಳಿಸಲು ಯತ್ನಿಸಿ ಮತ್ತೆ ವಿವಾದಕ್ಕೊಳಗಾಗಿದ್ದಾರೆ.

ಭಾರತ ವಿರುದ್ಧ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ಅಂತಿಮ ದಿನದಾಟದಲ್ಲಿ ಘಟನೆ ನಡೆದಿದೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್ ಆಗಿದ್ದು, ಸ್ಮಿತ್ ಅವರಿಗೆ ಮತ್ತೆ 'ಬ್ರೈನ್ ಫೇಡ್' (ಮರೆವು) ಸಂಭವಿಸಿದೆಯೇ ಎಂದು ಅಭಿಮಾನಿಗಳು ಖಾರವಾಗಿ ಪ್ರಶ್ನಿಸಿದ್ದಾರೆ.

407 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ್ದ ಭಾರತಕ್ಕೆ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಉತ್ತಮ ಆರಂಭವೊದಗಿಸಿದರು. ಬಳಿಕ ಐದನೇ ದಿನದಾಟದಲ್ಲಿ ಚೇತೇಶ್ವರ ಪೂಜಾರ ಜೊತೆಗೂಡಿದ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಪ್ರತ್ಯಾಕ್ರಮಣ ಮಾಡಿದ್ದರು.

ಪೂಜಾರ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ್ದರೆ ಪಂತ್, ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಎದುರಾಳಿಗಳಿಗೆ ಬಿಸಿ ಮುಟ್ಟಿಸಿದ್ದರು. ಒಂದು ಹಂತದಲ್ಲಿ ಪಂತ್ ಕ್ರೀಸಿನಲ್ಲಿರುವ ಭಾರತ ಬೃಹತ್ ಮೊತ್ತವನ್ನು ಚೇಸಿಂಗ್ ಮಾಡಲಿದೆ ಎಂದೇ ಅಂದಾಜಿಸಲಾಗಿತ್ತು.

ಪಂದ್ಯದ ನಡುವೆ ಡ್ರಿಂಕ್ಸ್ ಬ್ರೇಕ್ ವೇಳೆಯಲ್ಲಿ ಕ್ರೀಸ್ ಮಧ್ಯೆ ಪ್ರವೇಶಿಸಿದ ಸ್ಮಿತ್, ಯಾರಿಗೂ ಗೊತ್ತಾಗದಂತೆ ತಮ್ಮ ಶೂ ನೆರವಿನಿಂದ ಪಿಚ್ ಉಜ್ಜುವ ಮೂಲಕ ವಿರೂಪಗೊಳಿಸಲು ಪ್ರಯತ್ನಿಸುತ್ತಾರೆ.

ಹೇಗಾದರೂ ಮಾಡಿ ಭಾರತೀಯರ ವಿಕೆಟ್ ಪಡೆದು ಪಂದ್ಯ ಗೆಲ್ಲಬೇಕೆಂಬ ದುರಾಲೋಚನೆಯೊಂದಿಗೆ ಸ್ಟೀವನ್ ಸ್ಮಿತ್ ಈ ಕೃತ್ಯ ಎಸಗಿರಬಹುದು ಎಂದು ಅಭಿಮಾನಿಗಳು ಆರೋಪಿಸಿದ್ದಾರೆ. ಒಟ್ಟಿನಲ್ಲಿ ಈ ಘಟನೆಯು ವಿವಾದಕ್ಕೆ ಕಾರಣವಾಗುತ್ತಿದೆ.

2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅಂದಿನ ಆಸ್ಟ್ರೇಲಿಯಾ ನಾಯಕ ಸ್ಟೀವನ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಕ್ಯಾಮರಾನ್ ಬ್ಯಾಂಕ್ರಾಫ್ಟ್ ಸ್ಯಾಂಡ್ ಪೇಪರ್ ಸಹಾಯದಿಂದ ಚೆಂಡನ್ನು ವಿರೂಪಗೊಳಿಸಲು (ಬಾಲ್ ಟ್ಯಾಂಪರಿಂಗ್) ಯತ್ನಿಸಿದ್ದರು. ಇದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿತ್ತಲ್ಲದೇ, ಕಠಿಣ ಕ್ರಮ ಕೈಗೊಂಡ ಕ್ರಿಕೆಟ್ ಆಸ್ಟ್ರೇಲಿಯಾ ಒಂದು ವರ್ಷದ ನಿಷೇಧವನ್ನು ಹೇರಿತ್ತು.

ಅಂದು ಬೇಷರತ್ ಆಗಿ ಕ್ಷಮೆಯಾಚಿಸಿರುವ ಸ್ಮಿತ್ ಮತ್ತದೇ ಹಳೆಯ ಚಾಳಿಯನ್ನು ಮುಂದುವರಿಸಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT