ಮಂಗಳವಾರ, ಆಗಸ್ಟ್ 16, 2022
21 °C

ಟಿ20 ಸರಣಿ; ಗಾಯಾಳು ಜಡೇಜಗೆ ವಿಶ್ರಾಂತಿ; ಶಾರ್ದೂಲ್‌ಗೆ ಸ್ಥಾನ

ಪಿಟಿಐ Updated:

ಅಕ್ಷರ ಗಾತ್ರ : | |

ಕ್ಯಾನ್‌ಬೆರಾ: ಆಸ್ಟ್ರೇಲಿಯಾ ವಿರುದ್ಧ ಶುಕ್ರವಾರ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಹೆಲ್ಮೆಟ್‌ಗೆ ಚೆಂಡು ಅಪ್ಪಳಿಸಿದ ಪರಿಣಾಮ ಗಾಯ ಮಾಡಿಕೊಂಡಿರುವ ಭಾರತದ ಎಡಗೈ ಆಲ್‌ರೌಂಡರ್ ಆಟಗಾರ ರವೀಂದ್ರ ಜಡೇಜ, ಸರಣಿಯ ಉಳಿದೆರಡು ಪಂದ್ಯಗಳಿಗೆ ಅಲಭ್ಯವಾಗಿದ್ದಾರೆ. 

ರವೀಂದ್ರ ಜಡೇಜ ಅವರ ಸ್ಥಾನಕ್ಕೆ ಬಲಗೈ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಅವರನ್ನು ಸೇರ್ಪಡೆಗೊಳಿಸಲಾಗಿದೆ. ಈ ಬಗ್ಗೆ ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ. 

ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ಮನುಕಾ ಓವಲ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ರವೀಂದ್ರ ಜಡೇಜ ಗಾಯದ ಅಪಾಯಕ್ಕೊಳಗಾಗಿದ್ದರು. ಭಾರತೀಯ ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಆಸೀಸ್ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಎಸೆದ ಚೆಂಡು ರವೀಂದ್ರ ಜಡೇಜ ಹೆಲ್ಮೆಟ್‌ಗೆ ಬಡಿಯಿತು. ಬಳಿಕ ಕಂಕಷನ್ ನಿಯಮದಲ್ಲಿ ಜಡೇಜ ಬದಲಿಗೆ ಯಜುವೇಂದ್ರ ಚಾಹಲ್ ಕಣಕ್ಕಿಳಿದಿದ್ದರು. 

ಇದನ್ನೂ ಓದಿ: 

ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದ ಜಡೇಜ 23 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 44 ರನ್ ಗಳಿಸಿ ಅಜೇಯರಾಗುಳಿದರು. ಈ ಮೂಲಕ ತಂಡವನ್ನು ಸ್ಪರ್ಧಾತ್ಮಕ ಮೊತ್ತದತ್ತ ಮುನ್ನಡೆಸಿದರು. ಬಳಿಕ ಬದಲಿ ಆಟಗಾರನಾಗಿ ಕಣಕ್ಕಿಳಿದಿದ್ದ ಯಜುವೇಂದ್ರ ಚಹಲ್ ಮೂರು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿ ಭಾರತದ 11 ರನ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. 

ಜಡೇಜ ಅವರ ಆರೋಗ್ಯ ಸ್ಥಿತಿ ಮೇಲೆ ನಿಗಾ ಇರಿಸಲಾಗಿದೆ. ಶನಿವಾರ ಪರಿಶೀಲನೆ ನಡೆಸಿದ ನಂತರ ಅಗತ್ಯ ಬಿದ್ದರೆ ಮತ್ತೊಮ್ಮೆ ಸ್ಕ್ಯಾನಿಂಗ್ ಮಾಡಿಸಲಾಗುವುದು. ಅವರ ಎಡ ಭಾಗದ ಹಣೆಗೆ ಚೆಂಡು ಬಡಿದಿತ್ತು. ಭಾರತದ ಇನ್ನಿಂಗ್ಸ್ ನಂತರ ಡ್ರೆಸಿಂಗ್ ಕೊಠಡಿಯಲ್ಲಿ ವೈದ್ಯಕೀಯ ತಂಡ ನಡೆಸಿದ ಪರಿಶೀಲನೆಯ ತರುವಾಯ ಅವರನ್ನು ತಪಾಸಣೆಗೆ ಒಳಪಡಿಸಲು ನಿರ್ಧರಿಸಲಾಗಿತ್ತು ಎಂದು ಬಿಸಿಸಿಐ ವಿವರಿಸಿದೆ. ಈ ಮುನ್ನ ರವೀಂದ್ರ ಜಡೇಜ ಸ್ನಾಯು ಸೆಳೆತಕ್ಕೂ ಒಳಗಾಗಿದ್ದರು. 

ಇದನ್ನೂ ಓದಿ: 

ಇನ್ನೊಂದೆಡೆ ಆಸ್ಟ್ರೇಲಿಯಾ ವಿರುದ್ಧ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಮೂರು ವಿಕೆಟ್ ಕಬಳಿಸಿದ್ದ ಶಾರ್ದೂಲ್ ಠಾಕೂರ್, ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈಗ ಅಂತಿಮ ಎರಡು ಟಿ20 ಪಂದ್ಯಗಳಲ್ಲಿ ಅವಕಾಶವನ್ನು ಎದುರು ನೋಡುತ್ತಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ದ್ವಿತೀಯ ಟಿ20 ಪಂದ್ಯವು ಡಿ. 6 ಭಾನುವಾರದಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು