ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ 9ನೇ ಗೆಲುವು; ಟಿ20ನಲ್ಲಿ ಟೀಮ್ ಇಂಡಿಯಾ ಶ್ರೇಷ್ಠ ಸಾಧನೆ!

Last Updated 6 ಡಿಸೆಂಬರ್ 2020, 13:39 IST
ಅಕ್ಷರ ಗಾತ್ರ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ (ಎಸ್‌ಸಿಜಿ) ನಡೆದ ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲಿ ಆರು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಉಳಿದಿರುವಂತೆಯೇ 2-0 ಅಂತರದಲ್ಲಿ ವಶಪಡಿಸಿದೆ.

ಇದರೊಂದಿಗೆ ಟ್ವೆಂಟಿ-20 ಅಂತರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ ಒಂಬತ್ತನೇ ಗೆಲುವು ದಾಖಲಿಸಿದೆ. ಹಾಗೆಯೇ ಪೂರ್ಣಗೊಂಡ ಕಳೆದ ಎಲ್ಲ 10 ಪಂದ್ಯಗಳಲ್ಲೂ ಜಯಭೇರಿ ಮೊಳಗಿಸಿದೆ. ಈ ಮಧ್ಯೆ ಒಂದು ಪಂದ್ಯವು ರದ್ದಾಗಿತ್ತು. ಟ್ವೆಂಟಿ-20 ಕ್ರಿಕೆಟ್ ಇತಿಹಾಸದಲ್ಲೇ ಟೀಮ್ ಇಂಡಿಯಾದ ಸರ್ವಶ್ರೇಷ್ಠ ಸಾಧನೆ ಇದಾಗಿದೆ.

ಟಿ20 ಕ್ರಿಕೆಟ್‌ನಲ್ಲಿ ಸತತವಾಗಿ ಅತಿ ಹೆಚ್ಚು ಗೆಲುವು ದಾಖಲಿಸಿದ ತಂಡಗಳ ಪಟ್ಟಿ ಇಂತಿದೆ:
ಅಫಘಾನಿಸ್ತಾನ: 12 ಗೆಲುವು (2018-19)
ಅಫಘಾನಿಸ್ತಾನ: 11 ಗೆಲುವು (2018-19)
ಪಾಕಿಸ್ತಾನ: 09 ಗೆಲುವು (2018-19)
ಭಾರತ: 09* ಗೆಲುವು (2018-19)

ಇನ್ನು ನಾಲ್ಕು ವರ್ಷಗಳ ಹಿಂದೆ ಇದೇ ಎಸ್‌ಸಿಜಿ ಮೈದಾನದಲ್ಲಿ ಭಾರತ 198 ರನ್‌ಗಳನ್ನು ಬೆನ್ನಟ್ಟಿತ್ತು. ಇದು ಚುಟುಕು ಮಾದರಿಯಲ್ಲಿ ಯಾವುದೇ ತಂಡದಿಂದ ಆಸ್ಟ್ರೇಲಿಯಾ ನೆಲದಲ್ಲಿನ ಗರಿಷ್ಠ ರನ್ ಚೇಸಿಂಗ್ ದಾಖಲೆಯಾಗಿದೆ. ಭಾನುವಾರ 195 ರನ್ ಗುರಿ ಬೆನ್ನಟ್ಟುವುದರೊಂದಿಗೆ ಪ್ರಸ್ತುತ ಪಟ್ಟಿಯಲ್ಲಿ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಆಸೀಸ್ ನೆಲದಲ್ಲಿ ಗರಿಷ್ಠ ರನ್ ಚೇಸಿಂಗ್ (ಟಿ20):
ಭಾರತ: 198, ಆಸ್ಟ್ರೇಲಿಯಾ ವಿರುದ್ಧ, ಸಿಡ್ನಿ (2016)
ಭಾರತ: 195, ಆಸ್ಟ್ರೇಲಿಯಾ ವಿರುದ್ಧ, ಸಿಡ್ನಿ (2020)
ಶ್ರೀಲಂಕಾ: 174, ಆಸ್ಟ್ರೇಲಿಯಾ ವಿರುದ್ಧ, ಗೀಲಾಂಗ್ (2017)
ಶ್ರೀಲಂಕಾ: 169, ಆಸ್ಟ್ರೇಲಿಯಾ ವಿರುದ್ಧ, ಮೆಲ್ಬೋರ್ನ್ (2017)

ಇದನ್ನೂ ಓದಿ:

ವಿದೇಶದಲ್ಲಿ ಸತತ 10ನೇ ಗೆಲುವು (ಟಿ20):
ಅದೇ ರೀತಿ ವಿದೇಶ ನೆಲದಲ್ಲಿ ಸತತ 10ನೇ ಗೆಲುವು ದಾಖಲಿಸಿದ ಹೆಗ್ಗಳಿಕೆಗೂ ವಿರಾಟ್ ಕೊಹ್ಲಿ ಬಳಗ ಪಾತ್ರವಾಗಿದೆ. ಪ್ರಸ್ತುತ ಪಟ್ಟಿಯಲ್ಲಿ ವೆಸ್ಟ್‌ಇಂಡೀಸ್‌ನಲ್ಲಿ ಮೂರು, ನ್ಯೂಜಿಲೆಂಡ್‌ನಲ್ಲಿ ಐದು ಮತ್ತು ಆಸ್ಟ್ರೇಲಿಯಾದಲ್ಲಿ ಎರಡು ಗೆಲುವುಗಳು ಸೇರಿವೆ.

ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ ತಂಡವು, ನಾಯಕ ಮ್ಯಾಥ್ಯೂ ವೇಡ್ (58) ಹಾಗೂ ಸ್ಟೀವನ್ ಸ್ಮಿತ್ (46) ಅಮೋಘ ಆಟದ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 194 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಬಳಿಕ ಬೃಹತ್ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಶಿಖರ್ ಧವನ್ (52), ನಾಯಕ ವಿರಾಟ್ ಕೊಹ್ಲಿ (40) ಹಾಗೂ ಹಾರ್ದಿಕ್ ಪಾಂಡ್ಯ (42*) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಇನ್ನೆರಡು ಎಸೆತಗಳನ್ನು ಬಾಕಿ ಉಳಿದಿರುವಂತೆಯೇ ಗೆಲುವು ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT