ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG: ಸ್ಟೋಕ್ಸ್ ಸ್ಲೆಡ್ಜಿಂಗ್; ಬ್ಯಾಟಿಂಗ್ ಮಾಡಲು ನಿರಾಕರಿಸಿದ ಪಂತ್

Last Updated 13 ಫೆಬ್ರುವರಿ 2021, 15:48 IST
ಅಕ್ಷರ ಗಾತ್ರ

ಚೆನ್ನೈ: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕದ (161) ಬೆಂಬಲದೊಂದಿಗೆ ಟೀಮ್ ಇಂಡಿಯಾ ಮೊದಲ ದಿನದಾಟದಲ್ಲಿ ಆರು ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದೆ.

ಈ ನಡುವೆ ದಿನದಾಟ ಮುಗಿಯಲು ಕೆಲವೇ ಕ್ಷಣಗಳಿರುವಾಗ ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಹಾಗೂ ಭಾರತೀಯ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ನಡುವೆ, ವಾಗ್ವಾದ ನಡೆಯಿತು.

ಮೊದಲ ದಿನದಾಟದಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್ ಎಸೆದ ಇನ್ನಿಂಗ್ಸ್‌ನ 87ನೇ ಓವರ್‌ನಲ್ಲಿ ಬಿಸಿ ಬಿಸಿ ವಾತಾವರಣ ನಿರ್ಮಾಣವಾಯಿತು. ಎಂದಿನ ಶೈಲಿಯಲ್ಲಿ ಆಕ್ರಮಣಕಾರಿಯಾಗಿ ಆಡುತ್ತಿದ್ದ ಪಂತ್ ಅವರನ್ನು ಕೆಣಕಲು ಸ್ಟೋಕ್ಸ್ ಪ್ರಯತ್ನಿಸಿರುವುದು ಕಂಡುಬಂದಿದೆ.

ಸ್ಲೆಡ್ಜಿಂಗ್ ವೇಳೆ ಸ್ಟೋಕ್ಸ್ ನಿಖರವಾಗಿ ಯಾವ ಪದ ಬಳಕೆ ಮಾಡಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಸ್ಟೋಕ್ಸ್ ಹೇಳಿಕೆಯಿಂದ ಅಸಮಾಧಾನಗೊಂಡ ಪಂತ್ ಬ್ಯಾಟಿಂಗ್ ಮುಂದುವರಿಸಲು ನಿರಾಕರಿಸಿದರು.

ಇದರಿಂದಾಗಿ ಅಂಪೈರ್ ಮಧ್ಯೆ ಪ್ರವೇಶಿಸಬೇಕಾಯಿತು. ಓವರ್ ಮುಗಿದ ಬಳಿಕವೂ ಪಂತ್ ಬಳಿ ಬಂದ ಸ್ಟೋಕ್ಸ್ ವಾಗ್ವಾದ ನಡೆಸಿದರು. ಬಳಿಕ ಆಟಗಾರರನ್ನು ಹತೋಟಿಗೆ ತೆಗೆದುಕೊಂಡ ಅಂಪೈರ್‌‌ಗಳು ಪರಿಸ್ಥಿತಿಯನ್ನು ಶಾಂತಗೊಳಿಸಿದರು.

ಕೊನೆಗೂ ಪಂತ್ ಏಕಾಗ್ರತೆಗೆ ಭಂಗವನ್ನುಂಟು ಮಾಡಿ ವಿಕೆಟ್ ಪಡೆಯುವ ಸ್ಟೋಕ್ಸ್ ಪ್ರಯತ್ನ ಯಶಸ್ವಿ ಕಾಣಲಿಲ್ಲ. ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ಪಂತ್ 56 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 33 ರನ್ ಗಳಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT