ಭಾನುವಾರ, ಏಪ್ರಿಲ್ 11, 2021
31 °C

IND vs ENG: ಸ್ಟೋಕ್ಸ್ ಫಿಫ್ಟಿ ಹೊರತಾಗಿಯೂ ಆಂಗ್ಲರ ಪರದಾಟ; ವಿರಾಮಕ್ಕೆ 144/5

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್: ಭಾರತ ವಿರುದ್ಧ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಸಮಯೋಚಿತ ಅರ್ಧಶತಕದ ಹೊರತಾಗಿಯೂ ಇಂಗ್ಲೆಂಡ್ ತಂಡವು ಬ್ಯಾಟಿಂಗ್ ಕುಸಿತವನ್ನು ಅನುಭವಿಸಿದೆ. 

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ದಿನದಾಟದ ಟೀ ವಿರಾಮದ ಹೊತ್ತಿಗೆ 56 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿದೆ. 

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್, ಅದರ ಸಂಪೂರ್ಣ ಪ್ರಯೋಜನ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. 15 ರನ್ ಗಳಿಸುವಷ್ಟರಲ್ಲಿ ಆರಂಭಿಕರಾದ  ಡಾಮಿನಿಕ್ ಸಿಬ್ಲಿ (2) ಹಾಗೂ ಜ್ಯಾಕ್ ಕ್ರಾಲಿ (2) ಅವರನ್ನು ಕಳೆದ ಪಂದ್ಯದ ಹೀರೊ ಅಕ್ಷರ್ ಪಟೇಲ್ ಪೆವಿಲಿಯನ್‌ಗೆ ಅಟ್ಟಿದರು. 

ಇದನ್ನೂ ಓದಿ: 

ಅಪಾಯಕಾರಿ ಜೋ ರೂಟ್ (5) ಅವರನ್ನು ಮೊಹಮ್ಮದ್ ಸಿರಾಜ್ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದರು. ಈ ನಡುವೆ ಬೆನ್ ಸ್ಟೋಕ್ಸ್ ಹಾಗೂ ಜಾನಿ ಬೈರ್‌ಸ್ಟೋ ಮಹತ್ವದ ಜೊತೆಯಾಟದಲ್ಲಿ ಭಾಗಿಯಾದರು. 

ಊಟದ ವಿರಾಮಕ್ಕೆ ಇಂಗ್ಲೆಂಡ್ ಮೂರು ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿತ್ತು. ಆದರೆ ಭೋಜನ ವಿರಾಮದ ಬೆನ್ನಲ್ಲೇ ಜಾನಿ ಬೈರ್‌ಸ್ಟೋ ಅವರನ್ನು (28) ಸಿರಾಜ್ ಹೊರದಬ್ಬಿದರು. ಹಾಗಿದ್ದರೂ ಸ್ಟೋಕ್ಸ್ ಜೊತೆಗೆ ನಾಲ್ಕನೇ ವಿಕೆಟ್‌ಗೆ 48 ರನ್‌ಗಳ ಜೊತೆಯಾಟ ನೀಡಿದರು. 

ಇನ್ನೊಂದೆಡೆ ಧನಾತ್ಮಕ ಮನೋಭಾವದಿಂದ ಬ್ಯಾಟಿಂಗ್ ಪ್ರದರ್ಶಿಸಿದ ಸ್ಟೋಕ್ಸ್, ಸಮಯೋಚಿತ ಅರ್ಧಶತಕ ಬಾರಿಸಿದರು. ಆದರೆ ಅರ್ಧಶತಕದ ಬೆನ್ನಲ್ಲೇ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. 121 ಎಸೆತಗಳನ್ನು ಎದುರಿಸಿದ ಸ್ಟೋಕ್ಸ್ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 55 ರನ್ ಗಳಿಸಿದರು. ಈ ವಿಕೆಟ್ ವಾಷಿಂಗ್ಟನ್ ಸುಂದರ್ ಪಾಲಾಯಿತು. 

ಇದನ್ನೂ ಓದಿ: 

ಈಗ ಕ್ರೀಸಿನಲ್ಲಿರುವ ಒಲ್ಲಿ ಪಾಪ್ (21*) ಹಾಗೂ ಡ್ಯಾನಿಯಲ್ ಲಾರೆನ್ಸ್ (15*) ಹೋರಾಟ ಮುಂದುವರಿಸಿದ್ದಾರೆ. ಭಾರತದ ಪರ ಅಕ್ಷರ್ ಪಟೇಲ್ ಹಾಗೂ ಮೊಹಮ್ಮದ್ ಸಿರಾಜ್ ತಲಾ ಎರಡು ಮತ್ತು ಸುಂದರ್ ಒಂದು ವಿಕೆಟ್ ಪಡೆದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು