ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

IND vs ENG 2nd Test | ಯಶಸ್ವಿ ಜೈಸ್ವಾಲ್ ಅಜೇಯ 179: ಮೊದಲ ದಿನ ಭಾರತ 336 ರನ್

Published 2 ಫೆಬ್ರುವರಿ 2024, 14:08 IST
Last Updated 2 ಫೆಬ್ರುವರಿ 2024, 14:08 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ಆರಂಭಿಕ ಬ್ಯಾಟರ್‌ ಯಶಸ್ವಿ ಜೈಸ್ವಾಲ್ ಅವರ ಅಮೋಘ ಶತಕದ (179*) ನೆರವಿನಿಂದ ಇಲ್ಲಿನ ಡಾ. ವೈ.ಎಸ್‌. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್‌ಗಳನ್ನು ಕಳೆದುಕೊಂಡು 336 ರನ್‌ ಪೇರಿಸಿದೆ.

ಬ್ಯಾಟಿಂಗ್‌ ಸ್ನೇಹಿ ‍ಪಿಚ್‌ನಲ್ಲಿ ಸರಾಗವಾಗಿ ಬ್ಯಾಟ್‌ ಬೀಸಿದ ಜೈಸ್ವಾಲ್‌, ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಎರಡನೇ ಶತಕ ದಾಖಲಿಸಿದರು. ಅವರ ಈ ಅಜೇಯ ಇನಿಂಗ್ಸ್‌ನಲ್ಲಿ 17 ಬೌಂಡರಿ ಹಾಗೂ 5 ಸಿಕ್ಸರ್‌ ಸೇರಿತ್ತು. ದಿನ ಆಟದ ಅಂತ್ಯದ ವೇಳೆ 5 ರನ್‌ ಗಳಿಸಿರುವ ಆರ್. ಆಶ್ವಿನ್ ಅವರ ಜೊತೆಗೆ ಬ್ಯಾಟಿಂಗ್‌ ಮಾಡುತ್ತಿದ್ದಾರೆ.

ಸರಣಿಯಲ್ಲಿ 0–1 ಅಂತರದಿಂದ ಹಿನ್ನಡೆಯಲ್ಲಿರುವ ಭಾರತಕ್ಕೆ, ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಮೇಲೆ ಒತ್ತಡ ಹೇರಬೇಕಾದರೆ 500ಕ್ಕೂ ಅಧಿಕ ರನ್‌ ಪೇರಿಸಬೇಕು. ಮೂರನೇ ದಿನದಿಂದ ಬೌನ್ಸ್ ಹೆಚ್ಚಾಗುವುದರಿಂದ ಹೆಚ್ಚಿನ ರನ್‌ ಕಲೆ ಹಾಕುವುದು ಅವಶ್ಯಕ.

ಇತರೆ ಬ್ಯಾಟರ್‌ಗಳ ವೈಫಲ್ಯ

ಜೈಸ್ವಾಲ್ ಹೊರತುಪಡಿಸಿ ಇತರ ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು. ನಾಯಕ ರೋಹಿತ್ ಶರ್ಮಾ ಆಟ 14 ರನ್‌ಗೆ ಅಂತ್ಯವಾದರೆ, ಶುಭಮನ್‌ ಗಿಲ್ 34ರನ್‌ ಗಳಿಸುವಷ್ಟರಲ್ಲಿ ಸುಸ್ತಾದರು. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್‌ ಅಯ್ಯರ್‌ (27), ರಜತ್ ಪಾಟೀದಾರ್ (32), ಅಕ್ಷರ್‌ ಪಟೇಲ್ (27) ಹಾಗೂ ಶ್ರೀಕರ್ ಭರತ್ (17) ಅವರಿಂದಲೂ ಉತ್ತಮ ಪ್ರದರ್ಶನ ಬರಲಿಲ್ಲ.

2023ರ ಜುಲೈ ಬಳಿಕ ಇದೇ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ ಆಡಿದ ಇಂಗ್ಲೆಂಡಿನ ಜೇಮ್ಸ್ ಆಂಡರ್ಸನ್‌ ಅವರು 17 ಓವರ್‌ಗಳಲ್ಲಿ 30 ರನ್‌ ನೀಡಿ ಗಿಲ್ ಅವರ ವಿಕೆಟ್ ಕಿತ್ತರು. ರೆಹಾನ್ ಅಹ್ಮದ್‌ ಹಾಗೂ ಶೊಯಬ್ ಬಶೀರ್‌ ತಲಾ ಎರಡು ವಿಕೆಟ್ ಕಿತ್ತರೆ, ಒಂದು ವಿಕೆಟ್ ಟಾಮ್ ಹಾರ್ಟ್ಲಿ ಪಾಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT