ಭಾನುವಾರ, ಸೆಪ್ಟೆಂಬರ್ 26, 2021
21 °C

ಅಂ.ರಾ. ಕ್ರಿಕೆಟ್‌ನಲ್ಲಿ ವೇಗವಾಗಿ 23 ಸಾವಿರ ರನ್; ಸಚಿನ್ ದಾಖಲೆ ಮುರಿದ ಕೊಹ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಸದ್ಯ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆನಿಸಿರುವ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 23 ಸಾವಿರ ರನ್‌ ಗಳಿಸಿದ ಆಟಗಾರ ಎಂಬ ಶ್ರೇಯಕ್ಕೆ ಭಾಜನರಾಗಿದ್ದಾರೆ.

ಕೊಹ್ಲಿ, ಕ್ರಿಕೆಟ್‌ನ ಮೂರೂ (ಟೆಸ್ಟ್‌, ಏಕದಿನ ಮತ್ತು ಟಿ20) ಮಾದರಿಗಳಿಂದ ಇದುವರೆಗೆ ಒಟ್ಟು 490 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈವರೆಗೆ ಕೇವಲ ಏಳು ಮಂದಿಯಷ್ಟೇ 23 ಸಾವಿರಕ್ಕಿಂತ ಹೆಚ್ಚು ರನ್‌ ಗಳಿಸಿದ್ದಾರೆ. ಆದರೆ, ಯಾವೊಬ್ಬ ಬ್ಯಾಟ್ಸ್‌ಮನ್‌ ಕೂಡ 520ಕ್ಕಿಂತ ಕಡಿಮೆ ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿಲ್ಲ ಎಂಬುದು ವಿಶೇಷ.

ವೇಗವಾಗಿ ಈ ದಾಖಲೆ ಮಾಡಿದ ಶ್ರೇಯ ಇದುವರೆಗೆ ಸಚಿನ್‌ ತೆಂಡೂಲ್ಕರ್‌ ಅವರ ಹೆಸರಿನಲ್ಲಿತ್ತು. ಅವರು 522 ಇನಿಂಗ್ಸ್‌ಗಳಲ್ಲಿ ಇಷ್ಟು ರನ್‌ ಗಳಿಸಿದ್ದರು.

ಸಚಿನ್‌, ಕೊಹ್ಲಿ ಹೊರತುಪಡಿಸಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್‌, ದಕ್ಷಿಣ ಆಫ್ರಿಕಾದ ಜಾಕ್‌ ಕಾಲಿಸ್‌, ಶ್ರೀಲಂಕಾದ ಕುಮಾರ ಸಂಗಕ್ಕಾರ, ಭಾರತದ ರಾಹುಲ್‌ ದ್ರಾವಿಡ್‌ ಮತ್ತು ಶ್ರೀಲಂಕಾದ ಮತ್ತೊಬ್ಬ ಬ್ಯಾಟ್ಸ್‌ಮನ್‌ ಮಹೇಲ ಜಯವರ್ಧನೆ 23 ಸಾವಿರಕ್ಕಿಂತ ಹೆಚ್ಚು ರನ್‌ ಗಳಿಸಿದ್ದಾರೆ.

ವೇಗವಾಗಿ 23 ಸಾವಿರ ರನ್‌ ಗಳಿಸಿದವರು

ಸಂಖ್ಯೆಆಟಗಾರದೇಶಇನಿಂಗ್ಸ್‌
01.ವಿರಾಟ್‌ ಕೊಹ್ಲಿಭಾರತ490
02.ಸಚಿನ್‌ ತೆಂಡೂಲ್ಕರ್‌ಭಾರತ522
03.ರಿಕಿ ಪಾಂಟಿಂಗ್‌ಆಸ್ಟ್ರೇಲಿಯಾ544
04.ಜಾಕ್‌ ಕಾಲಿಸ್‌ದಕ್ಷಿಣ ಆಫ್ರಿಕಾ551
05.ಕುಮಾರ ಸಂಗಕ್ಕಾರಶ್ರೀಲಂಕಾ568
06.ರಾಹುಲ್‌ ದ್ರಾವಿಡ್ಭಾರತ576
07.ಮಹೇಲ ಜಯವರ್ಧನೆಶ್ರೀಲಂಕಾ645

ಭಾರತ ಬ್ಯಾಟಿಂಗ್‌ಗೆ ಕೊಹ್ಲಿ ಬಲ
ಭಾರತ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಬ್ಯಾಟಿಂಗ್‌ ಆರಂಭಿಸಿರುವ ಭಾರತಕ್ಕೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಕೈಕೊಟ್ಟಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್‌ ಶರ್ಮಾ (11) ಮತ್ತು ಕೆ.ಎಲ್‌. ರಾಹುಲ್‌ (17) ತಂಡದ ಮೊತ್ತ 28 ರನ್‌ ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಂಡಿದ್ದಾರೆ.

ಬಳಿಕ ಬಂದ ಚೇತೇಶ್ವರ ಪೂಜಾರ (4) ಮತ್ತು ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ರವೀಂದ್ರ ಜಡೇಜಾ (10) ನಿರಾಸೆ ಮೂಡಿಸಿದರು. ಹೀಗಾಗಿ ತಂಡದ ಮೊತ್ತ 69 ರನ್‌ ಆಗುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳು ಪತನವಾಗಿದ್ದವು.

ಈ ವೇಳೆ ಜೊತೆಯಾಗಿರುವ ನಾಯಕ ಕೊಹ್ಲಿ (50) ಮತ್ತು ಉಪನಾಯಕ ಅಜಿಂಕ್ಯ ರಹಾನೆ (5) ತಂಡಕ್ಕೆ ಆಸರೆಯಾಗಿದ್ದಾರೆ. ಇವರಿಬ್ಬರು ಐದನೇ ವಿಕೆಟ್‌ ಜೊತೆಯಾಟದಲ್ಲಿ 45 ಸೇರಿಸಿದ್ದಾರೆ.

ತಂಡದ ಮೊತ್ತ ನಾಲ್ಕು ವಿಕೆಟ್‌ಗೆ 105 ರನ್‌ ಆಗಿದ್ದು ರಹಾನೆ, ಕೊಹ್ಲಿ ಕ್ರೀಸ್‌ನಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು