ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SA 1st T20I: ಸತತ ಗೆಲುವಿನ ಓಟಕ್ಕೆ ಬ್ರೇಕ್; ದಾಖಲೆ ವಂಚಿತ ಭಾರತ

ಅಕ್ಷರ ಗಾತ್ರ

ನವದೆಹಲಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಟ್ವೆಂಟಿ-20 ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಸೋಲು ಅನುಭವಿಸಿರುವ ಟೀಮ್ ಇಂಡಿಯಾ ಸತತ 13 ಪಂದ್ಯಗಳಲ್ಲಿ ಗೆಲುವು ದಾಖಲಿಸುವ ಅವಕಾಶದಿಂದ ವಂಚಿತವಾಗಿದೆ.

ಇದರೊಂದಿಗೆ ಸಾರ್ವಕಾಲಿಕ ದಾಖಲೆ ನಿರ್ಮಿಸುವಲ್ಲಿ ವಿಫಲವಾಗಿದೆ.

ಈ ಪಂದ್ಯಕ್ಕೂ ಮುನ್ನ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಸತತ 12 ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಅಲ್ಲದೆ ವಿಶ್ವದಾಖಲೆ ನಿರ್ಮಿಸಲು ಇನ್ನೊಂದು ಪಂದ್ಯದ ಗೆಲುವಿನ ಅಗತ್ಯವಿತ್ತು.

ಆದರೆ ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದರೂ ಕಳಪೆ ಬೌಲಿಂಗ್‌ನಿಂದಾಗಿ ಭಾರತಕ್ಕೆ ಗೆಲುವು ಕೈತಪ್ಪಿತ್ತು.

ಮೊದಲು ಬ್ಯಾಟಿಂಗ್ ನಡೆಸಿದ ರಿಷಭ್ ಪಂತ್ ಬಳಗವು ನಾಲ್ಕು ವಿಕೆಟ್ ನಷ್ಟಕ್ಕೆ 211 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಇಶಾನ್ ಕಿಶನ್ (76) ಅರ್ಧಶತಕ ಗಳಿಸಿದ್ದರೆ ಶ್ರೇಯಸ್ ಅಯ್ಯರ್ (36), ಹಾರ್ದಿಕ್ ಪಾಂಡ್ಯ (31*), ನಾಯಕ ಪಂತ್ (29) ಹಾಗೂ ಋತುರಾಜ್ ಗಾಯಕವಾಡ್ (23) ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು.

ಬಳಿಕ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, ರಸಿ ವ್ಯಾನ್ ಡರ್ ಡಸೆ (75*) ಹಾಗೂ ಡೇವಿಡ್ ಮಿಲ್ಲರ್ (64*), ಶತಕದ ಜೊತೆಯಾಟದ ಬೆಂಬಲದೊಂದಿಗೆ ಇನ್ನೂ ಐದು ಎಸೆತಗಳು ಬಾಕಿ ಉಳಿದಿರುವಂತೆಯೇ 19.1 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗೆಲುವು ದಾಖಲಿಸಿತ್ತು.

ಈ ಮೂಲಕ ಐದು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿರುವುದು ಹಾಗೂ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಭಾರತದ ನಾಯಕತ್ವ ವಹಿಸಬೇಕಿದ್ದ ಕೆ.ಎಲ್. ರಾಹುಲ್ ಗಾಯದಿಂದಾಗಿ ಟೂರ್ನಿಯಿಂದಲೇ ಹೊರಬಿದ್ದಿರುವುದು ಭಾರತ ತಂಡದ ಹಿನ್ನಡೆಗೆ ಕಾರಣವಾಯಿತು.

ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ ಗೆಲುವಿನ ದಾಖಲೆ ಬರೆದ ತಂಡಗಳು:
ಅಫ್ಗಾನಿಸ್ತಾನ: ಸತತ 12 ಗೆಲುವು (2018 ಫೆಬ್ರುವರಿಯಿಂದ 2019 ಸೆಪ್ಟೆಂಬರ್‌ವರೆಗೆ)
ರೊಮೇನಿಯಾ: ಸತತ 12 ಗೆಲುವು (2020 ಅಕ್ಟೋಬರ್‌ನಿಂದ 2021 ಸೆಪ್ಟೆಂಬರ್‌ವರೆಗೆ)
ಭಾರತ: ಸತತ 12 ಗೆಲುವು (2021 ನವೆಂಬರ್‌ನಿಂದ 2022 ಜೂನ್‌ವರೆಗೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT