ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SA | ಸೆಂಚುರಿಯನ್ ಟೆಸ್ಟ್: ಭಾರತದ ಗೆಲುವಿಗಿನ್ನು ಆರು ಮೆಟ್ಟಿಲು!

Last Updated 29 ಡಿಸೆಂಬರ್ 2021, 16:16 IST
ಅಕ್ಷರ ಗಾತ್ರ

ಸೆಂಚುರಿಯನ್: ಪ್ರವಾಸಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಇಲ್ಲಿನ ಸೂಪರ್ ಸ್ಪೋರ್ಟ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯವು ರೋಚಕ ಹಂತಕ್ಕೆ ತಲುಪಿದೆ.

ಭಾರತ ಒಡ್ಡಿದ 305 ರನ್‌ಗಳ ಗೆಲುವಿನ ಗುರಿ ಹಿಂಬಾಲಿಸುತ್ತಿರುವ ಆತಿಥೇಯರು, ನಾಲ್ಕನೇ ದಿನದಂತ್ಯಕ್ಕೆ 40.5 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿದ್ದು, ಸಂಕಷ್ಟದಲ್ಲಿದೆ.

ಅಂತಿಮ ದಿನದಾಟದಲ್ಲಿ ಆರು ವಿಕೆಟ್ ಬಾಕಿ ಉಳಿದಿರುವಂತೆ ಗೆಲುವಿಗೆ ಇನ್ನೂ 211 ರನ್‌ಗಳ ಅಗತ್ಯವಿದೆ. ಇನ್ನೊಂದೆಡೆ ಭಾರತದ ಗೆಲುವಿಗೆ ಆರು ವಿಕೆಟ್‌ಗಳ ಅಗತ್ಯವಿದ್ದು, ಪಂದ್ಯದಲ್ಲಿ ಹಿಡಿತ ಸಾಧಿಸಿದೆ.

ದಕ್ಷಿಣ ಆಫ್ರಿಕಾ ಪರ ಅಜೇಯ ಅರ್ಧಶತಕ ಗಳಿಸಿರುವ ಡೀನ್ ಎಲ್ಗರ್ (52*) ದಿಟ್ಟ ಹೋರಾಟ ಮುಂದುವರಿಸಿದ್ದಾರೆ. ಭಾರತದ ಪರ ಜಸ್‌ಪ್ರೀತ್ ಬೂಮ್ರಾ ಎರಡು ಮತ್ತು ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟನ್ನು ಹಂಚಿಕೊಂಡರು.

130 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಮುಂದುವರಿಸಿದ ಭಾರತ ತಂಡವು50.3 ಓವರ್‌ಗಳಲ್ಲಿ ಕೇವಲ 174 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಮೂಲಕ 305 ರನ್‌ಗಳ ಗೆಲುವಿನ ಗುರಿ ಒಡ್ಡಿತ್ತು.

16/1 ಎಂಬ ಸ್ಕೋರ್‌ನಿಂದ ನಾಲ್ಕನೇ ದಿನದಾಟ ಮುಂದುವರಿಸಿದ ಭಾರತವನ್ನು ಕಗಿಸೊ ರಬಾಡ, ಮಾರ್ಕೊ ಜಾನ್ಸನ್ ಹಾಗೂ ಲುಂಗಿ ಗಿಡಿ ಮಾರಕವಾಗಿ ಕಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿರುವ ಕೆ.ಎಲ್. ರಾಹುಲ್ 23 ರನ್ ಗಳಿಸಿ ಔಟ್ ಆದರು. ಚೇತೇಶ್ವರ ಪೂಜಾರ (16) ಹಾಗೂ ನಾಯಕ ವಿರಾಟ್ ಕೊಹ್ಲಿ (18) ಮಗದೊಮ್ಮೆ ವೈಫಲ್ಯ ಅನುಭವಿಸಿದರು.

ಕೆಳ ಕ್ರಮಾಂಕದಲ್ಲಿ ರಿಷಭ್ ಪಂತ್ 34 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಅಜಿಂಕ್ಯ ರಹಾನೆ (20) ಪ್ರಭಾವಿ ಎನಿಸಲಿಲ್ಲ. ದಕ್ಷಿಣ ಆಫ್ರಿಕಾದ ಪರ ರಬಾಡ ಹಾಗೂ ಜಾನ್ಸನ್ ತಲಾ ನಾಲ್ಕು ಮತ್ತು ಗಿಡಿ ಎರಡು ವಿಕೆಟ್ ಕಿತ್ತು ಮಿಂಚಿದರು.

ಈ ಮೊದಲು ಭಾರತದ 327 ರನ್‌ಗಳಿಗೆ ಉತ್ತರವಾಗಿ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ 197 ರನ್‌ಗಳಿಗೆ ಆಲೌಟ್ ಆಗಿತ್ತು. ಭಾರತದ ಪರ ಮೊಹಮ್ಮದ್ ಶಮಿ ಐದು ವಿಕೆಟ್ ಕಿತ್ತು ಮಿಂಚಿದರು.

ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಪರ ರಾಹುಲ್ ಆಕರ್ಷಕ ಶತಕ (123) ಸಾಧನೆ ಮಾಡಿದ್ದರು. ಮಳೆಯಿಂದಾಗಿ ದ್ವಿತೀಯ ದಿನದ ಆಟ ರದ್ದುಗೊಂಡಿತ್ತು. ಮೂರನೇ ದಿನದಾಟದಲ್ಲಿ ಒಟ್ಟು 18 ವಿಕೆಟ್‌ಗಳು ಪತನಗೊಂಡಿದ್ದರೆ ನಾಲ್ಕನೇ ದಿನದಾಟದಲ್ಲಿ 13 ವಿಕೆಟ್‌ಗಳು ಪತನವಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT