ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SA 3ನೇ ಟೆಸ್ಟ್‌ | ಬೂಮ್ರಾ ಬಿರುಗಾಳಿ; ಭಾರತಕ್ಕೆ ಅಲ್ಪಮುನ್ನಡೆ

Last Updated 13 ಜನವರಿ 2022, 3:19 IST
ಅಕ್ಷರ ಗಾತ್ರ

ಕೇಪ್‌ಟೌನ್: ಯಾರ್ಕರ್ ಪರಿಣತ ಜಸ್‌ಪ್ರೀತ್ ಬೂಮ್ರಾ ನ್ಯೂಲ್ಯಾಂಡ್ಸ್‌ನಲ್ಲಿ ಐದು ವಿಕೆಟ್‌ಗಳ ಗೊಂಚಲು ಕಿತ್ತು ತಮ್ಮ ಬುಟ್ಟಿಗೆ ಹಾಕಿಕೊಂಡರು. ಅದರೊಂದಿಗೆ ಭಾರತ ತಂಡದಲ್ಲಿ ಹೋರಾಟದ ಕಿಚ್ಚು ಹಚ್ಚಿದರು.‌

ದಕ್ಷಿಣ ಆಫ್ರಿಕಾದ ಎದುರಿನ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ ತಂಡವು 13 ರನ್‌ಗಳ ಅಲ್ಪಮುನ್ನಡೆ ಗಳಿಸಿತು. ಮಂಗಳವಾರ ಆರಂಭವಾದ ಪಂದ್ಯದಲ್ಲಿ ಬ್ಯಾಟರ್‌ಗಳ ವೈಫಲ್ಯದಿಂದಾಗಿ ತಂಡವು 223 ರನ್‌ಗಳಿಗೆ ಆಲೌಟ್ ಆಗಿತ್ತು. ಆದರೆ, ಬೂಮ್ರಾ (42ಕ್ಕೆ5) ಬಿರುಗಾಳಿಯ ಮುಂದೆ ಆತಿಥೇಯ ತಂಡವು 76.3 ಓವರ್‌ಗಳಲ್ಲಿ 210 ರನ್‌ ಗಳಿಸುವಲ್ಲಿ ಮಾತ್ರ ಯಶಸ್ವಿಯಾಯಿತು.

ಕೀಗನ್ ಪೀಟರ್ಸನ್ (72; 166ಎ) ಅವರ ಏಕಾಂಗಿ ಹೋರಾಟದ ಆಟಕ್ಕೆ ತಕ್ಕ ಫಲ ಸಿಗಲಿಲ್ಲ. ಎರಡನೇ ಇನಿಂಗ್ಸ್ ಆರಂಭಿಸಿರುವ ಪ್ರವಾಸಿ ತಂಡವು ಎರಡನೇ ದಿನದಾಟದ ಮುಕ್ತಾಯಕ್ಕೆ 17 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 57 ರನ್ ಗಳಿಸಿದೆ. ಚೇತೇಶ್ವರ್ ಪೂಜಾರ (ಬ್ಯಾಟಿಂಗ್ 9) ಮತ್ತು ವಿರಾಟ್ ಕೊಹ್ಲಿ (ಬ್ಯಾಟಿಂಗ್ 14) ಕ್ರೀಸ್‌ನಲ್ಲಿದ್ದಾರೆ.

ಮೊದಲ ಇನಿಂಗ್ಸ್‌ನಂತೆಯೇ ಆರಂಭಿಕ ಜೋಡಿ ಕೆ.ಎಲ್. ರಾಹುಲ್ ಮತ್ತು ಮಯಂಕ್ ಅಗರವಾಲ್ ಎರಡನೇಯದ್ದರಲ್ಲೂ ವಿಫಲರಾದರು. ಮಾರ್ಕೊ ಜ್ಯಾನ್ಸನ್ ಮತ್ತು ಕಗಿಸೊ ರಬಾಡ ತಲಾ ಒಂದು ವಿಕೆಟ್ ಗಳಿಸಿದರು.

ಬೂಮ್ರಾ ಬಿರುಗಾಳಿ; ಕೀಗನ್ ಹೋರಾಟ: ಸರಣಿಯಲ್ಲಿ ವಿಜಯೀ ತಂಡವನ್ನು ನಿರ್ಣಯಿಸುವ ಮಹತ್ವದ ಪಂದ್ಯದ ಎರಡನೇ ದಿನದಾಟದಲ್ಲಿ ಭಾರತದ ಬೂಮ್ರಾ ಬೌಲಿಂಗ್ ಮತ್ತು ಆತಿಥೇಯ ತಂಡದ ಕೀಗನ್ ಬ್ಯಾಟಿಂಗ್ ಗಮನ ಗಮನ ಸೆಳೆದವು.

45 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದ್ದ ತಂಡಕ್ಕೆ ಕೀಗನ್ ಮತ್ತು ವ್ಯಾನ್ ಡರ್ ಸಸೆನ್ (21 ರನ್) ನಾಲ್ಕನ ವಿಕೆಟ್ ಜೊತೆಯಾಟದಲ್ಲಿ 62 ರನ್ ಸೇರಿಸಿ ಬಲ ತುಂಬಲು ಪ್ರಯತ್ನಿಸಿದರು. 40ನೇ ಓವರ್‌ನಲ್ಲಿ ಸಸೆನ್ ವಿಕೆಟ್ ಗಳಿಸಿದ ಉಮೇಶ್ ಯಾದವ್ ಜೊತೆಯಾಟವನ್ನುಮುರಿದರು.

ಕ್ರೀಸ್‌ಗೆ ಬಂದ ತೆಂಬಾ ಬವುಮಾ (28 ರನ್) ಕೂಡ ಕೀಗನ್‌ಗೆ ಉತ್ತಮ ಬೆಂಬಲ ಕೊಟ್ಟರು. ಐದನೇ ವಿಕೆಟ್ ಜೊತೆಯಾಟದಲ್ಲಿ 47 ರನ್ ಸೇರಿಸಿದರು. ಶಮಿ ಬೌಲಿಂಗ್‌ನಲ್ಲಿ ಬವುಮಾ ಔಟಾದರೊಂದಿಗೆ ಜೊತೆಯಾಟ ಮುರಿಯಿತು.

ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಮಿಂಚದಂತೆ ಬೂಮ್ರಾ ನೋಡಿಕೊಂಡರು. ಆದರೂ ಕೀಗನ್ ಹೋರಾಟದಿಂದ ತಂಡವು 200 ರನ್‌ಗಳ ಗಡಿ ದಾಟಿತು. ಆದರೆ, ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ. ಬೂಮ್ರಾ ಕಿಗನ್ ವಿಕೆಟ್ ಕೂಡ ಕಬಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT