ನವದೆಹಲಿ: ಭಾರತ ತಂಡವು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಹೊಸದೊಂದು ದಾಖಲೆಯ ಹೊಸ್ತಿಲಲ್ಲಿ ನಿಂತಿದೆ.
ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಸತತ 12 ಪಂದ್ಯಗಳನ್ನು ಗೆದ್ದಿರುವ ಭಾರತ ತಂಡವು ಗುರುವಾರ ದಕ್ಷಿಣ ಆಫ್ರಿಕಾ ಎದುರು ಆರಂಭವಾಗಲಿರುವ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಗೆದ್ದರೆ ಸಾರ್ವಕಾಲಿಕ ದಾಖಲೆಯನ್ನು ಭಾರತವು ನಿರ್ಮಿಸಲಿದೆ.
ಅಲ್ಲದೇ ಇದೇ ಅಕ್ಟೋಬರ್‌ನಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿರುವುದರಿಂದ ಪೂರ್ವಾಭ್ಯಾಸದ ವೇದಿಕೆಯಾಗಿಯೂ ಈ ಸರಣಿ ಮಹತ್ವ ಪಡೆದುಕೊಂಡಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿರುವುದರಿಂದ ಕನ್ನಡಿಗ ಕೆ.ಎಲ್. ರಾಹುಲ್ ತಂಡದ ನಾಯಕತ್ವ ವಹಿಸಿದ್ದಾರೆ. ಐಪಿಎಲ್‌ನಲ್ಲಿ ಆಡಿ ಬಂದಿರುವ ಯುವ ಆಟಗಾರರು ಮತ್ತು ಆರ್‌ಸಿಬಿಯಲ್ಲಿ ಮಿಂಚಿದ್ದ ದಿನೇಶ್ ಕಾರ್ತಿಕ್ ತಂಡದಲ್ಲಿದ್ದಾರೆ. ಈ ಬಳಗವನ್ನು ಸಮರ್ಥವಾಗಿ ದುಡಿಸಿಕೊಳ್ಳುವತ್ತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಚಿತ್ತ ನೆಟ್ಟಿದ್ದಾರೆ.
ಐಪಿಎಲ್ ಚಾಂಪಿಯನ್ ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯ ತಂಡದಲ್ಲಿದ್ದಾರೆ. ಗಾಯಗೊಂಡಿರುವ ಆಲ್‌ರೌಂಡರ್ ರವೀಂದ್ರ ಜಡೇಜ ಅವರ ಸ್ಥಾನವನ್ನು ಹಾರ್ದಿಕ್ ತುಂಬುವ ನಿರೀಖ್ಷೆ ಇದೆ. ವೇಗಿ ಉಮ್ರಾನ್ ಮಲೀಕ್ ಪದಾರ್ಪಣೆ ಮಾಡುವ ನಿರೀಕ್ಷೆ ಇದೆ. ಸ್ಪಿನ್ ತಾರೆಯರಾದ ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ರವಿ ಬಿಷ್ಣೋಯಿ ಮತ್ತು ಅಕ್ಷರ್ ಪಟೇಲ್ ಅವರಿಗೂ ಈ ಸರಣಿಯಲ್ಲಿ ಸತ್ವಪರೀಕ್ಷೆಯೊಡ್ಡಬಹುದು.
ತೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡಕ್ಕೂ ಇದು ಪ್ರಮುಖ ಸರಣಿಯಾಗಿದೆ. ಐಪಿಎಲ್‌ನಲ್ಲಿ ಮಿಂಚಿದ್ದ ಕ್ವಿಂಟನ್ ಡಿಕಾಕ್, ಡೇವಿಡ್ ಮಿಲ್ಲರ್, ಮರ್ಕರಂ, ಕಗಿಸೊ ರಬಾಡ ಅವರು ತಂಡದ ಶಕ್ತಿಯಾಗಿದ್ದಾರೆ. ಐದು ಪಂದ್ಯಗಳ ಸರಣಿಯಲ್ಲಿ ಜಯಿಸುವ ಛಲದಲ್ಲಿದ್ದಾರೆ.
ರಾಹುಲ್, ಕುಲದೀಪ್‌ಗೆ ಗಾಯ
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಬೇಕಿದ್ದ ಕೆ.ಎಲ್. ರಾಹುಲ್ ತೊಡೆ ಸ್ನಾಯುವಿನ ಗಾಯದಿಂದಾಗಿ ಹೊರಬಿದ್ದಿದ್ದಾರೆ. ಅವರ ಬದಲಿಗೆ ತಂಡದ ನಾಯಕರನ್ನಾಗಿ ರಿಷಭ್ ಪಂತ್ ಅವರನ್ನು ನೇಮಕ ಮಾಡಲಾಗಿದೆ. ಹಾರ್ದಿಕ್ ಪಾಂಡ್ಯ ಉಪನಾಯಕರಾಗಿದ್ದಾರೆ.
ಸ್ಪಿನ್ನರ್ ಕುಲದೀಪ್ ಯಾದವ್ ಅವರು ಮಂಗಳವಾರ ಸಂಜೆ ನೆಟ್ಸ್‌ನಲ್ಲಿ ಅಭ್ಯಾಸ ಮಾಡುವಾಗ ಬಲಗೈಗೆ ಚೆಂಡು ಬಡಿದು ಗಾಯವಾಗಿತ್ತು. ಆದ್ದರಿಂದ ಅವರು ಕೂಡ ಸರಣಿಯಲ್ಲಿ ಆಡುವುದಿಲ್ಲ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.
ತಂಡಗಳು:
ಭಾರತ: ಕೆ.ಎಲ್. ರಾಹುಲ್(ನಾಯಕ), ಋತುರಾಜ್ ಗಾಯಕವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯಿ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್, ಆರ್ಷದೀಪ್ ಸಿಂಗ್, ಉಮ್ರನ್ ಮಲಿಕ್
ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್), ರೀಜಾ ಹೆನ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಏಡನ್ ಮರ್ಕರಂ, ಡೇವಿಡ್ ಮಿಲ್ಲರ್, ಲುಂಗಿ ಗಿಡಿ, ಏನ್ರಿಚ್ ನಾಕಿಯಾ, ವೇಯ್ನ್ ಪಾರ್ನೆಲ್, ಡ್ವೇನ್ ಪ್ರಿಟೊರಿಯಸ್, ಕಗಿಸೊ ರಬಾಡ, ತಬ್ರೇಜ್ ಶಂಸಿ, ಟ್ರಿಸ್ಟನ್ ಸ್ಟಬ್ಸ್, ರಸಿ ವ್ಯಾನ್ ಡರ್ ಡಸೆ, ಮಾರ್ಕೊ ಜ್ಯಾನ್ಸೆನ್.
ಪಂದ್ಯ ಆರಂಭ: ರಾತ್ರಿ 7
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.