ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ– ದಕ್ಷಿಣ ಆಫ್ರಿಕಾ ಎರಡನೇ ಟಿ-20: ಪಂತ್ ಬಳಗಕ್ಕೆ ಜಯದ ಹಾದಿಗೆ ಮರಳುವ ಸವಾಲು

ರಸಿ, ಡೇವಿಡ್ ಮಿಲ್ಲರ್ ಮೇಲೆ ಕಣ್ಣು
Last Updated 11 ಜೂನ್ 2022, 19:32 IST
ಅಕ್ಷರ ಗಾತ್ರ

ಕಟಕ್: ಆಕಸ್ಮಿಕ ನಾಯಕ ರಿಷಭ್ ಪಂತ್ ಮುಂದೆ ಈಗ ಭಾರತ ತಂಡವನ್ನು ಗೆಲುವಿನ ಹಾದಿಗೆ ಮರಳಿ ತರುವ ಕಠಿಣ ಸವಾಲು ಇದೆ.

ಭಾರತ ತಂಡವು ಮೂರು ದಿನಗಳ ಹಿಂದೆ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಸೋತಿತ್ತು. ಐದು ಪಂದ್ಯಗಳ ಸರಣಿಯಲ್ಲಿ 0–1ರ ಹಿನ್ನಡೆ ಅನುಭವಿಸಿತ್ತು.

ಅಲ್ಲದೇ ವಿಶ್ವದಾಖಲೆ ನಿರ್ಮಿಸುವ ಅವಕಾಶವನ್ನೂ ಕಳೆದುಕೊಂಡಿತ್ತು.ಟಿ20 ಮಾದರಿಯಲ್ಲಿ ಸತತ 12 ಪಂದ್ಯಗಳನ್ನು ಜಯಿಸಿದ ದಾಖಲೆ ಭಾರತದ್ದು. ಕಳೆದ ಪಂದ್ಯದಲ್ಲಿ ಗೆದ್ದಿದ್ದರೆ ಸಾರ್ವಕಾಲೀಕ ದಾಖಲೆಯಾಗುತ್ತಿತ್ತು. ಆದರೆ,ಈಚೆಗೆ ಐಪಿಎಲ್‌ನಲ್ಲಿ ಅಬ್ಬರಿಸಿದ್ದ ರೀತಿಯಲ್ಲಿಯೇ ಬ್ಯಾಟ್ ಬೀಸಿದ್ದ ರಸಿ ವ್ಯಾನ್ ಡರ್ ಡಸೆ ಮತ್ತು ಡೇವಿಡ್ ಮಿಲ್ಲರ್ ಭಾರತದ ದಾಖಲೆಯ ಕನಸನ್ನು ನುಚ್ಚುನೂರು ಮಾಡಿದ್ದರು. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ತಂಡವು 212 ರನ್‌ಗಳ ಕಠಿಣ ಗುರಿ ನೀಡಿತ್ತು.

ಭಾನುವಾರ ಬಾರಾಬತಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ಗೆಲುವಿನ ಹಾದಿಗೆ ಮರಳುವ ಛಲದಲ್ಲಿ ಭಾರತವಿದೆ. ರೋಹಿತ್ ಶರ್ಮಾ ವಿಶ್ರಾಂತಿ ಮತ್ತು ಕೆ.ಎಲ್. ರಾಹುಲ್ ಗಾಯಗೊಂಡ ಕಾರಣ ಕೊನೆಯ ಕ್ಷಣದಲ್ಲಿ ಈ ಸರಣಿಗೆ ರಿಷಭ್ ಪಂತ್ ಅವರನ್ನು ನಾಯಕರನ್ನಾಗಿ ನೇಮಕ ಮಾಡಲಾಗಿತ್ತು.

ಭಾರತ ತಂಡದ ಭವಿಷ್ಯದ ನಾಯಕನೆಂದೇ ಹೇಳಲಾಗುತ್ತಿರುವ ವಿಕೆಟ್‌ಕೀಪರ್ –ಬ್ಯಾಟರ್ ಪಂತ್‌ ಮೇಲೆ ಈಗ ಎಲ್ಲರ ಚಿತ್ತ ನೆಟ್ಟಿದೆ. ಏಕೆಂದರೆ, ಸಂಪೂರ್ಣ ಫಿಟ್ ಆಗಿ ಕಣಕ್ಕಿಳಿದಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ನಾಯಕತ್ವದ ರೇಸ್‌ನಲ್ಲಿದ್ದಾರೆನ್ನಲಾಗಿದೆ. ಈಚೆಗೆ ಐಪಿಎಲ್‌ನಲ್ಲಿ ಹಾರ್ದಿಕ್ ನಾಯಕತ್ವದ ಗುಜರಾತ್ ಟೈಟನ್ಸ್‌ ಪ್ರಶಸ್ತಿ ಜಯಿಸಿತ್ತು. ರಿಷಭ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್‌ ಪ್ಲೇ ಆಫ್‌ ಪ್ರವೇಶಿಸುವಲ್ಲಿ ವಿಫಲವಾಗಿತ್ತು.

ಆದ್ದರಿಂದ ರಿಷಭ್ ಮೇಲೆ ಒತ್ತಡ ಹೆಚ್ಚಿದೆ. ಕಳೆದ ಪಂದ್ಯದಲ್ಲಿ ಇಶಾನ್ ಕಿಶನ್ ಅವರ ಅಮೋಘ ಬ್ಯಾಟಿಂಗ್‌ನಿಂದಾಗಿ ಬೃಹತ್ ಮೊತ್ತ ದಾಖಲಾಗಿತ್ತು. ಆದರೆ, ಬೌಲರ್‌ಗಳು ಮಿಲ್ಲರ್ ಮತ್ತು ರಸಿಯನ್ನು ಕಟ್ಟಿಹಾಕುವಲ್ಲಿ ವಿಫಲವಾಗಿತ್ತು. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಪ್ರವಾಸಿ ತಂಡದ ಬೌಲಿಂಗ್ ಪಡೆ ಕೂಡ ದುಬಾರಿಯಾಗಿತ್ತು. ಆದ್ದರಿಂದ ಎರಡೂ ತಂಡಗಳ ಬೌಲಿಂಗ್ ವಿಭಾಗದಲ್ಲಿ ಕೆಲವು ಬದಲಾವಣೆಗಳಾಗುವ ನಿರೀಕ್ಷೆ ಇದೆ.

ತಂಡಗಳು

ಭಾರತ: ರಿಷಭ್ ಪಂತ್ (ನಾಯಕ–ವಿಕೆಟ್‌ಕೀಪರ್), ಋತುರಾಜ್ ಗಾಯಕವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್ ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯಿ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್, ಆರ್ಷದೀಪ್ ಸಿಮಗ್, ಉಮ್ರಾನ್ ಮಲಿಕ್

ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್), ರೀಜಾ ಹೆನ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಏಡನ್ ಮರ್ಕರಂ. ಡೇವಿಡ್ ಮಿಲ್ಲರ್, ಲುಂಗಿ ಗಿಡಿ, ಎನ್ರಿಚ್ ನಾರ್ಕಿಯಾ, ವೇಯ್ನ್ ಪಾರ್ನೆಲ್, ಡ್ವೇನ್ ಪ್ರಿಟೊರಿಯಸ್, ಕಗಿಸೊ ರಬಾಡ, ತಬ್ರೆಜ್ ಶಮ್ಸಿ, ಟ್ರಿಸ್ಟನ್ ಸ್ಟಬ್ಸ್, ರಸಿ ವ್ಯಾನ್ ಡರ್ ಡಸೆ, ಮಾರ್ಕೊ ಜಾನ್ಸೆನ್.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌, ಹಾಟ್‌ಸ್ಟಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT