ಶುಕ್ರವಾರ, ಜನವರಿ 24, 2020
28 °C
ಕ್ರಿಕೆಟ್: ರಾಹುಲ್–ಶಿಖರ್ ಆಟಕ್ಕೆ ಲಂಕಾ ಸುಸ್ತು; ವಿಶ್ವಾಸ ಉಳಿಸಿಕೊಂಡ ಮನೀಷ್ ಪಾಂಡೆ; ಶಾರ್ದೂಲ್ ಅಬ್ಬರ:

ವಿರಾಟ್ ಬಳಗಕ್ಕೆ ಸರಣಿ ಕಿರೀಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪುಣೆ: ಕನ್ನಡಿಗ ಕೆ.ಎಲ್.ರಾಹುಲ್ ಮತ್ತು ದೆಹಲಿಯ ಶಿಖರ್ ಧವನ್ ಅವರ ನಡುವೆ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ರನ್‌ ಗಳಿಕೆಯ ಪೈಪೋಟಿ ಏರ್ಪಟ್ಟಿತ್ತು. ಇವರಿಬ್ಬರ ರನ್‌ ಬೇಟೆಗೆ ಶ್ರೀಲಂಕಾದ ಬೌಲರ್‌ಗಳು ಬಸವಳಿದರು. ಭಾರತ ತಂಡವು 2–0ಯಿಂದ ಟ್ವೆಂಟಿ–20 ಸರಣಿಯಲ್ಲಿ ಜಯಿಸಿತು.

ಇಲ್ಲಿ ನಡೆದ ಟ್ವೆಂಟಿ–20 ಸರಣಿಯ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 20 ಓವರ್‌ಗಳಲ್ಲಿ 6ಕ್ಕೆ 201 ರನ್‌ ಗಳಿಸಿತು. ಇದಕ್ಕೆ ರಾಹುಲ್ (54; 36ಎಸೆತ, 5ಬೌಂಡರಿ, 1ಸಿಕ್ಸರ್) ಮತ್ತು ಶಿಖರ್ ಧವನ್ (52; 36ಎಸೆತ, 7ಬೌಂಡರಿ, 1ಸಿಕ್ಸರ್)  ಮೊದಲ ವಿಕೆಟ್ ಜೊತೆಯಾಟದಲ್ಲಿ 97 ರನ್‌ ಸೇರಿಸಿದ್ದು ತಂಡದ ದೊಡ್ಡ ಮೊತ್ತಕ್ಕೆ ಅಡಿಪಾಯವಾಯಿತು. ಗುರಿ ಬೆನ್ನಟ್ಟಿದ ಪ್ರವಾಸಿ ತಂಡವು 15.5 ಓವರ್‌ಗಳಲ್ಲಿ 123 ರನ್‌ ಗಳಿಸಿತು. 78 ರನ್‌ಗಳಿಂದ ಭಾರತ ಗೆದ್ದಿತು. ನವದೀಪ್ ಸೈನಿ ಮೂರು, ಶಾರ್ದೂಲ್ ಠಾಕೂರ್  ಮತ್ತು ವಾಷಿಂಗ್ಟನ್ ಸುಂದರ್ ತಲಾ ಎರಡು ವಿಕೆಟ್ ಗಳಿಸಿದರು.

ಟಾಸ್ ಗೆದ್ದ ಶ್ರೀಲಂಕಾದ ಫೀಲ್ಡಿಂಗ್ ಮಾಡುವ ನಿರ್ಧಾರವು ದುಬಾರಿಯಾಯಿತು. ಪ್ರತಿ ಓವರ್‌ಗೆ ಸರಾಸರಿ 10.1ರಲ್ಲಿ ಆರಂಭಿಕ ಜೋಡಿಯು ರನ್ ಗಳಿಸಿತು. ತಲಾ ಮೂವತ್ತು ರನ್‌ ಗಳಿಸುವವರೆಗೂ ಇಬ್ಬರಲ್ಲಿಯೂ ಸಮಬಲ ಮತ್ತು ವೇಗವಿತ್ತು. ಆದರೆ  ಏಳನೇ ಓವರ್‌ನಲ್ಲಿ ಬೌಂಡರಿ ಸಹಿತ ಏಳು ರನ್‌ ಗಳಿಸಿದ ಶಿಖರ್ ಮುಂದೆ ಸಾಗಿದರು. ಕೇವಲ 34 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಗಾಯಗೊಂಡು ಚೇತರಿಸಿಕೊಂಡ ನಂತರ ಕಣಕ್ಕಿಳಿದಿರುವ ಮೊದಲ ಸರಣಿ ಇದು. ರೋಹಿತ್ ಶರ್ಮಾ ವಿಶ್ರಾಂತಿ ಪಡೆದ ಕಾರಣ ಶಿಖರ್‌ಗೆ ಇನಿಂಗ್ಸ್‌ ಆರಂಭಿಸುವ ಅವಕಾಶ ಲಭಿಸಿದೆ. 11ನೇ ಓವರ್‌ನಲ್ಲಿ ಶಿಖರ್ ಔಟಾದರು. 13ನೇ ಓವರ್‌ನಲ್ಲಿ ರಾಹುಲ್ ಕೂಡ 34 ಎಸೆತಗಳಲ್ಲಿ ಅರ್ಧಶತಕದ ಗಡಿ ಮುಟ್ಟಿದರು. ಇಂದೋರ್ ಪಂದ್ಯದಲ್ಲಿ ಅವರು 45 ರನ್‌ ಗಳಿಸಿದ್ದರು.

ಪಾಂಡೆ ಪಾಸ್; ಸಂಜು ಫೇಲ್: ಬಹಳ ದಿನಗಳಿಂದ ಬೆಂಚ್‌ ಕಾದಿದ್ದ ಕನ್ನಡಿಗ ಮನೀಷ್ ಪಾಂಡೆ ಮತ್ತು ಕೇರಳದ  ಆಟಗಾರ ಸಂಜು ಸ್ಯಾಮ್ಸನ್ ಅವರಿಗೆ ಕೊನೆಗೂ ಇಲ್ಲಿ ಕಣಕ್ಕಿಳಿಯುವ ಅವಕಾಶ ಲಭಿಸಿತು. ಆದರೆ ಈ ಪರೀಕ್ಷೆಯಲ್ಲಿ ಮನೀಷ್ ಪಾಂಡೆ (ಅಜೇಯ 31;  18ಎಸೆತ, 4ಬೌಂಡರಿ) ಉತ್ತೀರ್ಣರಾದರು. ಸಂಜು ಸ್ಯಾಮ್ಸನ್ (6ರನ್) ವಿಫಲರಾದರು. ಶಿಖರ್ ಔಟಾದಾಗ ನಾಯಕ ವಿರಾಟ್ ಕೊಹ್ಲಿ ತಮ್ಮ ಕ್ರಮಾಂಕದಲ್ಲಿ ಸಂಜುಗೆ ಆಡಲು ಕಳಿಸಿದರು. ಎದುರಿಸಿದ ಮೊದಲ ಎಸೆತವನ್ನು ಸಂಜು ಸಿಕ್ಸರ್‌ಗೆ ಎತ್ತಿದಾಗ ಕೊಹ್ಲಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಆದರೆ ಎರಡನೇ ಎಸೆತದಲ್ಲಿ ವರಿಂದು ಡಿಸಿಲ್ವಾಗೆ ಎಲ್‌ಬಿಡಬ್ಲ್ಯು ಆದರು.

ಆಗಲೂ ವಿರಾಟ್  ಕ್ರೀಸ್‌ಗೆ ಬರಲಿಲ್ಲ. ಪಾಂಡೆಗೆ ಅವಕಾಶ ನೀಡಿದರು. ಇನ್ನೊಂದೆಡೆ ರಾಹುಲ್ ಆತ್ಮವಿಶ್ವಾಸದಿಂದ ಆಡುತ್ತಿದ್ದರು. ಗೆಳೆಯನೊಂದಿಗೆ ಸೇರಿದ ಮನೀಷ್ ನಿಧಾನವಾಗಿ ಬೇರೂರಿದರು. ಆದರೆ ಈ ಜೊತೆಯಾಟ ಹೆಚ್ಚು ಹೊತ್ತು ಸಾಗಲಿಲ್ಲ. ಚೈನಾಮೆನ್ ಬೌಲರ್ ಲಕ್ಷನ್ ಸಂದಕನ್ ಎಸೆತವನ್ನು ಮುಂದೆ ಬಾಗಿ ಆಡಲು ಪ್ರಯತ್ನಿಸಿದ ರಾಹುಲ್ ಬೀಟ್ ಆದರು. ವಿಕೆಟ್‌ಕೀಪರ್ ಕುಶಾಲ ಪೆರೆರಾ ಬೇಲ್ಸ್‌ ಎಗರಿಸಿ ಕುಣಿದರು. ಆಗ ಬಂದ ಶ್ರೇಯಸ್ ಅಯ್ಯರ್ ಒಂದು ಬೌಂಡರಿ ಹೊಡೆದು ಔಟಾದರು. ಪಾಂಡೆಯೊಂದಿಗೆ ಸೇರಿದ ವಿರಾಟ್ (26; 17ಎಸೆತ, 2 ಬೌಂಡರಿ , 1ಸಿಕ್ಸರ್) ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಚಲನ ಮೂಡಿಸಿದರು. ಭರಪೂರ ಮನರಂಜನೆ ನೀಡಿದರು.

ಐದನೇ ವಿಕೆಟ್‌ ಜೊತೆಯಾಟದಲ್ಲಿ ಇವರಿಬ್ಬರೂ 42 ರನ್‌ ಸೇರಿಸಿದರು. ಆದರೆ 18ನೇ ಓವರ್‌ನಲ್ಲಿ ಎರಡನೇ ರನ್‌ಗಾಗಿ ಓಡುವ ಪ್ರಯತ್ನದಲ್ಲಿ ವಿರಾಟ್ ರನ್‌ಔಟ್ ಆದರು. ಕೊನೆಯ ಎರಡು ಓವರ್‌ಗಳಲ್ಲಿ ಮನೀಷ್ ಮತ್ತು ಶಾರ್ದೂಲ್ ಠಾಕೂರ್ (ಔಟಾಗದೆ 22; 8ಎ,1ಬೌಂ, 2ಸಿ) 37 ರನ್‌ ಸೂರೆ ಮಾಡಿದರು. ಅದರಲ್ಲಿ ಠಾಕೂರ್‌ ಅವರದ್ದೇ ಸಿಂಹಪಾಲು.

***

ಇವತ್ತು ನಾನು ಮತ್ತು ರಾಹುಲ್ ಆಡಿದ ರೀತಿಯು ಬಹಳ ಖುಷಿ ಕೊಟ್ಟಿದೆ. ತಂಡವು ಉತ್ತಮ ಮೊತ್ತ ಗಳಿಸಲು ನಾವು ಕೊಟ್ಟ ಆರಂಭವು ನೆರವಾಗಿರುವುದು ಹೆಮ್ಮೆಯ ವಿಷಯ

–ಶಿಖರ್ ಧವನ್ , ಭಾರತ ತಂಡದ ಆಟಗಾರ 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು