ಗುರುವಾರ , ಮಾರ್ಚ್ 23, 2023
30 °C

ಮಹಿಳಾ ಕ್ರಿಕೆಟ್‌ನ ರನ್ ಯಂತ್ರ ಮಿಥಾಲಿ: ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ್ತಿ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ವೂಸ್ಟರ್: ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ನೂತನ ದಾಖಲೆ ಬರೆದರು.

ಕ್ರಿಕೆಟ್‌ ಮೂರು ಮಾದರಿಗಳಲ್ಲಿಯೂ ಸೇರಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾದರು. ಶನಿವಾರ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು ಅಜೇಯ 75 ರನ್ ಗಳಿಸಿದರು. ಈ ಸಂದರ್ಭದಲ್ಲಿ ಅವರು ಇಂಗ್ಲೆಂಡ್‌ನ ಶಾರ್ಲೆಟ್ ಎಡ್ವರ್ಡ್ ಅವರ ದಾಖಲೆಯನ್ನು ಮುರಿದರು. ಒಟ್ಟು 10,337 ರನ್‌ಗಳನ್ನು ಗಳಿಸಿದ ಮಿಥಾಲಿ ಅವರು ಶಾರ್ಲೆಟ್ (10273) ಅವರನ್ನು ಹಿಂದಿಕ್ಕಿದರು.

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸತತ ಮೂರು ಪಂದ್ಯಗಳಲ್ಲಿಯೂ ಅವರು ಅರ್ಧಶತಕಗಳನ್ನು ದಾಖಲಿಸಿದರು. ಪಂದ್ಯಶ್ರೇಷ್ಠ ಗೌರವ ಗಳಿಸಿದರು.

ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಭಾರತ ಸೋತಿತ್ತು. ಕೊನೆಯ ಪಂದ್ಯದಲ್ಲಿ ಮಿಥಾಲಿ ಮತ್ತು ಸ್ಮೃತಿ ಮಂದಾನ ಅವರ ಅಮೋಘ ಬ್ಯಾಟಿಂಗ್‌ನಿಂದ ‘ಸಮಾಧಾನಕರ‘ ಜಯ ಸಾಧಿಸಿತು. ಆದರೆ, ಇಂಗ್ಲೆಂಡ್ 2–1ರಿಂದ ಸರಣಿಯನ್ನು ತನ್ನದಾಗಿಸಿಕೊಂಡಿತು.

38 ವರ್ಷದ ಮಿಥಾಲಿ ಅವರ ಸಾಧನೆಯನ್ನು ಹಲವು ಕ್ರಿಕೆಟ್ ಆಟಗಾರ್ತಿಯರು ಶ್ಲಾಘಿಸಿದ್ದಾರೆ.

‘ಮಿಥಾಲಿಯವರ ಉತ್ಕೃಷ್ಟ ಪ್ರತಿಭೆಯ ದ್ಯೋತಕ ಈ ದಾಖಲೆಯಾಗಿದೆ. ಅವರು ಈ ದಿನ ತಾರೆಯಾಗಿ ಬೆಳೆದಿರುವುದು ಅಚ್ಚರಿಯೇನಲ್ಲ. ಅವರ ಕೌಶಲ, ಸಾಮರ್ಥ್ಯದಿಂದಾಗಿಯೇ ನಿರಂತರವಾಗಿ ದಾಖಲೆಗಳನ್ನು ಬರೆಯುತ್ತಿದ್ದಾರೆ‘ ಎಂದು ಕ್ರಿಕೆಟ್ ವೀಕ್ಷಕ ವಿವರಣೆಗಾರ್ತಿ ಲಿಸಾ ಸ್ಥಳೇಕರ್ ಹೇಳಿದ್ದಾರೆ.

‘ರನ್‌ ಮೊತ್ತವನ್ನು ಚೇಸ್ ಮಾಡುವಾಗ ಅವರು ಬಹಳ ಎಚ್ಚರಿಕೆ ಮತ್ತು ಏಕಾಗ್ರತೆಯಿಂದ ಆಡುತ್ತಾರೆ. ಅವರು ಯಾವ ಸಮಯದಲ್ಲಿ ರನ್‌ ಗಳಿಸಬೇಕು ಮತ್ತು ರಕ್ಷಣಾತ್ಮಕವಾಗಿ ಆಡಬೇಕೆಂದು ಚುರುಕಾಗಿ ಅರಿತುಕೊಳ್ಳುತ್ತಾರೆ‘ ಎಂದು ಹೇಳಿದರು.

ಈ ದಾಖಲೆ ಸುದೀರ್ಘವಾಗಿರಲಿದೆ: ಶಾಂತಾ
ಮಹಿಳಾ ಕ್ರಿಕೆಟ್ ರಂಗದಲ್ಲಿ ಮಿಥಾಲಿ ರಾಜ್ ಸಚಿನ್ ತೆಂಡೂಲ್ಕರ್ ಇದ್ದಂತೆ. ಮಿಥಾಲಿ ಅವರ ದಾಖಲೆ  ಬಹಳ ದೀರ್ಘ ಕಾಲದವರೆಗೆ ಇರಲಿದೆ ಎಂದು ಭಾರತ ಮಹಿಳಾ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಹೇಳಿದ್ದಾರೆ.

‘ದಾಖಲೆಗಳನ್ನು ನೋಡಿದರೆ ಮಿಥಾಲಿಯವರ ಸಾಮರ್ಥ್ಯದ ಬಗ್ಗೆ ಸ್ಪಷ್ಟ ಅರಿವು ಮೂಡುತ್ತದೆ. ಅವರ ಸಾಧನೆಗಳೇ ಮಾತನಾಡುತ್ತವೆ. ಇಷ್ಟು ದೀರ್ಘ ಕಾಲದವರೆಗೆ ಅಗ್ರಸ್ಥಾನದಲ್ಲಿರುವ ಏಕೈಕ ಆಟಗಾರ್ತಿ ಅವರು. ಅವರ ದಾಖಲೆಯನ್ನು ಬಹುಬೇಗದಲ್ಲಿ ಮುರಿಯುವವರು  ಸದ್ಯಕ್ಕೆ ಕಾಣುತ್ತಿಲ್ಲ‘ ಎಂದರು.

ಇದನ್ನೂ ಓದಿ: 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು