ಶನಿವಾರ, ಏಪ್ರಿಲ್ 1, 2023
30 °C
ಭಾರತ–ಸ್ಕಾಟ್ಲೆಂಡ್ ಹಣಾಹಣಿ ಇಂದು

ಭಾರತ–ಸ್ಕಾಟ್ಲೆಂಡ್ ಹಣಾಹಣಿ ಇಂದು: ಸುಲಭ ಜಯದ ಮೇಲೆ ವಿರಾಟ್ ಪಡೆ ಕಣ್ಣು

ಪಿಟಿಐ Updated:

ಅಕ್ಷರ ಗಾತ್ರ : | |

ಮೊಹಮ್ಮದ್ ಶಮಿ

ದುಬೈ: ಭಾರತ ಕ್ರಿಕೆಟ್ ತಂಡವು ಶುಕ್ರವಾರ ಸ್ಕಾಟ್ಲೆಂಡ್ ತಂಡದ ಎದುರು ಕಣಕ್ಕಿಳಿಯಲಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅನುಭವವಿಲ್ಲದ ಮತ್ತು ಈಗ ಅಂಬೆಗಾಲಿಕ್ಕುತ್ತಿರುವ ಸ್ಕಾಟ್ಲೆಂಡ್ ತಂಡವನ್ನು ಸುಲಭವಾಗಿ ಸೋಲಿಸುವ ಛಲದಲ್ಲಿದೆ. ಆದರೆ, ನೆಟ್‌ ರನ್‌ರೇಟ್‌ನಲ್ಲಿಯೂ ದೊಡ್ಡ ಅಂತರದಿಂದ ಜಯಿಸುವುದು ಕೂಡ ಮುಖ್ಯವಾಗಿದೆ. 

ಸೂಪರ್ 12 ಹಂತದ ಎರಡನೇ ಗುಂಪಿನಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋತಿರುವ ಭಾರತ ತಂಡ ಅಫ್ಗಾನಿಸ್ತಾನ ವಿರುದ್ಧ ಗೆದ್ದಿದೆ. ಆದರೆ, ಸ್ಕಾಟ್ಲೆಂಡ್, ನಮಿಬಿಯಾ ವಿರುದ್ಧವೂ ದೊಡ್ಡ ಅಂತರದಿಂದ ಜಯಿಸಬೇಕು. ಅದರೊಂದಿಗೆ ನ್ಯೂಜಿಲೆಂಡ್ ತಂಡವು ತನ್ನ ಮುಂದಿನ ಎರಡು ಪಂದ್ಯಗಳ ಪೈಕಿ ಕನಿಷ್ಠ ಒಂದರಲ್ಲಾದರೂ ಸೋಲುವುದನ್ನು ನಿರೀಕ್ಷಿಸಬೇಕು. ಇದಿಷ್ಟೇ ಈಗ ವಿರಾಟ್ ಕಹ್ಲಿ ಬಳಗದ ನಿಯಂತ್ರಣದಲ್ಲಿರುವ ಸಂಗತಿ.

ನ್ಯೂಜಿಲೆಂಡ್ ತಂಡ ಕೂಡ ಪಾಕ್ ಎದುರು ಸೋತಿತ್ತು. ಆದರೆ, ಪುಟಿದೆದ್ದ ಕೇನ್ ವಿಲಿಯಮ್ಸನ್ ಬಳಗವು ಭಾರತ ತಂಡವನ್ನು ಮಣಿಸಿತ್ತು. ಸ್ಕಾಟ್ಲೆಂಡ್ ವಿರುದ್ಧ 16 ರನ್‌ಗಳಿಂದ ಗೆದ್ದಿತ್ತು. ಕಿವೀಸ್ ಕೂಡ ಶುಕ್ರವಾರ ನಮಿಬಿಯಾ ವಿರುದ್ಧ ಮತ್ತು ನ.7ರಂದು ಅಫ್ಗಾನಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ.

ಪಾಕಿಸ್ತಾನ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ. ಎರಡನೇ ತಂಡವಾಗಿ ಪ್ರವೇಶಿಸಲು ಕಿವೀಸ್‌ಗೆ ಭಾರತಕ್ಕಿಂತ ಹೆಚ್ಚು ಸರಳ ಅವಕಾಶಗಳಿವೆ. ಆದರೂ ತನ್ನ ಪಾಲಿನಲ್ಲಿ ಉಳಿದಿರುವ ಎರಡೂ ಪಂದ್ಯಗಳಲ್ಲಿ ದೊಡ್ಡ ಅಂತರದ ಜಯ ಗಳಿಸುವುದು ಕೂಡ ತಂಡಕ್ಕೆ ಮಹತ್ವದ್ದು.

ಸ್ಕಾಟ್ಲೆಂಡ್ ತಂಡವನ್ನು ಭಾರತವು ಇದೇ ಮೊದಲ ಸಲ ಎದುರಿಸಲಿದೆ. 2007ರಲ್ಲಿ ಉಭಯ ತಂಡಗಳ ಪಂದ್ಯವು ಟಾಸ್ ನಂತರ ಪ್ರತಿಕೂಲ ಹವಾಮಾನದ ಕಾರಣ ರದ್ದಾಗಿತ್ತು.

ಕೈಲ್ ಕೋಯ್ಜರ್ ನೇತೃತ್ವದ ತಂಡವು ಇದೇ ಮೊದಲ ಬಾರಿ ವಿಶ್ವಕಪ್ ಪ್ರಧಾನ ಸುತ್ತಿಗೆ ಪ್ರವೇಶಿಸಿದೆ. ಆದರೆ ಒಂದೂ ಪಂದ್ಯದಲ್ಲಿ ಜಯಿಸಿಲ್ಲ. ಕಿವೀಸ್ ಎದುರಿನ ಪಂದ್ಯದಲ್ಲಿ ದಿಟ್ಟತನದಿಂದ ಆಡಿತ್ತು. 

ಅಫ್ಗನ್ ವಿರುದ್ಧದ ಜಯದಿಂದ ತುಸು ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಭಾರತ ತಂಡವು ಹೆಚ್ಚು ಬದಲಾವಣೆಗಳನ್ನು ಮಾಡದೇ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ರೋಹಿತ್, ಕೆ.ಎಲ್. ರಾಹುಲ್ ಜೋಡಿಯು ಶತಕದ ಜೊತೆಯಾಟವಾಡಿತ್ತು. ರಿಷಭ್ ಮತ್ತು ಹಾರ್ದಿಕ್ ತಮ್ಮ ಲಯ ಕಂಡುಕೊಂಡಿದ್ದರು. ಶಮಿ, ಬೂಮ್ರಾ ಉತ್ತಮ ಬೌಲಿಂಗ್‌ನೊಂದಿಗೆ ಗಮನ ಸೆಳೆದಿದ್ದರು. ಅಶ್ವಿನ್ ಕೂಡ ನಾಲ್ಕು ವರ್ಷಗಳ ನಂತರ ಬಿಳಿಚೆಂಡಿನ ಕ್ರಿಕೆಟ್‌ ಪಂದ್ಯಕ್ಕೆ ಮರಳಿದ್ದರು.

ಭಾರತಕ್ಕೆ ಹೋಲಿಸಿದರೆ ಸ್ಕಾಟ್ಲೆಂಡ್ ಬಲಾಢ್ಯ ತಂಡವೇನಲ್ಲ. ಆದರೆ, ಅತಿ ಆತ್ಮವಿಶ್ವಾಸದಿಂದ ಸ್ವಲ್ಪ ಎಚ್ಚರ ತಪ್ಪಿದರೂ ಆಘಾತ ನೀಡುವ ಸಾಮರ್ಥ್ಯ ಅದಕ್ಕಿದೆ.

ತಂಡಗಳು: ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್. ರಾಹುಲ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್‌ಕೀಪರ್), ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್, ಜಸ್‌ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ರಾಹುಲ್ ಚಾಹರ್, ವರುಣ್ ಚಕ್ರವರ್ತಿ,  ಆರ್. ಅಶ್ವಿನ್.

ಸ್ಕಾಟ್ಲೆಂಡ್: ಕೈಲ್ ಕೊಯ್ಜೆರ್ (ನಾಯಕ), ರಿಚಿ ಬ್ಯಾರಿಂಗ್ಟನ್, ಡೈಲನ್ ಬಜ್, ಮ್ಯಾಥ್ಯೂ ಕ್ರಾಸ್, ಜೋಶ್ ಡೇವಿ, ಅಲ್ಸ್‌ಡೇರ್ ಇವಾನ್ಸ್, ಕ್ರಿಸ್ ಗ್ರೀವ್ಸ್, ಮಿಚೆಲ್ ಲೀಸ್ಕ್, ಕೆಲಮ್ ಮೆಕ್‌ಲಾಯ್ಡ್, ಜಾರ್ಜ್ ಮನ್ಸಿ, ಸಫಿಯಾನ್ ಶರೀಫ್, ಹಮ್ಜಾ ತಾಹೀರ್, ಕ್ರೇಗ್ ವಾಲೆಸ್, ಮಾರ್ಕ್ ವಾಟ್, ಬ್ರೆಡ್ಲಿ ವೀ‌ಲ್.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು