ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC Cricket World Cup| IND vs AFG: ಭಾರತಕ್ಕೆ ಮತ್ತೊಂದು ಜಯದ ಛಲ

ಕ್ರಿಕೆಟ್: ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ ಮೇಲೆ ಕಣ್ಣು; ಸ್ಪಿನ್ನರ್‌ಗಳ ಆಟಕ್ಕೆ ವೇದಿಕೆ?
Published 11 ಅಕ್ಟೋಬರ್ 2023, 0:30 IST
Last Updated 11 ಅಕ್ಟೋಬರ್ 2023, 0:30 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಎದುರು ಗೆದ್ದ ಸಂತಸದಲ್ಲಿರುವ ಭಾರತಕ್ಕೆ ಬುಧವಾರ ಅಫ್ಗಾನಿಸ್ತಾನ ತಂಡ ಎದುರಾಗಲಿದೆ.

ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ  ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ವಿರಾಟ್ ಕೊಹ್ಲಿ ಅವರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. 

ಎರಡು ದಿನಗಳ ಹಿಂದೆ ಚೆನ್ನೈನಲ್ಲಿ ನಡೆದಿದ್ದ ಪಂದ್ಯದಲ್ಲಿ 200 ರನ್‌ಗಳ ಗುರಿ ಬೆನ್ನಟ್ಟಿದ್ದ ಭಾರತ ತಂಡವು ಎರಡು ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ರಾಹುಲ್ ಮತ್ತು ವಿರಾಟ್ ಜೊತೆಯಾಟವಾಡಿ 167 ರನ್‌ ಸೇರಿಸಿದರು.

ರಾಹುಲ್ ಅಜೇಯ 97 ರನ್‌ಗಳನ್ನು ಗಳಿಸಿ ತಂಡದ ಗೆಲುವಿನ ರೂವಾರಿಯಾದರು. ಆ ಪಂದ್ಯದಲ್ಲಿ ರೋಹಿತ್ ಶರ್ಮಾ, ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರು ಸೊನ್ನೆ ಸುತ್ತಿದ್ದರು. ಅದರಿಂದ ಎದುರಾಗಿದ್ದ ಆತಂಕವನ್ನು ರಾಹುಲ್ ಮತ್ತು ವಿರಾಟ್ ದೂರ ಮಾಡಿದ್ದರು. ರಾಹುಲ್ ಅವರ ಯಶಸ್ವಿ ಇನಿಂಗ್ಸ್‌ನಿಂದಾಗಿ ಮಧ್ಯಮ ಕ್ರಮಾಂಕದ ದೌರ್ಬಲ್ಯ ದೂರವಾಗಿರುವುದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಸಮಾಧಾನ ತಂದಿದೆ.

ಆದರೆ ಅಗ್ರಕ್ರಮಾಂಕದ ಅನುಭವಿ ಬ್ಯಾಟರ್‌ಗಳು ಲಯಕ್ಕೆ ಮರಳಿದರೆ ಬ್ಯಾಟಿಂಗ್‌ ವಿಭಾಗ ಮತ್ತಷ್ಟು ಬಳಶಾಲಿಯಾಗುವುದರಲ್ಲಿ ಎರಡು ಮಾತಿಲ್ಲ.

ರನ್‌ ಹೊಳೆ ಹರಿಯುವುದೇ?

ಚೆನ್ನೈನಲ್ಲಿ ಸ್ಪಿನ್‌ ಸ್ನೇಹಿ ಪಿಚ್‌ನಲ್ಲಿ ಭಾರತದ ಸ್ಪಿನ್ ಜೋಡಿ ರವೀಂದ್ರ ಜಡೇಜ ಮತ್ತು ಕುಲದೀಪ್ ಯಾದವ್ ಆಸ್ಟ್ರೇಲಿಯಾ ಬಳಗಕ್ಕೆ ಕಡಿವಾಣ ಹಾಕಿದ್ದರು.

ದೆಹಲಿಯಲ್ಲಿಯೂ ಇಂತಹದೇ ಪಿಚ್‌ ಸಿದ್ಧವಾಗಿರುವ ಸಾಧ್ಯತೆ ಇದೆ. ಆದರೆ ಇಲ್ಲಿ ನಾಲ್ಕು ದಿನಗಳ ಹಿಂದೆ ನಡೆದಿದ್ದ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಣ ಪಂದ್ಯದಲ್ಲಿ ಒಟ್ಟು 700ಕ್ಕೂ ಹೆಚ್ಚು ರನ್‌ಗಳು ಹರಿದಿದ್ದವು. 31 ಸಿಕ್ಸರ್‌ಗಳೂ ಸಿಡಿದಿದ್ದವು.

ವಿಶ್ವಕಪ್ ಟೂರ್ನಿಗಿಂತ ಮುನ್ನ ಈ ಕ್ರೀಡಾಂಗಣದ ಮುಖ್ಯ ಪಿಚ್‌ ನವೀಕರಣ ಮಾಡಲಾಗಿತ್ತು. ಅದರಿಂದಾಗಿ ಅದರ ಗುಣಧರ್ಮವೂ ಬದಲಾಗಿದೆ.

ಶುಭಮನ್ ಗಿಲ್ ಅವರಿಗೆ ಈ ಪಂದ್ಯದಿಂದಲೂ ವಿಶ್ರಾಂತಿ ನೀಡಲಾಗಿದೆ. ಅದರಿಂದಾಗಿ ರೋಹಿತ್ ಜೊತೆಗೆ ಇಶಾನ್ ಇನಿಂಗ್ಸ್ ಆರಂಭಿಸುವರು. ಅಫ್ಗನ್ ತಂಡದಲ್ಲಿರುವ ಅನುಭವಿ ಸ್ಪಿನ್ನರ್ ರಶೀದ್ ಖಾನ್, ಮೊಹಮ್ಮದ್ ನಬಿ ಮತ್ತು ಮುಜೀಬ್ ಉರ್ ರೆಹಮಾನ್ ಅವರೂ ಭಾರತದ ಬ್ಯಾಟರ್‌ಗಳಿಗೆ ಸವಾಲೊಡ್ಡಬಲ್ಲರು.  ಆದರೆ ಸ್ಥಳೀಯ ಹೀರೊ ವಿರಾಟ್ ಕೊಹ್ಲಿ ಮತ್ತು ಲಯದಲ್ಲಿರುವ ರಾಹುಲ್ ಅವರನ್ನು ಕಟ್ಟಿಹಾಕುವುದು ಅಫ್ಗನ್ ಬೌಲಿಂಗ್‌ ಪಡೆಗೆ ಪ್ರಮುಖ ಸವಾಲಾಗಬಹುದು.

ಅಫ್ಗನ್ ತಂಡವು ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೋತಿತ್ತು. ಅದರಲ್ಲಿ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದ್ದರು. ಅದರಿಂದಾಗಿ ತಂಡದ ಮೊತ್ತವು ಇನ್ನೂರು ರನ್‌ಗಳ ಮೊತ್ತವನ್ನೂ ದಾಟಿರಲಿಲ್ಲ.

ಬ್ಯಾಟರ್‌ಗಳು ದೊಡ್ಡ ಮೊತ್ತ ಕಲೆ ಹಾಕದಿದ್ದರೆ ಎಷ್ಟೇ ಉತ್ತಮ ಬೌಲರ್‌ಗಳಿದ್ದರೂ ಗೆಲುವು ತಂದುಕೊಡುವುದು ಸುಲಭವಲ್ಲ. ಆದ್ದರಿಂದ ಭಾರತದ ಬೌಲಿಂಗ್ ಪಡೆಯನ್ನು ಎದುರಿಸಿ ನಿಲ್ಲುವ ಸಾಹಸವನ್ನು ಹಷ್ಮತುಲ್ಲಾ ಶಾಹೀದಿ ಪಡೆ ತೋರಿದರೆ ಪಂದ್ಯ ಆಸಕ್ತಿಕರವಾಗಬಹುದು.

ಭಾರತದ ಕೆ.ಎಲ್. ರಾಹುಲ್ ಮತ್ತು ರೋಹಿತ್ ಶರ್ಮಾ   –ಪಿಟಿಐ ಚಿತ್ರ
ಭಾರತದ ಕೆ.ಎಲ್. ರಾಹುಲ್ ಮತ್ತು ರೋಹಿತ್ ಶರ್ಮಾ   –ಪಿಟಿಐ ಚಿತ್ರ
ಭಾರತದ ಬ್ಯಾಟರ್ ವಿರಾಟ್ ಕೊಹ್ಲಿ   –ಪಿಟಿಐ ಚಿತ್ರ
ಭಾರತದ ಬ್ಯಾಟರ್ ವಿರಾಟ್ ಕೊಹ್ಲಿ   –ಪಿಟಿಐ ಚಿತ್ರ

ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ) ಇಶಾನ್ ಕಿಶನ್ ವಿರಾಟ್ ಕೊಹ್ಲಿ ಶ್ರೇಯಸ್ ಅಯ್ಯರ್ ಕೆ.ಎಲ್. ರಾಹುಲ್ (ವಿಕೆಟ್‌ಕೀಪರ್) ಹಾರ್ದಿಕ್ ಪಾಂಡ್ಯ ರವೀಂದ್ರ ಜಡೇಜ ಆರ್. ಅಶ್ವಿನ್ ಕುಲದೀಪ್ ಯಾದವ್ ಜಸ್‌ಪ್ರೀತ್ ಬೂಮ್ರಾ ಮೊಹಮ್ಮದ್ ಸಿರಾಜ್ ಮೊಹಮ್ಮದ್ ಶಮಿ ಸೂರ್ಯಕುಮಾರ್ ಯಾದವ್ ಶಾರ್ದೂಲ್ ಠಾಕೂರ್. ‌

ಅಫ್ಗಾನಿಸ್ತಾನ: ಹಷ್ಮತ್‌ಉಲ್ಲಾ ಶಾಹೀದಿ (ನಾಯಕ) ರೆಹಮಾನುಲ್ಲಾ ಗುರ್ಬಾಜ್ ಇಬ್ರಾಹಿಂ ಜದ್ರಾನ್ ರಿಯಾಜ್ ಹಸನ್ ರೆಹಮತ್ ಶಾ ನಜೀಬುಲ್ಲಾ ಜದ್ರಾನ್ ಮೊಹಮ್ಮದ್ ನಬಿ ಇಕ್ರಂ ಅಲಿಖೀಲ್ ಅಜ್ಮತ್‌ಉಲ್ಲಾ ಒಮರ್‌ಝೈ ರಶೀದ್ ಖಾನ್ ಮುಜೀಬ್ ಉರ್ ರೆಹಮಾನ್ ನೂರ್ ಅಹಮದ್ ಫಜಲ್‌ಹಕ್ ಫಾರೂಕಿ ಅಬ್ದುಲ್ ರೆಹಮಾನ್ ನವೀನ್ ಉಲ್ ಹಕ್. ಪಂದ್ಯ ಆರಂಭ: ಮಧ್ಯಾಹ್ನ 2 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್ ಹಾಟ್‌ಸ್ಟಾರ್ ಆ್ಯಪ್

ವಿರಾಟ್ ಕೊಹ್ಲಿ ಪೆವಿಲಿಯನ್!

ದೆಹಲಿಯ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಅವರು ಬುಧವಾರ ತಮ್ಮದೇ ಹೆಸರಿನ ಪೆವಿಲಿಯನ್ ಎದುರು ಆಡಲಿರುವುದು ವಿಶೇಷ. ದೆಹಲಿಯವರೇ ಆದ ವಿರಾಟ್ ಪ್ರಸ್ತುತ ಕ್ರಿಕೆಟ್‌ನಲ್ಲಿ ‘ಕಿಂಗ್ ಕೊಹ್ಲಿ’ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಾರೆ. ಮೂರು ಮಾದರಿಗಳ ಕ್ರಿಕೆಟ್‌ನಲ್ಲಿಯೂ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.  ಸಚಿನ್ ತೆಂಡೂಲ್ಕರ್ ನಿರ್ಮಿಸಿರುವ ಶತಕಗಳ ಶತಕ ಮತ್ತು ಅತಿ ಹೆಚ್ಚು ರನ್‌ ದಾಖಲೆಗಳನ್ನು ಮೀರಿ ನಿಲ್ಲುವ ಭರವಸೆಯನ್ನು ವಿರಾಟ್ ಮೂಡಿಸಿದ್ದಾರೆ. ಅವರು ಆಡಿ ಬೆಳೆದ ಕ್ರೀಡಾಂಗಣದ ಪೆವಿಲಿಯನ್‌ಗೆ ವಿರಾಟ್ ಹೆಸರು ಇಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT