ಗುರುವಾರ , ಅಕ್ಟೋಬರ್ 6, 2022
24 °C
ಆತಿಥೇಯರಿಗೆ ‘ಡೆತ್ ಓವರ್‌’ ಸವಾಲು

ಭಾರತ– ಆಸ್ಟ್ರೇಲಿಯಾ ಟಿ20: ಗೆಲುವಿನ ಒತ್ತಡದಲ್ಲಿ ರೋಹಿತ್ ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಗಪುರ: ಚುಟುಕು ಕ್ರಿಕೆಟ್ ಪಂದ್ಯದ ಇನಿಂಗ್ಸ್‌ನ ಕೊನೆಯ ಹಂತದ ಮೂರು ಓವರ್‌ಗಳಲ್ಲಿ ‘ಯಶಸ್ಸು’ ಸಾಧಿಸುವುದು ಹೇಗೆ ಎಂಬ ಪ್ರಶ್ನೆ ಈಗ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಕಾಡುತ್ತಿದೆ. 

ಮೂರು ದಿನಗಳ ಹಿಂದೆ ಮೊಹಾಲಿಯಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಪಡೆಯು 200ಕ್ಕೂ ಹೆಚ್ಚು ರನ್‌ಗಳ ಗುರಿ ನೀಡಿದ್ದರೂ ಗೆಲುವು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ ಬೌಲಿಂಗ್ ದೌರ್ಬಲ್ಯ. ಮಧ್ಯಮವೇಗಿ ಭುವನೇಶ್ವರ್ ಕುಮಾರ್ 19ನೇ ಓವರ್‌ನಲ್ಲಿ ಬಿಗಿ ದಾಳಿ ನಡೆಸದಿರುವುದು ಅದಕ್ಕೆ ಕಾರಣವಾಗಿತ್ತು. ಜೊತೆಗೆ ಬಿಟ್ಟ ಕ್ಯಾಚ್‌ಗಳು ಕೂಡ ದುಬಾರಿಯಾದವು. ಇದಕ್ಕೂ ಮುನ್ನ ಪಾಕಿಸ್ತಾನ, ಶ್ರೀಲಂಕಾ ಎದುರಿನ ಪಂದ್ಯಗಳಲ್ಲಿಯೂ ಅವರು ಇಂತಹದೇ ಕಳಪೆ ಪ್ರದರ್ಶನ ನೀಡಿದ್ದರು. 

ಆದ್ದರಿಂದಲೇ ಈಗ ಎಲ್ಲರ ಕಣ್ಣು ‘ಡೆತ್ ಓವರ್’ ಪರಿಣತ ಜಸ್‌ಪ್ರೀತ್ ಬೂಮ್ರಾ ಅವರತ್ತ ನೆಟ್ಟಿದೆ. ಶುಕ್ರವಾರ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲ ಅವರು ಕಣಕ್ಕಿಳಿಯುವ ಕುರಿತು ಇನ್ನೂ ಖಚಿತವಾಗಿಲ್ಲ. 

ಗಾಯದಿಂದ ಚೇತರಿಸಿಕೊಂಡಿರುವ ಅವರು ತಂಡಕ್ಕೆ ಮರಳಿದ್ದಾರೆ. ಆದರೆ ಕಣಕ್ಕಿಳಿಯುವುದು ಖಚಿತವಾಗಿಲ್ಲ. ಮೂರು ಪಂದ್ಯಗಳ ಸರಣಿ ಜಯದ ಕನಸು ಜೀವಂತ ಉಳಿಯಬೇಕಾದರೆ ರೋಹಿತ್ ಪಡೆಗೆ ಈ ಪಂದ್ಯದಲ್ಲಿ ಗೆಲುವು ಅವಶ್ಯಕ.

ಅದರಿಂದಾಗಿ ಬೌಲಿಂಗ್‌ನಲ್ಲಿ ಒಂದಿಷ್ಟು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಮೊದಲ ಪಂದ್ಯದಲ್ಲಿ ರಾಹುಲ್, ಸೂರ್ಯಕುಮಾರ್ ಹಾಗೂ ಹಾರ್ದಿಕ್ ಪಾಂಡ್ಯ ಅವರ ಅಬ್ಬರದ ಆಟ ಗಮನ ಸೆಳೆದಿತ್ತು. ಆದರೆ ಅನುಭವಿ ರೋಹಿತ್, ವಿರಾಟ್, ದಿನೇಶ್ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. 

 ಆದರೆ ಆ ಪಂದ್ಯದಲ್ಲಿ ಯುಡಿಆರ್‌ಎಸ್‌ (ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ) ಅನ್ನು ತೆಗೆದುಕೊಂಡು ಯಶಸ್ವಿಯಾಗಲು ರೋಹಿತ್‌ಗೆ ವಿಕೆಟ್‌ಕೀಪರ್ ದಿನೇಶ್ ನೀಡಿದ್ದ ಸಲಹೆಗಳು ಫಲಪ್ರದವಾಗಿದ್ದವು. ಆದ್ದರಿಂದ ಅವರಿಗೆ ಮತ್ತೊಂದು ಅವಕಾಶ ಸಿಗಬಹುದು. ರಿಷಭ್ ಬೆಂಚ್‌ ಕಾಯಬೇಕಾಗಬಹುದು.

 ಆಸ್ಟ್ರೇಲಿಯಾ ತಂಡದ ಬೌಲಿಂಗ್‌ನಲ್ಲಿಯೂ ಕೆಲವು ಲೋಪಗಳಿವೆ. ಗ್ರೀನ್ ಹೊರತುಪಡಿಸಿದರೆ ಅಗ್ರಕ್ರಮಾಂಕದ ಬ್ಯಾಟರ್‌ಗಳೂ ತಮ್ಮ ಸಾಮರ್ಥ್ಯವನ್ನು ತೋರಬೇಕಿದೆ.

ತಂಡಗಳು: ಭಾರತ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ದೀಪಕ್ ಚಾಹರ್, ಜಸ್‌ಪ್ರೀತ್ ಬೂಮ್ರಾ, ಉಮೇಶ್ ಯಾದವ್

ಆಸ್ಟ್ರೇಲಿಯಾ: ಆ್ಯರನ್ ಫಿಂಚ್ (ನಾಯಕ),  ಸೀನ್ ಅಬಾಟ್, ಆಷ್ಟನ್ ಆಗರ್, ಪ್ಯಾಟ್ ಕಮಿನ್ಸ್, ಟಿಮ್ ಡೇವಿಡ್, ನೇಥನ್ ಎಲಿಸ್, ಕ್ಯಾಮರಾನ್ ಗ್ರೀನ್, ಜೋಸ್ ಹ್ಯಾಜಲ್‌ವುಡ್, ಜೋಷ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್ಸನ್, ಡೇನೀಲ್ ಸ್ಯಾಮ್ಸ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್, ಆ್ಯಡಂ ಜಂಪಾ.

ಪಂದ್ಯ ಆರಂಭ: ರಾತ್ರಿ 7

ನೇರಪ್ರಸಾರ:

––

ಬಲಾಬಲ

ಪಂದ್ಯ; 24

ಭಾರತ ಜಯ; 13

ಆಸ್ಟ್ರೇಲಿಯಾ ಜಯ; 10

ಫಲಿತಾಂಶವಿಲ್ಲ; 1

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು