ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇದಾರ್‌ ಅಮೋಘ ಬ್ಯಾಟಿಂಗ್: ಭಾರತ ‘ಬಿ’ ಮುಡಿಗೆ ದೇವಧರ್ ಟ್ರೋಫಿ

ಎಡಗೈ ಸ್ಪಿನ್ನರ್ ಶಹಬಾಜ್ ನದೀಮ್ ಪ್ರಬಲ ದಾಳಿ
Last Updated 4 ನವೆಂಬರ್ 2019, 20:00 IST
ಅಕ್ಷರ ಗಾತ್ರ

ರಾಂಚಿ: ಪತನದತ್ತ ಸಾಗಿದ್ದ ಇನಿಂಗ್ಸ್‌ಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕೇದಾರ್ ಜಾಧವ್ (86; 94 ಎಸೆತ, 4 ಸಿಕ್ಸರ್‌, 4 ಬೌಂಡರಿ) ಬಲ ತುಂಬಿದರು. ಎಡಗೈ ಸ್ಪಿನ್ನರ್ ಶಹಬಾಜ್ ನದೀಮ್ (10–1–32–4) ಪ್ರಬಲ ದಾಳಿ ಸಂಘಟಿಸಿ ಎದುರಾಳಿಗಳನ್ನು ಕಟ್ಟಿ ಹಾಕಿದರು. ಇವರಿಬ್ಬರ ಅಮೋಘ ಆಟದ ಬಲದಿಂದ ಭಾರತ ‘ಬಿ’ ತಂಡ ದೇವಧರ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

ಇಲ್ಲಿ ಸೋಮವಾರ ನಡೆದ ಫೈನಲ್‌ ಪಂದ್ಯದಲ್ಲಿ ಭಾರತ ‘ಬಿ’ ತಂಡ ಭಾರತ ‘ಸಿ’ಯನ್ನು 51 ರನ್‌ಗಳಿಂದ ಮಣಿಸಿತು. ‘ಬಿ’ 7ಕ್ಕೆ 283 ರನ್ ಗಳಿಸಿತ್ತು. ‘ಸಿ’ ತಂಡಕ್ಕೆ 9 ವಿಕೆಟ್ ಕಳೆದುಕೊಂಡ 232 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ‘ಬಿ’ ತಂಡ ಆರಂಭದಲ್ಲಿ ಆಘಾತ ಅನುಭವಿಸಿತು. ಮೊದಲ ಓವರ್‌ನಲ್ಲೇ ಋತುರಾಜ್ ಗಾಯಕವಾಡ್ ಅವರನ್ನು ಕಳೆದುಕೊಂಡ ತಂಡ 28 ರನ್‌ ಗಳಿಸುವಷ್ಟರಲ್ಲಿ ಎರಡನೇ ಆಘಾತ ಅನುಭವಿಸಿತು. ಯುವ ಆಟಗಾರ ಯಶಸ್ವಿ ಜೈಸ್ವಾಲ್ (54; 79 ಎ, 1 ಸಿ, 5 ಬೌಂ) ಮತ್ತು ಬಾಬಾ ಅಪರಾಜಿತ್ 3ನೇ ವಿಕೆಟ್‌ಗೆ 55 ರನ್ ಸೇರಿಸಿದರು. ಆದರೆ 19 ರನ್‌ಗಳ ಅಂತರದಲ್ಲಿ ಇವರಿಬ್ಬರು ಔಟಾದಾಗ ತಂಡ ಸಂಕಷ್ಟಕ್ಕೆ ಸಿಲುಕಿತು.

ನಂತರ ಕೇದಾರ್ ಜಾಧವ್, ವಿಜಯಶಂಕರ್ (45; 33 ಎ, 2 ಸಿ, 4 ಬೌಂ) ಮತ್ತು ಕನ್ನಡಿಗ ಕೃಷ್ಣಪ್ಪ ಗೌತಮ್ (ಅಜೇಯ 35; 10 ಎ, 3 ಸಿ, 3 ಬೌಂ) ಅವರ ಆಟ ರಂಗೇರಿತು. ನಿತೀಶ್ ರಾಣಾ ಜೊತೆ 79 ರನ್‌ ಸೇರಿಸಿದ ಜಾಧವ್ 6ನೇ ವಿಕೆಟ್‌ಗೆ ವಿಜಯಶಂಕರ್ ಜೊತೆ 94 ರನ್‌ ಜೋಡಿಸಿದರು. ಅಂತಿಮ ಓವರ್‌ಗಳಲ್ಲಿ ಗೌತಮ್ ಸ್ಫೋಟಿಸಿ ತಂಡಕ್ಕೆ ಉತ್ತಮ ಮೊತ್ತ ಗಳಿಸಿಕೊಟ್ಟರು.

ವೈಫಲ್ಯ ಕಂಡ ಗಿಲ್‌, ಮಯಂಕ್‌: ಗುರಿ ಬೆನ್ನಟ್ಟಿದ ಭಾರತ ‘ಸಿ’ ನಾಯಕ ಶುಭಮನ್ ಗಿಲ್ ಅವರನ್ನು ಬೇಗನೇ ಕಳೆದುಕೊಂಡಿತು. ನಂತರ ಮಯಂಕ್ ಅಗರವಾಲ್ ಮತ್ತು ಪ್ರಿಯಂ ಗರ್ಗ್ (74; 77 ಎ, 1 ಸಿ, 8 ಬೌಂ) 54 ರನ್‌ಗಳ ಜೊತೆಯಾಟ ಆಡಿದರು. 28 ರನ್ ಗಳಿಸಿದ ಮಯಂಕ್ ಅವರು ನದೀಂ ಎಸೆತದಲ್ಲಿ ಗೌತಮ್‌ಗೆ ಸುಲಭ ಕ್ಯಾಚ್ ನೀಡಿ ಮರಳುವುದರೊಂದಿಗೆ ತಂಡದ ಮೇಲೆ ಆತಂಕದ ಕಾರ್ಮೋಡ ಕವಿಯಿತು.

ನಾಯಕ ದಿನೇಶ್ ಕಾರ್ತಿಕ್ ವಿಕೆಟ್ ಕೂಡ ಉರುಳಿದಾಗ ತಂಡ 5ಕ್ಕೆ 77 ಎಂಬ ಸ್ಥಿತಿಯಲ್ಲಿತ್ತು. ಆದರೆ ಅಕ್ಷರ್ ಪಟೇಲ್ ಮತ್ತು ಗರ್ಗ್ 63 ರನ್‌ಗಳ ಜೊತೆಯಾಟ ಆಡಿ ನಿರೀಕ್ಷೆ ಮೂಡಿಸಿದರು. ಪಟೇಲ್ ಔಟಾದ ನಂತರ ಜಲಜ್ ಸಕ್ಸೇನ ಮತ್ತು ಮಯಂಕ್ ಮಾರ್ಕಂಡೆ ತಂಡದ ಮೊತ್ತವನ್ನು 200 ರನ್‌ ದಾಟಿಸಿದರು. ಆದರೆ ತಂಡವನ್ನು ಸೋಲಿನಿಂತ ಕಾಪಾಡಲು ಈ ಜೋಡಿಗೂ ಸಾಧ್ಯವಾಗಲಿಲ್ಲ.

ಇಶಾನ್ ಪೊರಲ್‌ಗೆ 5 ವಿಕೆಟ್‌: ಭಾರತ ‘ಬಿ’ಗೆ ಆರಂಭದಲ್ಲಿ ಸಂಕಟ ತಂದೊಡ್ಡಿದ ಮಧ್ಯಮ ವೇಗಿ ಇಶಾನ್ ಪೊರೆಲ್ 43ಕ್ಕೆ5 ವಿಕೆಟ್ ಕಬಳಿಸಿ ಮಿಂಚಿದ್ದರು. ಜಲಜ್ ಸಕ್ಸೇನ ಮತ್ತು ಅಕ್ಷರ್ ಪಟೇಲ ತಲಾ ಒಂದೊಂದು ವಿಕೆಟ್ ಕಬಳಿಸಿದರು.

ಶುಭಮನ್‌ ಗಿಲ್ ದಾಖಲೆ
ಸ್ಫೋಟಕ ಬ್ಯಾಟ್ಸ್‌ಮನ್‌ ಶುಭಮನ್ ಗಿಲ್ ಅವರು ದೇವಧರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ತಂಡವೊಂದನ್ನು ಮುನ್ನಡೆಸಿದ ಅತಿ ಕಿರಿಯ ಆಟಗಾರ ಎಂಬ ದಾಖಲೆಯನ್ನು ಸೋಮವಾರ ತಮ್ಮದಾಗಿಸಿಕೊಂಡರು. 20 ವರ್ಷದ ಶುಭಮನ್ ‘ಸಿ’ ತಂಡವನ್ನು ಮುನ್ನಡೆಸುವುದರೊಂದಿಗೆ 10 ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ಮಾಡಿದ್ದ ದಾಖಲೆ ಮುರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT