ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS T20: ಪಾಂಡ್ಯ ಗೆಲುವಿನ ಸಿಕ್ಸರ್; ಭಾರತಕ್ಕೆ ಸ್ಮರಣೀಯ ಸರಣಿ ಗೆಲುವು

Last Updated 6 ಡಿಸೆಂಬರ್ 2020, 12:09 IST
ಅಕ್ಷರ ಗಾತ್ರ

ಸಿಡ್ನಿ: ಭಾನುವಾರ ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆದ ದ್ವಿತೀಯ ಟ್ವೆಂಟಿ-20 ಪಂದ್ಯದಲ್ಲೂ ಟೀಮ್ ಇಂಡಿಯಾ ಆರು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಉಳಿದಿರುವಂತೆಯೇ 2-0ರ ಅಂತರದಲ್ಲಿ ವಶಪಡಿಸಿಕೊಂಡಿದೆ.

195 ರನ್‌ಗಳ ಬೃಹತ್ ಮೊತ್ತ ಬೆನ್ನಟ್ಟಿದ ಭಾರತ ಇನ್ನೆರಡು ಎಸೆತಗಳು ಬಾಕಿ ಉಳಿದಿರುವಂತೆಯೇ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಶಿಖರ್ ಧವನ್ ಬಿರುಸಿನ ಅರ್ಧಶತಕ (52) ಬಾರಿಸಿದರೆ ನಾಯಕ ವಿರಾಟ್ ಕೊಹ್ಲಿ (40) ಹಾಗೂ ಕೊನೆಯ ಹಂತದಲ್ಲಿ ಹಾರ್ದಿಕ್ ಪಾಂಡ್ಯ 22 ಎಸೆತಗಳಲ್ಲಿ ಅಜೇಯ 42 ರನ್ ಗಳಿಸಿ ಭಾರತವನ್ನು ಗೆಲುವಿನ ದಡ ಸೇರಿಸಿದರು.

ಧವನ್, ಕೊಹ್ಲಿ, ಪಾಂಡ್ಯ ಅಬ್ಬರ...
ಬೃಹತ್ ಗುರಿ ಬೆನ್ನಟ್ಟಿದ ಭಾರತಕ್ಕೆ ಉಪನಾಯಕ ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 5.2 ಓವರ್‌ಗಳಲ್ಲಿ 56 ರನ್‌ಗಳ ಜೊತೆಯಾಟ ನೀಡಿದರು.

ಕಳೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಾಧನೆ ಮಾಡಿರುವ ಕೆಎಲ್ ರಾಹುಲ್, 22 ಎಸೆತಗಳಲ್ಲಿ 30 ರನ್ ಗಳಿಸಿ ಛಾಪು ಒತ್ತಿದರು. ಕೆಎಲ್ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ಸೇರಿದ್ದವು.

ರಾಹುಲ್ ಪತನದ ಬಳಿಕ ನಾಯಕ ವಿರಾಟ್ ಕೊಹ್ಲಿ ಜೊತೆಗೂಡಿದ ಶಿಖರ್ ಧವನ್ ತಂಡವನ್ನು ಮುನ್ನಡೆಸಿದರು. ರಾಹುಲ್‌ಗಿಂತಲೂ ವೇಗವಾಗಿ ಬ್ಯಾಟ್ ಬೀಸಿದ ಧವನ್, ಆಸೀಸ್ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸಿದರು.

10 ಓವರ್‌ಗಳ ವೇಳೆಗೆ ಭಾರತದ ಸ್ಕೋರ್ 86/1. ಕೊನೆಯ 60 ಎಸೆತಗಳಲ್ಲಿ ಗೆಲುವಿಗೆ 109 ರನ್‌ಗಳ ಅವಶ್ಯಕತೆಯಿತ್ತು. ಅತ್ತ ಸಮಯೋಚಿತ ಇನ್ನಿಂಗ್ಸ್ ಕಟ್ಟಿದ ಧವನ್ 34 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಆದರೆ ಫಿಫ್ಟಿ ಬೆನ್ನಲ್ಲೇ ವಿಕೆಟ್ ಒಪ್ಪಿಸಿ ಹಿನ್ನೆಡೆ ಅನುಭವಿಸಿದರು. 36 ಎಸೆತಗಳನ್ನು ಎದುರಿಸಿದ ಧವನ್ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳಿಂದ 52 ರನ್ ಗಳಿಸಿದರು.

ಈ ಸಂದರ್ಭದಲ್ಲಿ ಪಂದ್ಯ ರೋಚಕ ಹಂತವನ್ನು ತಲುಪಿತ್ತು. ತಲಾ ಒಂದು ಬೌಂಡರಿ ಸಿಕ್ಸರ್ ಬಾರಿಸಿದರೂ ಸಂಜು ಸ್ಯಾಮ್ಸನ್‌ಗೆ (15) ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ಸಹಜವಾಗಿಯೇ ನಾಯಕ ವಿರಾಟ್ ಕೊಹ್ಲಿ ಮೇಲೆ ಹೆಚ್ಚಿನ ಹೊರೆ ಬಿತ್ತು. ಇನ್ನಿಂಗ್ಸ್‌ನ 15ನೇ ಓವರ್‌ನಲ್ಲಿ ಎರಡು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 18 ರನ್ ಸೊರೆಗೈದ ಕೊಹ್ಲಿ ಭರವಸೆ ಮೂಡಿಸಿದರು.

ಅಂತಿಮ ಐದು ಓವರ್‌ಗಳಲ್ಲಿ ಭಾರತದ ಗೆಲುವಿಗೆ 54 ರನ್‌ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ವಿಕೆಟ್ ಒಪ್ಪಿಸಿದ ವಿರಾಟ್ ಕೊಹ್ಲಿ ನಿರಾಸೆ ಅನುಭವಿಸಿದರು. 24 ಎಸೆತಗಳಲ್ಲಿ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ ಕೊಹ್ಲಿ 40 ರನ್ ಗಳಿಸಿದರು.

ಕೊಹ್ಲಿ ವಿಕೆಟ್ ಪತನದ ಬಳಿಕ ನೆಲಕಚ್ಚಿ ನಿಂತ ಹಾರ್ದಿಕ್ ಪಾಂಡ್ಯ ಹಾಗೂ ಶ್ರೇಯಸ್ ಅಯ್ಯರ್ ಇನ್ನೆರಡು ಎಸೆತಗಳು ಬಾಕಿ ಉಳಿದಿರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂತಿಮ ಓವರ್‌ನಲ್ಲಿ ಭಾರತದ ಗೆಲುವಿಗೆ 14 ರನ್‌ಗಳ ಅಗತ್ಯವಿತ್ತು. ಆದರೆ ಡ್ಯಾನಿಯಲ್ ಸ್ಯಾಮ್ಸ್ ಎಸೆದ ಕೊನೆಯ ಓವರ್‌ನಲ್ಲಿ ಎರಡು ಸಿಕ್ಸರ್ ಬಾರಿಸಿದ ಪಾಂಡ್ಯ, ನೈಜ ಫಿನಿಶರ್ ಎನಿಸಿಕೊಂಡರು.

ಇದರೊಂದಿಗೆ 19.4 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 22 ಎಸೆತಗಳನ್ನು ಎದುರಿಸಿದ ಪಾಂಡ್ಯ ಮೂರು ಬೌಂಡರಿ ಹಾಗೂ ಎರಡು ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 42 ರನ್ ಗಳಿಸಿ ಅಜೇಯರಾಗುಳಿದರು. ಇವರಿಗೆ ತಕ್ಕ ಸಾಥ್ ನೀಡಿದ ಅಯ್ಯರ್ 5 ಎಸೆತಗಳಲ್ಲಿ ತಲಾ ಒಂದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 12 ರನ್ ಗಳಿಸಿ ಔಟಾಗದೆ ಉಳಿದರು.

ವೇಡ್ 25 ಬಾಲ್ ಫಿಫ್ಟಿ; ಭಾರತಕ್ಕೆ 195 ರನ್ ಗುರಿ...
ಈ ಮೊದಲು 'ಮಾಡು ಇಲ್ಲವೇ ಮಡಿ' ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗಿಳಿಸಲ್ಪ ಆಸ್ಟ್ರೇಲಿಯಾ, ನಾಯಕ ಮ್ಯಾಥ್ಯೂ ವೇಡ್ (58) ಬಿರುಸಿನ ಅರ್ಧಶತಕದ ನೆರವಿನಿಂದ ನಿರ್ಧಾರಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 194 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.

ನಾಯಕ ಆ್ಯರನ್ ಫಿಂಚ್ ಅನುಪಸ್ಥಿತಿಯಲ್ಲಿ ಡಾರ್ಸಿ ಶಾಟ್ ಜೊತೆಗೆ ಆರಂಭಿಕನಾಗಿ ಕಣಕ್ಕಿಳಿದ ಮ್ಯಾಥ್ಯೂ ವೇಡ್ ತಂಡಕ್ಕೆ ಬಿರುಸಿನ ಆರಂಭವೊದಗಿಸಿದರು. ಭಾರತೀಯ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸಿದ ವೇಡ್ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು.

ಇವರಿಬ್ಬರು ಮೊದಲ ವಿಕೆಟ್‌ಗೆ 4.3 ಓವರ್‌ಗಳಲ್ಲೇ 47 ರನ್‌ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ ದಾಳಿಗಿಳಿದ ಎಡಗೈ ವೇಗದ ಬೌಲರ್ ತಂಗರಸು ನಟರಾಜನ್, ಡಾರ್ಸಿ ಶಾರ್ಟ್ (9) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಇನ್ನೊಂದೆಡೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ವೇಡ್ 25 ಎಸೆತಗಳಲ್ಲೇ ಅರ್ಧಶತಕ ಸಾಧನೆ ಮಾಡಿದರು. ಈ ಮೂಲಕ ತಮಗೆ ನೀಡಿರುವ ಹೆಚ್ಚುವರಿ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರು. ಅದರೆ ರನೌಟ್‌ಗೆ ಬಲಿಯಾಗುವ ಮೂಲಕ ಪೆವಿಲಿಯನ್‌ಗೆ ಹೆಜ್ಜೆ ಹಾಕಬೇಕಾಯಿತು. ಡಾರ್ಸಿ ಶಾರ್ಟ್ ಪತನದ ವೇಳೆಯಲ್ಲಿ ಆಸೀಸ್ ಎಂಟು ಓವರ್‌ಗಳಲ್ಲಿ 75 ರನ್ ಪೇರಿಸಿತ್ತು. 32 ಎಸೆತಗಳನ್ನು ಎದುರಿಸಿದ ಶಾರ್ಟ್ 10 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 58 ರನ್ ಗಳಿಸಿದರು.

ಈ ಹಂತದಲ್ಲಿ ಜೊತೆಗೂಡಿದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಉತ್ತಮ ಆವೇಗದೊಂದಿಗೆ ರನ್ ಪೇರಿಸತೊಡಗಿದರು. ಮ್ಯಾಕ್ಸ್‌ವೆಲ್ ಹೊರದಬ್ಬಿದ ಶಾರ್ದೂಲ್ ಠಾಕೂರ್ ಕೊನೆಗೂ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. 13 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್ ಎರಡು ಸಿಕ್ಸರ್‌ಗಳಿಂದ 22 ರನ್ ಗಳಿಸಿದರು.

ಕೊನೆಯ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಸ್ಟೀವನ್ ಸ್ಮಿತ್ ಹಾಗೂ ಮೊಯಿಸೆಸ್ ಹೆನ್ರಿಕ್ಸ್ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು. ಕೇವಲ ನಾಲ್ಕು ರನ್‌ಗಳಿಂದ ಅರ್ಧಶತಕ ವಂಚಿತರಾದ ಸ್ಮಿತ್ 38 ಎಸೆತಗಳಲ್ಲಿ 13 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳಿಂದ 46 ರನ್ ಗಳಿಸಿದರು.

ಅಂತಿಮವಾಗಿ ಆಸೀಸ್ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 194 ರನ್‌ಗಳ ಬೃಹತ್ ಮೊತ್ತ ಪೇರಿಸಿತು. 18 ಎಸೆತಗಳನ್ನು ಎದುರಿಸಿದ ಹೆನ್ರಿಕ್ಸ್ ಸಿಕ್ಸರ್ ನೆರವಿನಿಂದ 26 ರನ್ ಗಳಿಸಿದರು. ಇನ್ನುಳಿದಂತೆ ಮಾರ್ಕಸ್ ಸ್ಟೋಯಿನಿಸ್ (16*) ಹಾಗೂ ಡ್ಯಾನಿಯಲ್ ಸ್ಯಾಮ್ಸ್ (8*) ರನ್ ಗಳಿಸಿದರು.

ಭಾರತದ ಪರ ತಂಗರಸು ನಟರಾಜನ್ ಹೊರತುಪಡಿಸಿ ಬಹುತೇಕ ಎಲ್ಲ ಬೌಲರ್‌ಗಳು ದುಬಾರಿಯೆನಿಸಿದರು. ನಟರಾಜನ್ 20 ರನ್ ಮಾತ್ರ ಬಿಟ್ಟುಕೊಟ್ಟು ಎರಡು ಪ್ರಮುಖ ವಿಕೆಟ್‌ಗಳನ್ನು ಪಡೆದು ಮಿಂಚಿದರು. ಕಳೆದ ಪಂದ್ಯದ ಹೀರೊ ಯಜುವೇಂದ್ರ ಚಹಲ್ ಒಂದು ವಿಕೆಟ್ ಪಡೆದರೂ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 51 ರನ್ ಬಿಟ್ಟುಕೊಟ್ಟು ಸಾಕಷ್ಟು ದಂಡಿಸಿಕೊಂಡರು.

ಶಾರ್ದೂಲ್, ಶ್ರೇಯಸ್ ಇನ್; ಭಾರತ ಫೀಲ್ಡಿಂಗ್
ಈ ಮುನ್ನ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ಭಾರತ ತಂಡದಲ್ಲಿ ಪ್ರಮುಖವಾಗಿ ಮೂರು ಬದಲಾವಣೆಗಳನ್ನು ತರಲಾಗಿದೆ. ಗಾಯದಿಂದಾಗಿ ವಿಶ್ರಾಂತಿಯಲ್ಲಿರುವ ರವೀಂದ್ರ ಜಡೇಜಾ ಸ್ಥಾನದಲ್ಲಿ ಯಜುವೇಂದ್ರ ಚಹಲ್ ಕಾಣಿಸಿಕೊಂಡಿದ್ದಾರೆ. ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿಗೆ ವಿಶ್ರಾಂತಿ ಒದಗಿಸಲಾಗಿದ್ದು, ಇವರ ಸ್ಥಾನವನ್ನು ಶಾರ್ದೂಲ್ ಠಾಕೂರ್ ಪಡೆದಿದ್ದಾರೆ. ಹಾಗೆಯೇ ಮಧ್ಯಮ ಕ್ರಮಾಂಕದಲ್ಲಿ ಮನೀಷ್ ಪಾಂಡೆ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ ಆಯ್ಕೆಯಾಗಿದ್ದಾರೆ.

ಕ್ಯಾನ್‌ಬೆರಾದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ 11 ರನ್ ಅಂತರದ ಗೆಲುವು ದಾಖಲಿಸಿತ್ತು. ಕಂಕಷನ್ ಬದಲಿ ಆಟಗಾರನ ರೂಪದಲ್ಲಿ ಕಣಕ್ಕಿಳಿದಿದ್ದ ಯಜುವೇಂದ್ರ ಚಹಲ್ ಟೀಮ್ ಇಂಡಿಯಾ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅತ್ತ ಹೆಲ್ಮೆಟ್‌ಗೆ ಚೆಂಡು ಅಪ್ಪಳಿಸಿದ ಪರಿಣಾಮ ಗಾಯಕ್ಕೆ ತುತ್ತಾಗಿರುವ ರವೀಂದ್ರ ಜಡೇಜ ಸೇವೆಯಿಂದ ಟೀಮ್ ಇಂಡಿಯಾ ವಂಚಿತವಾಗಿದೆ.

ಫಿಂಚ್, ಸ್ಟಾರ್ಕ್ ಅನುಪಸ್ಥಿತಿ; ವೇಡ್ ನಾಯಕ
ಅತ್ತ ಆಸ್ಟ್ರೇಲಿಯಾ ತಂಡದಲ್ಲಿ ಗಾಯದ ಸಮಸ್ಯೆ ಎದುರಿಸುತ್ತಿರುವ ಆ್ಯರನ್ ಫಿಂಚ್ ಅನುಪಸ್ಥಿತಿ ಎದ್ದು ಕಾಣಿಸಿದೆ. ಈ ಹಿನ್ನೆಲೆಯ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅದೇ ರೀತಿ ವೈಯಕ್ತಿಕ ಕಾರಣಗಳಿಂದಾಗಿ ಮಿಚೆಲ್ ಸ್ಟಾರ್ಕ್ ಸೇವೆಯಿಂದಲೂ ಆಸೀಸ್ ವಂಚಿತವಾಗಿದೆ. ಜೋಶ್ ಹ್ಯಾಜಲ್‌ವುಡ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇವರೆಲ್ಲರ ಸ್ಥಾನಕ್ಕೆ ಡ್ಯಾನಿಯಲ್ ಸ್ಯಾಮ್ಸ್, ಮಾರ್ಕಸ್ ಸ್ಟೋಯಿನಿಸ್ ಹಾಗೂ ಆಂಡ್ರ್ಯೂ ಟೈ ಅವರನ್ನು ಆಯ್ಕೆ ಮಾಡಲಾಗಿದೆ.

ಆಡುವ ಬಳಗ ಇಂತಿದೆ:

ಭಾರತ: ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಟಿ ನಟರಾಜನ್, ಯಜುವೇಂದ್ರ ಚಹಲ್

ಆಸ್ಟ್ರೇಲಿಯಾ: ಡಾರ್ಸಿ ಶಾರ್ಟ್, ಮಾರ್ಕಸ್ ಸ್ಟೋಯಿನಿಸ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮೊಯಿಸೆಸ್ ಹೆನ್ರಿಕ್ಸ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್, ನಾಯಕ), ಡ್ಯಾನಿಯಲ್ ಸ್ಯಾಮ್ಸ್, ಸೀನ್ ಅಬಾಟ್, ಮಿಚೆಲ್ ಸ್ವೆಪ್ಸನ್, ಆ್ಯಡಂ ಜಂಪಾ ಮತ್ತು ಆಂಡ್ರ್ಯೂ ಟೈ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT