ಸೋಮವಾರ, ಸೆಪ್ಟೆಂಬರ್ 20, 2021
22 °C
ಭಾರತ–ಇಂಗ್ಲೆಂಡ್ ಮೊದಲ ಟೆಸ್ಟ್ ಇಂದಿನಿಂದ: ಕೆ.ಎಲ್. ರಾಹುಲ್‌ಗೆ ಅವಕಾಶ ಸಾಧ್ಯತೆ

ಇಂಗ್ಲೆಂಡ್: ವಿರಾಟ್ ನಾಯಕತ್ವಕ್ಕೆ ಸವಾಲಿನ ಸರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಟಿಂಗ್‌ಹ್ಯಾಮ್: ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಸವಾಲೊಡ್ಡುವ ಟೆಸ್ಟ್ ಸರಣಿ ಬುಧವಾರದಿಂದ ಇಲ್ಲಿ ಆರಂಭವಾಗಲಿದೆ.

ಇಂಗ್ಲೆಂಡ್ ವಿರುದ್ಧದ  ಐದು ಪಂದ್ಯಗಳ ಸರಣಿಯು ವಿರಾಟ್ ನಾಯಕತ್ವ ಮತ್ತು ಬ್ಯಾಟಿಂಗ್ ಎರಡರ ಪರೀಕ್ಷೆಯ ವೇದಿಕೆಯೂ ಆಗುವ ಸಾಧ್ಯತೆ ಇದೆ. ಹೋದ ತಿಂಗಳು ನಡೆದಿದ್ದ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ (ಡಬ್ಲ್ಯುಟಿಸಿ) ಫೈನಲ್‌ನಲ್ಲಿ ಭಾರತ ತಂಡವು ನ್ಯೂಜಿಲೆಂಡ್ ಎದುರು ಸೋತಿತ್ತು. ಆಗ ವಿರಾಟ್ ನಾಯಕತ್ವದಲ್ಲಿ ಐಸಿಸಿ ಯ ಪ್ರಮುಖ ಟೂರ್ನಿಗಳಾದ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿಗಳಲ್ಲಿ ಇದುವರೆಗೆ ಜಯಿಸಿಲ್ಲ ಎಂಬ ಟೀಕೆಗಳು ಕೇಳಿಬಂದಿದ್ದವು. 

ಅಲ್ಲದೇ ಆ ಪಂದ್ಯದಲ್ಲಿ ಅಂತಿಮ ಹನ್ನೊಂದರ ಬಳಗದ ಆಯ್ಕೆಯೂ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮತ್ತೊಮ್ಮೆ ಈ ವಿಷಯದಲ್ಲಿ ವಿರಾಟ್ ನಿಲುವಿನ ಬಗ್ಗೆ ಕುತೂಹಲ ಗರಿಗೆದರಿದೆ.  ಶುಭಮನ್ ಗಿಲ್ ಗಾಯಗೊಂಡು ಹೊರಗುಳಿದಿರುವುದರಿಂದ ರೋಹಿತ್ ಶರ್ಮಾ ಅವರೊಂದಿಗೆ ಇನಿಂಗ್ಸ್ ಆರಂಭಿಸುವ ಹೊಣೆ ಅನುಭವಿ ಕೆ.ಎಲ್. ರಾಹುಲ್‌ಗೆ ಸಿಗುವ ಸಾಧ್ಯತೆ ಇದೆ. ಮಯಂಕ್ ಅಗರ್‌ವಾಲ್ ಕೂಡ ಕಂಕಷನ್‌ನಿಂದಾಗಿ (ತಲೆಗೆ ಚೆಂಡು ಬಡಿದು ಪೆಟ್ಟು) ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಬಂಗಾಳದ ಬ್ಯಾಟ್ಸ್‌ಮನ್ ಅಭಿಮನ್ಯು ಈಶ್ವರನ್  ಹೋದ ವರ್ಷ ಮಾರ್ಚ್‌ನಲ್ಲಿ ದೇಶಿ ಟೂರ್ನಿಯಲ್ಲಿ ಆಡಿದ್ದರು. ಆದ್ದರಿಂದ ಅವರಿಗೆ ಈ ಮಹತ್ವದ ಪಂದ್ಯದಲ್ಲಿ ಸ್ಥಾನ ನೀಡುವ ಬಗ್ಗೆ ಕೊಹ್ಲಿ ಎರಡು ಬಾರಿ ಯೋಚಿಸುವುದು ಖಚಿತ. ಚೇತೇಶ್ವರ್ ಪೂಜಾರ ಮತ್ತು ಹನುಮವಿಹಾರಿ ಮಧ್ಯಕ್ರಮಾಂಕದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಈಚೆಗಷ್ಟೇ ಕೋವಿಡ್‌ನಿಂದ ಚೇತರಿಸಿಕೊಂಡು ಬಂದಿರುವ ರಿಷಭ್ ಪಂತ್ ಅವರ ಫಿಟ್‌ನೆಸ್‌ ಚೆನ್ನಾಗಿದ್ದರೆ ಮಾತ್ರ ಅವಕಾಶ ಪಡೆಯುವರು. ಇಲ್ಲದಿದ್ದರೆ ವೃದ್ಧಿಮಾನ್ ಸಹಾಗೆ ವಿಕೆಟ್‌ಕೀಪಿಂಗ್ ಹೊಣೆ ಲಭಿಸಬಹುದು.

ಸ್ಪಿನ್ನರ್ ಆರ್. ಅಶ್ವಿನ್ ಜೊತೆಗೆ ಆಲ್‌ರೌಂಡರ್ ರವೀಂದ್ರ ಜಡೇಜ ಕಣಕ್ಕಿಳಿಯುವುದು ಬಹುತೇಕ ಖಚಿತ.  ಬೆನ್ನುನೋವಿನಿಂದ ಬಳಲುತ್ತಿರುವ ಜಸ್‌ಪ್ರೀತ್ ಬೂಮ್ರಾ ಆಡುವುದು ಖಚಿತವಾಗಿಲ್ಲ. ಆದ್ದರಿಂದ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಅವರಲ್ಲೊಬ್ಬರು ಸ್ಥಾನ ಪಡೆಯಬಹುದು.

ಜೋ ರೂಟ್ ಬಳಗವು ಈಚೆಗೆ ಭಾರತ ಪ್ರವಾಸದಲ್ಲಿ ಅನುಭವಿಸಿದ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುವ ಛಲದಲ್ಲಿದೆ. ಅದಕ್ಕಾಗಿ  ಹಸಿರು ಗರಿಕೆಗಳಿರುವ ಪಿಚ್‌ನಲ್ಲಿ ಕೊಹ್ಲಿ ಪಡೆಯನ್ನು ಕಾಡಲು ವೇಗಿಗಳ ಪಡೆಯನ್ನು ಕಣಕ್ಕಿಳಿಸುತ್ತಿದ್ದಾರೆ.  ಆದರೆ ಆಲ್‌ರೌಂಡರ್ ಬೆನ್ ಸ್ಟೋಕ್ಸ್‌ ಅಲಭ್ಯರಾಗಿರುವುದು ತಂಡಕ್ಕೆ ಚಿಂತೆಯ ವಿಷಯ. ಯುವ  ಬ್ಯಾಟ್ಸ್‌ಮನ್‌ಗಳ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ಎರಡನೇ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಆರಂಭಿಕ ಸರಣಿಯೂ ಇದಾಗಿದ್ದು, ಉಭಯ ತಂಡಗಳು ಗೆಲುವಿನೊಂದಿಗೆ ಅಭಿಯಾನ ಆರಂಭಿಸುವ ಛಲದಲ್ಲಿವೆ.

ತಂಡಗಳು:

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ(ಉಪನಾಯಕ), ಹನುಮವಿಹಾರಿ, ರಿಷಭ್ ಪಂತ್ (ವಿಕೆಟ್‌ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಜಸ್‌ಪ್ರೀತ್ ಬೂಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಕೆ.ಎಲ್. ರಾಹುಲ್, ವೃದ್ಧಿಮಾನ್ ಸಹಾ (ವಿಕೆಟ್‌ಕೀಪರ್),  ಅಭಿಮನ್ಯು ಈಶ್ವರನ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್.

ಇಂಗ್ಲೆಂಡ್: ಜೋ  ರೂಟ್ (ನಾಯಕ), ಜೇಮ್ಸ್ ಆ್ಯಂಡರ್ಸನ್, ಜಾನಿ ಬೆಸ್ಟೊ, ಡಾಮ್ ಬೆಸ್, ಸ್ಟುವರ್ಟ್ ಬ್ರಾಡ್, ರೊರಿ ಬರ್ನ್ಸ್, ಜೋಸ್ ಬಟ್ಲರ್, ಜ್ಯಾಕ್ ಕ್ರಾಲಿ, ಸ್ಯಾಮ್ ಕರನ್, ಹಸೀಬ್ ಹಮೀದ್, ಡ್ಯಾನ್ ಲಾರೆನ್ಸ್, ಜ್ಯಾಕ್ ಲೀಚ್, ಒಲಿ ಪೊಪ್, ಒಲಿ ರಾಬಿನ್ಸನ್, ಡಾಮ್ ಸಿಬ್ಲಿ, ಮಾರ್ಕ್ ವುಡ್.

ಪಂದ್ಯ ಆರಂಭ: ಮಧ್ಯಾಹ್ನ 3.30 (ಭಾರತೀಯ ಕಾಲಮಾನ)

ನೇರಪ್ರಸಾರ:

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು