ನವದೆಹಲಿ: ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿರುವ ಬಿಸಿಸಿಐ, ಕಳೆದ ವರ್ಷದ ಐಪಿಎಲ್ ಟೂರ್ನಿಯಿಂದ ₹ 2,429 ಕೋಟಿ ಆದಾಯ ಗಳಿಸಿದೆ ಎಂದು ಮಂಡಳಿ ಬಿಡುಗಡೆಗೊಳಿಸಿದ ಹಣಕಾಸು ದಾಖಲೆಗಳು ತಿಳಿಸಿವೆ.
2008 ರಲ್ಲಿ ಆರಂಭವಾದ ಐಪಿಎಲ್, ಮಾಧ್ಯಮ ಹಕ್ಕುಗಳ ಮಾರಾಟ ಸೇರಿದಂತೆ ವಿವಿಧ ಮೂಲಗಳಿಂದ ಬಿಸಿಸಿಐಗೆ ಭಾರಿ ಆದಾಯ ತಂದುಕೊಡುತ್ತಿದೆ.
2017ರಿಂದ 2022ರ ವರೆಗೆ ಬಿಸಿಸಿಐ ಗಳಿಸಿರುವ ಆದಾಯದ ವಿವರಗಳನ್ನು ಮಂಡಳಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. 2017ರ ಬಳಿಕ ಬಿಸಿಸಿಐ ತನ್ನ ಹಣಕಾಸಿನ ವಿವರವಾದ ವರದಿಯನ್ನು ಬಹಿರಂಗಪಡಿಸಿದ್ದು ಇದೇ ಮೊದಲು.
2022ರ ಏಪ್ರಿಲ್‌ಗೆ ಅಂತ್ಯಗೊಳ್ಳುವ ಹಿಂದಿನ ಐದು ವರ್ಷಗಳಲ್ಲಿ ಮಂಡಳಿಯು ₹32 ಸಾವಿರ ಕೋಟಿಗೂ ಅಧಿಕ ಆದಾಯ ಗಳಿಸಿದೆ ಎಂಬ ವಿವರ ವರದಿಯಲ್ಲಿದೆ.
ಕಳೆದ ವರ್ಷ (2022) ನಡೆದ ಐಪಿಎಲ್ ಟೂರ್ನಿಯಿಂದ ಮಂಡಳಿ ಒಟ್ಟು ₹ 6,414 ಕೋಟಿ ವರಮಾನ ಗಳಿಸಿದೆ. ಟೂರ್ನಿಯ ಆಯೋಜನೆಗೆ ₹ 3,985 ಕೋಟಿ ಖರ್ಚಾಗಿದ್ದು, ₹2,429 ಕೋಟಿ ನಿವ್ವಳ ಲಾಭ ಗಳಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ 2023ರಿಂದ 2027ರವರೆಗಿನ ಪ್ರಸಾರ ಹಕ್ಕುಗಳ ಮಾರಾಟದಿಂದ ಬಿಸಿಸಿಐ ₹ 48 ಸಾವಿರ ಕೋಟಿ ಗಳಿಸಿತ್ತು. ಈ ಹರಾಜು ಪ್ರಕ್ರಿಯೆ 2022ರ ಜೂನ್‌ನಲ್ಲಿ ನಡೆದಿತ್ತು. ಅದೇ ರೀತಿ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಮುಂದಿನ ಐದು ವರ್ಷಗಳ ಪ್ರಸಾರ ಹಕ್ಕುಗಳ ಮಾರಾಟದಿಂದ ₹ 951 ಕೋಟಿ ಗಳಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.