ಶುಕ್ರವಾರ, ಏಪ್ರಿಲ್ 10, 2020
19 °C

ಕೊರೊನಾವೈರಸ್ ಭೀತಿ ನಡುವೆ ಪಾರ್ಟಿ: ಅವಿವೇಕಿಗಳಿಂದಾಗಿ ಹೋರಾಟ ವ್ಯರ್ಥ ಎಂದ ಬೋಗ್ಲೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಗುಂಪು ಸೇರಿ ವಿನೋದ ಕೂಟಗಳನ್ನು (ಪಾರ್ಟಿ) ನಡೆಸುವವರ ವಿರುದ್ಧ ಭಾರತದ ಕ್ರಿಕೆಟ್‌ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಕಿಡಿ ಕಾರಿದ್ದಾರೆ.

ಇತ್ತೀಚೆಗೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದ ಔತಣಕೂಟದಲ್ಲಿ ಭಾಗವಹಿಸಿದ್ದ ಬಾಲಿವುಡ್‌ ಗಾಯಕಿ ಕನಿಕಾ ಕಪೂರ್‌ (41) ಅವರಿಗೆ ಸೋಂಕು ಇರುವುದು ಶುಕ್ರವಾರ ದೃಢಪಟ್ಟಿತ್ತು. ಇದೇ ಕಾರ್ಯಕ್ರಮದಲ್ಲಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ, ಅವರ ಮಗ ಸಂಸದ ದುಷ್ಯಂತ್‌ ಸಿಂಗ್‌ ಹಾಗೂ ಉತ್ತರ ಪ್ರದೇಶದ ಆರೋಗ್ಯ ಸಚಿವ ಜೈ ಪ್ರತಾಪ್‌ ಸಿಂಗ್‌ ಸೇರಿ ನೂರಕ್ಕೂ ಹೆಚ್ಚು ಗಣ್ಯರು ಭಾಗವಹಿಸಿದ್ದರು. ಸಭೆ ಬಳಿಕ ದುಷ್ಯಂತ್‌ ಸಂಸತ್ತಿಗೂ ತೆರಳಿದ್ದರು.

ಇದನ್ನೂ ಓದಿ: ಕೊರೊನಾ ಸೋಂಕಿತ ಬಾಲಿವುಡ್ ಗಾಯಕಿ ಜತೆ ಸಭೆ: ಪ್ರತ್ಯೇಕವಾಸಕ್ಕೆ ಮುಂದಾದ ಉಪ್ರ ಸಚಿವ

ಭಾರತದಲ್ಲಿ ಸದ್ಯ ಸೋಂಕಿತರ ಸಂಖ್ಯೆ 258ಕ್ಕೆ ಏರಿಕೆಯಾಗಿದೆ. ಹೀಗಾಗಿ ಪಾರ್ಟಿ ಮಾಡುವವರ ವಿರುದ್ಧ ಹರಿಹಾಯ್ದಿರುವ ಬೋಗ್ಲೆ, ‘ಸಾಕಷ್ಟು ಜನರು ಕೊರೊನಾ ವೈರಸ್‌ ಸೋಂಕು ತಡೆಗಾಗಿ ಕಠಿಣ ಪ್ರಯತ್ನ ಮಾಡುತ್ತಿರುವಾಗ, ಸೋಂಕು ಪೀಡಿತ ಪ್ರದೇಶಗಳಿಂದ ಬಂದ ಕೆಲ ವಿದ್ಯಾವಂತ ಮೂರ್ಖರು ಪಾರ್ಟಿಗಳಿಗೆ ಹಾಜರಾಗುತ್ತಿರುವುದು ತುಂಬಾ ನಿರಾಶಾದಾಯಕವಾದುದು’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಲಕ್ಷಾಂತರ ಜನರು ಸರಿಯಾದದ್ದನ್ನು ಮಾಡಬಲ್ಲರು. ಆದರೆ, ಕೆಲವು ಅವಿವೇಕಿಗಳು ಅವರ ಹೋರಾಟವನ್ನು ವ್ಯರ್ಥ ಮಾಡುತ್ತಿದ್ದಾರೆ. ನಾವು ಜಾಗರೂಕರಾಗಿರೋಣ. ಒಗ್ಗಟ್ಟಾಗಿ ಇರೋಣ’ ಎಂದು ಕರೆ ನೀಡಿದ್ದಾರೆ.

ಕೋವಿಡ್‌–19 ಸೋಂಕಿನ ಬಗ್ಗೆ ಎಚ್ಚರದಿಂದ ಇರುವಂತೆ ಮನವಿ ಮಾಡಿರುವ ಪ್ರಧಾನಿ ಮೋದಿ, ಭಾನುವಾರ ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ. ಇದಕ್ಕೆ ರಾಜ್ಯದಲ್ಲೂ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಭಾನುವಾರ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ರಾಜ್ಯ ಸಂಪೂರ್ಣ ಸ್ಥಗಿತವಾಗುವ ಸಾಧ್ಯತೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು