ಕೆ.ಎಲ್‌. ರಾಹುಲ್‌ಗೆ ನಾಯಕತ್ವದ ‘ಟೆಸ್ಟ್‌’

7
ಭಾರತ ‘ಎ’– ಇಂಗ್ಲೆಂಡ್‌ ಲಯನ್ಸ್‌ ನಡುವಿನ ಟೆಸ್ಟ್‌ ಪಂದ್ಯ ಇಂದಿನಿಂದ

ಕೆ.ಎಲ್‌. ರಾಹುಲ್‌ಗೆ ನಾಯಕತ್ವದ ‘ಟೆಸ್ಟ್‌’

Published:
Updated:
Prajavani

ಮೈಸೂರು: ಭಾರತ ‘ಎ’ ಮತ್ತು ಇಂಗ್ಲೆಂಡ್‌ ಲಯನ್ಸ್‌ ತಂಡಗಳ ನಡುವಿನ ಕ್ರಿಕೆಟ್‌ ಟೆಸ್ಟ್‌ (ಚತುರ್ದಿನ) ಪಂದ್ಯ ಇಲ್ಲಿನ ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾಗಲಿದ್ದು, ತುರುಸಿನ ಪೈಪೋಟಿ ನಿರೀಕ್ಷಿಸಲಾಗಿದೆ.

ಕೇರಳದ ವಯನಾಡಿನಲ್ಲಿ ಕಳೆದ ವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಜಯದ ಅವಕಾಶ ಕಳೆದುಕೊಂಡಿದ್ದ ಆತಿಥೇಯರು ಈ ಪಂದ್ಯ ಗೆದ್ದು ಸರಣಿ ತಮ್ಮದಾಗಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ವಯನಾಡಿನಲ್ಲಿ ನಡೆದಿದ್ದ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತ್ತು. ಈ ಪಂದ್ಯದಲ್ಲಿ ಪ್ರಿಯಾಂಕ್‌ ಪಾಂಚಾಲ್‌ ಅವರು ದ್ವಿಶತಕ (206) ಹಾಗೂ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಕೆ.ಎಸ್‌.ಭರತ್‌ ಶತಕದ (142) ಮೂಲಕ ಮಿಂಚಿದ್ದರು. ಇಲ್ಲಿಯೂ ಮಿಂಚುವ ನಿರೀಕ್ಷೆ ಇದೆ.

ರಾಹುಲ್‌ಗೆ ಮಹತ್ವದ ಪಂದ್ಯ: ಭಾರತ ‘ಎ’ ತಂಡವನ್ನು ರಾಜ್ಯದ ಆಟಗಾರ ಕೆ.ಎಲ್‌.ರಾಹುಲ್‌ ಮುನ್ನಡೆಸಲಿದ್ದು, ಈ ಪಂದ್ಯ ಅವರಿಗೆ ಮಹತ್ವದ್ದೆನಿಸಿದೆ. ಬ್ಯಾಟಿಂಗ್‌ ಲಯ ಮರಳಿ ಪಡೆಯಲು ಮತ್ತು ವಿವಾದದ ಕಹಿಯನ್ನು ಮರೆಯಲು ದೊಡ್ಡ ಇನಿಂಗ್ಸ್‌ನ ಅಗತ್ಯವಿದೆ. ಗ್ಲೇಡ್ಸ್‌ನಲ್ಲಿ ಅವರು ರನ್‌ಗಳ ಚಿತ್ತಾರ ಬಿಡಿಸುವರೇ ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳದ್ದು. ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ನಡೆದಿದ್ದ ಟೆಸ್ಟ್‌ ಸರಣಿಯಲ್ಲಿ ರಾಹುಲ್‌ ವೈಫಲ್ಯ ಅನುಭವಿಸಿದ್ದರು. ಟಿವಿ ಕಾರ್ಯಕ್ರಮವೊಂದರಲ್ಲಿ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕೆ ಬಿಸಿಸಿಐ ಕೆಲದಿನಗಳ ಮಟ್ಟಿಗೆ ಅವರನ್ನು ಅಮಾನತು ಮಾಡಿತ್ತು.

ಅಮಾನತು ಹಿಂಪಡೆದ ಬಳಿಕ ಕಣಕ್ಕಿಳಿದಿದ್ದ ಅವರು ಇಂಗ್ಲೆಂಡ್‌ ಲಯನ್ಸ್‌ ವಿರುದ್ಧದ ಏಕದಿನ ಸರಣಿಯ ಕೊನೆಯ ಮೂರು ಪಂದ್ಯಗಳಲ್ಲಿ ಆಡಿದ್ದರೂ ದೊಡ್ಡ ಮೊತ್ತ ಕಲೆಹಾಕಿರಲಿಲ್ಲ. ಆದರೆ ವಯನಾಡಿನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ 89 ರನ್‌ ಗಳಿಸಿ ಭರವಸೆ ಮೂಡಿಸಿದ್ದರು.

ಕೋಚ್‌ ರಾಹುಲ್‌ ದ್ರಾವಿಡ್‌ ಮಾರ್ಗದರ್ಶನದಲ್ಲಿ ಭಾರತ ‘ಎ’ ತಂಡದ ಆಟಗಾರರು ಮಂಗಳವಾರ ಕಠಿಣ ಅಭ್ಯಾಸ ನಡೆಸಿದರು. ಹಿರಿಯ ಕ್ರಿಕೆಟಿಗ ಮತ್ತು ಐಸಿಸಿ ರೆಫರಿ ಜಾವಗಲ್‌ ಶ್ರೀನಾಥ್‌ ಅವರೂ ಕೆಲಹೊತ್ತು ಆಟಗಾರರ ಜತೆಗಿದ್ದರು.

ಇಂಗ್ಲೆಂಡ್‌ನಿಂದ ಪೈಪೋಟಿ ನಿರೀಕ್ಷೆ: ಸ್ಯಾಮ್‌ ಬಿಲ್ಲಿಂಗ್ಸ್‌ ನೇತೃತ್ವದ ಇಂಗ್ಲೆಂಡ್‌ ತಂಡ ಪ್ರತಿಭಾನ್ವಿತ ಆಟಗಾರರನ್ನು ಒಳಗೊಂಡಿದ್ದು, ಆತಿಥೇಯರಿಗೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ. ಮೊದಲ ಪಂದ್ಯದ ಎರಡೂ ಇನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ್ದ ಸ್ಯಾಮುಯೆಲ್‌ ಹೈನ್ ಅಲ್ಲದೆ ಬೆನ್‌ ಡಕೆಟ್, ವಿಲಿಯಂ ಜಾಕ್ಸ್‌ ಅವರು ಬ್ಯಾಟಿಂಗ್‌ ವಿಭಾಗಕ್ಕೆ ಬಲ ತುಂಬಲಿದ್ದಾರೆ.

ದಿನದಾಟದ ಆರಂಭ: ಬೆಳಿಗ್ಗೆ 9.30ಕ್ಕೆ

***

ಎದುರಾಳಿ ತಂಡದ ಶಕ್ತಿ, ದೌರ್ಬಲ್ಯಗಳನ್ನು ಅರಿತಿದ್ದೇವೆ. ಈ ಪಂದ್ಯ ಗೆದ್ದು ಸರಣಿ ಕೈವಶಪಡಿಸಿಕೊಳ್ಳುವುದು ನಮ್ಮ ಗುರಿ.

ಪ್ರಿಯಾಂಕ್‌ ಪಾಂಚಾಲ್ , ಭಾರತ ತಂಡದ ಆಟಗಾರ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !